ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಕ್ಷೇತ್ರದಿಂದ ಶೋಷಣೆ ಮುಕ್ತ ಸಮಾಜ

ತರಬೇತಿಯಲ್ಲಿ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಗಂಗಣ್ಣ ಹೇಳಿಕೆ
Last Updated 7 ಸೆಪ್ಟೆಂಬರ್ 2019, 13:31 IST
ಅಕ್ಷರ ಗಾತ್ರ

ಕೋಲಾರ: ‘ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸಹಕಾರ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು’ ಎಂದು ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಎನ್.ಗಂಗಣ್ಣ ಅಭಿಪ್ರಾಯಪಟ್ಟರು.

ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಡಿಸಿಸಿ ಬ್ಯಾಂಕ್‌ ಸಹಯೋಗದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸಹಕಾರ ಕ್ಷೇತ್ರದ ಇತಿಹಾಸ ಅರಿತು ಕೆಲಸ ಮಾಡಬೇಕು. ಪರಸ್ಪರ ಸಮನ್ವಯದಿಂದ ಮುನ್ನಡೆದಾಗ ಮಾತ್ರ ಸಂಘಗಳು ಅಭಿವೃದ್ಧಿಯಾಗುತ್ತವೆ. ಕೋಲಾರ ಡಿಸಿಸಿ ಬ್ಯಾಂಕ್‌ನ ಮೇಲೆ ಈ ಹಿಂದೆ ದೊಡ್ಡ ಅಪವಾದವಿತ್ತು. ಹೊಸ ಆಡಳಿತ ಮಂಡಳಿಯ ಪರಿಶ್ರಮದಿಂದ ಇದೀಗ ಬ್ಯಾಂಕ್ ಪ್ರಗತಿ ಪಥದಲ್ಲಿ ಸಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಗ್ರಾಮೀಣ ಭಾಗದ ರೈತರು, ಮಹಿಳೆಯರು ಮತ್ತು ನಿರುದ್ಯೋಗಿಗಳನ್ನು ಸ್ವಾವಲಂಬಿಗಳಾಗಿ ಮಾಡಿ ಜೀವನ ನಿರ್ವಹಣೆಗೆ ಶಕ್ತಿ ತುಂಬುವುದು ಸಹಕಾರ ಕ್ಷೇತ್ರದ ಧ್ಯೇಯ. ರಾಜ್ಯದಲ್ಲಿ 5,400 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, ರೈತರ ಕಷ್ಟ ಪರಿಹಾರಕ್ಕೆ ಆಸರೆಯಾಗಿವೆ. 29 ಜಿಲ್ಲೆಗಳಲ್ಲಿ 50,400 ಹಾಲು ಉತ್ಪಾದಕರ ಸಹಕಾರ ಸಂಘಗಳು ಸಹಕಾರ ತತ್ವದಡಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ವಿವರಿಸಿದರು.

ಹೆಚ್ಚು ಅಭಿವೃದ್ಧಿ: ‘ಉತ್ತರ ಕರ್ನಾಟಕದಲ್ಲಿ ಸಹಕಾರ ಕ್ಷೇತ್ರ ಹೆಚ್ಚು ಅಭಿವೃದ್ಧಿ ಹೊಂದಿದೆ. ಸಹಕಾರ ಸಂಘಗಳು ಯಾವುದೇ ವಾಣಿಜ್ಯ ಬ್ಯಾಂಕ್‌ಗೆ ಕಡಿಮೆ ಇಲ್ಲದಂತೆ ವಹಿವಾಟು ನಡೆಸುತ್ತಿವೆ. ಆದರೆ, ರಾಜ್ಯದ ದಕ್ಷಿಣ ಭಾಗದಲ್ಲಿ ಎಲ್ಲಾ ಸಹಕಾರ ಸಂಘಗಳು ಸೌಲಭ್ಯಕ್ಕೆ ಡಿಸಿಸಿ ಬ್ಯಾಂಕ್‌ಗಳನ್ನು ಅವಲಂಬಿಸಿವೆ’ ಎಂದರು.

‘ಸಹಕಾರಿ ಕಾಯ್ದೆ ಕಠಿಣವಾಗಿದೆ. ಸಹಕಾರ ಬ್ಯಾಂಕ್‌ಗೆ ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ನೆರವು ಸಿಗುವುದಿಲ್ಲ. ವಾಣಿಜ್ಯ ಬ್ಯಾಂಕ್‌ಗಳಿಗೆ ಸರ್ಕಾರಗಳು ಆರ್ಥಿಕ ನೆರವು ನೀಡಲಿವೆ. ಆದರೆ, ರೈತರು ಮತ್ತು ಬಡವರಿಗೆ ಸಹಕಾರ ಕ್ಷೇತ್ರದ ಬ್ಯಾಂಕ್‌ಗಳು ಹೆಚ್ಚಿನ ಹಣಕಾಸು ನೆರವು ನೀಡುತ್ತವೆ’ ಎಂದು ಹೇಳಿದರು.

ಠೇವಣಿ ಏರಿಕೆ: ‘ಬ್ಯಾಂಕ್‌ನಲ್ಲಿ ಈಗಾಗಲೇ ₹ 1 ಸಾವಿರ ಕೋಟಿ ಬೆಳೆ ಸಾಲ ನೀಡಲಾಗಿದೆ. ಇದರಲ್ಲಿ ನಬಾರ್ಡ್ ₹ 71 ಕೋಟಿ ಮತ್ತು ಅಪೆಕ್ಸ್ ಬ್ಯಾಂಕ್ ₹ 14 ಕೋಟಿ ಮಾತ್ರ ನೀಡಿವೆ. ಅಧಿಕಾರ ವಹಿಸಿಕೊಂಡಾಗ ₹ 15 ಕೋಟಿಯಿದ್ದ ಬ್ಯಾಂಕ್‌ನ ಠೇವಣಿ ಈಗ ₹ 280 ಕೋಟಿಗೆ ಏರಿಕೆಯಾಗಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಮಾಹಿತಿ ನೀಡಿದರು.

‘ಬ್ಯಾಂಕ್‌ನ ಠೇವಣಿ ಮೊತ್ತ ₹ 1 ಸಾವಿರ ಕೋಟಿಗೆ ಏರಿದರೆ ಮಾತ್ರ ದೇಶದಲ್ಲಿ ಪ್ರಥಮ ಸ್ಥಾನ ತಲುಪುತ್ತದೆ. ಆದ್ದರಿಂದ ಠೇವಣಿ ಸಂಗ್ರಹದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ನಿಗದಿತ ಅವಧಿಯಲ್ಲಿ ಸಾಲ ಮರು ಪಾವತಿಸದಿದ್ದರೆ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಿ’ ಎಂದು ಸೂಚಿಸಿದರು.

ವಹಿವಾಟು ಸಾಮರ್ಥ್ಯ: ‘ಸಹಕಾರ ಸಂಘಗಳು ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಸಾಮರ್ಥ್ಯ ಹೊಂದಿವೆ. ಇದಕ್ಕೆ ಸಹಕಾರ ಸಂಘಗಳು ಮತ್ತು ಹಾಲು ಉತ್ಪಾದಕರ ಸಂಘಗಳು ಕಾರಣ’ ಎಂದು ಅಫೆಕ್ಸ್‌ ಬ್ಯಾಂಕ್‌ ನಿರ್ದೇಶಕ ನೀಲಕಂಠೇಗೌಡ ಅಭಿಪ್ರಾಯಪಟ್ಟರು.

ಸಹಕಾರ ಸಂಘಗಳ ನಿವೃತ್ತ ಜಂಟಿ ನಿಬಂಧಕ ಎಚ್.ಎಸ್.ಸಂತೋಷ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ನಿರ್ವಹಣೆ ಮತ್ತು ಸಹಕಾರ ಕಾಯ್ದೆ ತಿದ್ದುಪಡಿ ಕುರಿತು, ನಿವೃತ್ತ ಸಹಕಾರ ಹೆಚ್ಚುವರಿ ನಿಬಂಧಕ ಶಶಿಧರ್ ಗುಂಪುಗಳ ರಚನೆ ಹಾಗೂ ಸಾಲ ವಸೂಲಾತಿ ಕ್ರಮದ ಬಗ್ಗೆ ಉಪನ್ಯಾಸ ನೀಡಿದರು.

ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ನಿರ್ದೇಶಕ ಸೊಣ್ಣೇಗೌಡ, ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಸೋಮಣ್ಣ, ರುದ್ರಸ್ವಾಮಿ, ಎಂ.ಎಲ್.ಅನಿಲ್‌ಕುಮಾರ್, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪ ನಿರ್ದೇಶಕಿ ಡಿ.ಜಿ.ಶಾಂತಕುಮಾರಿ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಎಂ.ಕೆ.ಪ್ರಭಾಕರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT