ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಮಹಿಳೆಯರ ಮೇಲೆ ಶೋಷಣೆ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಘುನಾಥ್ ಕಳವಳ
Last Updated 24 ನವೆಂಬರ್ 2020, 16:58 IST
ಅಕ್ಷರ ಗಾತ್ರ

ಕೋಲಾರ: ‘ದೇಶದಲ್ಲಿ ಸಂಪ್ರದಾಯಬದ್ಧ ಆಚಾರ, ವಿಚಾರ, ಸಂಸ್ಕಾರ ಕಲಿಸಿದ್ದು ತಾಯಿ. ದೇಶದಲ್ಲಿ ಹೆಣ್ಣು ಮಕ್ಕಳ ಪರವಾಗಿ ಕಾನೂನು ಇದ್ದರೂ ಶೋಷಣೆಗೆ ಒಳಗಾಗುತ್ತಿದ್ದಾರೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ಕಳವಳ ವ್ಯಕ್ತಪಡಿಸಿದರು.

ರಾಷ್ಟ್ರೀಯ ಏಕತಾ ಸಪ್ತಾಹದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಏಕತಾ ದಿನ ಹಾಗೂ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ‘ಅನೇಕ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ’ ಎಂದರು.

‘ಭಾರತವು ತಲಾ ತಲಾಂತರದಿಂದ ಪುರುಷ ಪ್ರಧಾನ ವ್ಯವಸ್ಥೆ ಹೊಂದಿದೆ. ಆದರೂ ಹೆಣ್ಣು ತನಗಿರುವ ಕಟ್ಟು ಪಾಡುಗಳಲ್ಲೇ ಸಾಧನೆ ಮಾಡಬೇಕು. ಪುರುಷರಿಗೆ ಹೋಲಿಕ ಮಾಡಿಕೊಳ್ಳದೆ ಭವಿಷ್ಯದ ಮುಂದಾಲೋಚನೆ ಇಟ್ಟುಕೊಂಡು ಜೀವನ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಜಗತ್ತಿನಲ್ಲಿರುವುದು ಗಂಡು ಮತ್ತು ಹೆಣ್ಣು ಜಾತಿ ಮಾತ್ರ. ಉಳಿದ ಜಾತಿಗಳು ಜನರ ಕಲ್ಪನೆ. ಗಂಡು ಹೆಣ್ಣಿನ ನಡುವೆ ಯಾವುದೇ ಬೇಧವಿಲ್ಲ. ಹೆಣ್ಣು ಸಮಾಜದಲ್ಲಿ ಸಾಮಾಜಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಪ್ರತಿ ಕ್ಷೇತ್ರದಲ್ಲೂ ಛಾಪು ಮೂಡಿಸಬೇಕು. ಕಾನೂನು, ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಪಡೆದುಕೊಳ್ಳಬೇಕು. ಜ್ಞಾನಾರ್ಜನೆಗೆ ಹೆಚ್ಚು ಒತ್ತು ಕೊಡಬೇಕು’ ಎಂದು ಕಿವಿಮಾತು ಹೇಳಿದರು.

‘ಮಹಿಳೆಗೆ ಸಮಾನತೆಯ ಹಕ್ಕು ಸಿಗಬೇಕು. ಹಕ್ಕುಗಳು ಸಂವಿಧಾನದತ್ತವಾಗಿ ಬಂದಿವೆ. ಎಲ್ಲಾ ಕಾನೂನುಗಳಿಗೆ ಸಂವಿಧಾನವೇ ತಾಯಿ. ಸಂವಿಧಾನದ ಮೂಲ ತತ್ವದಡಿ ಕಾನೂನು ರಚಿಸಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕೆಲ ಜಾತಿ, ಪಂಗಡಗಳಿಗೆ ಸಾಮಾಜಿಕ ಹಕ್ಕು ನೀಡಿರಲಿಲ್ಲ. ಶೋಷಣೆಗೆ ಒಳಗಾದ ಸಮುದಾಯಗಳಿದ್ದವು’ ಎಂದರು.

ಗಂಡಂದಿರ ಹಿಡಿತ: ‘ಪರಿಶಿಷ್ಟ ಸಮುದಾಯವನ್ನು ಸಾಮಾಜಿಕವಾಗಿ ದೂರ ಇರಿಸಲಾಗಿತ್ತು. ಮಹಿಳೆಯರಿಗೆ ಶಿಕ್ಷಣದ ಹಕ್ಕು ಇರಲಿಲ್ಲ. ಮಹಿಳೆಯರನ್ನು ಪುರುಷ ಪ್ರಧಾನ ವ್ಯವಸ್ಥೆಯು ಭೋಗದ ವಸ್ತುವಿನಂತೆ ನೋಡುತ್ತಿತ್ತು. ಸ್ವಾತಂತ್ರ್ಯ ನಂತರ ಸಂವಿಧಾನವು ಮಹಿಳೆಯರಿಗೆ ಎಲ್ಲಾ ಬಗೆಯ ಹಕ್ಕು ನೀಡಿತು. ಆದರೂ ಬಹುಪಾಲು ಮಹಿಳೆಯರು ಇಂದಿಗೂ ಗಂಡಂದಿರ ಹಿಡಿತದಲ್ಲಿದ್ದಾರೆ’ ಎಂದು ವಿಷಾದಿಸಿದರು.

‘ಪುರುಷರ ಸಾಧನೆ ಹಿಂದೆ ಮಹಿಳೆ ಹಾಗೂ ಮಹಿಳೆಯರ ಸಾಧನೆ ಹಿಂದೆ ಪುರುಷರು ಇರುತ್ತಾರೆ. ಪರಸ್ಪರ ಹೊಂದಾಣಿಕೆ ಇಲ್ಲದಿದ್ದರೆ ಸಾಧನೆ ಸಾಧ್ಯವಿಲ್ಲ. ಪುರುಷ, ಮಹಿಳೆಯರು ಸಮಾನರು ಎಂಬ ಭಾವನೆ ಮೂಡಿಸಲು ಕಾನೂನು ರಚಿಸಲಾಗಿದೆ. ಮಹಿಳೆಯರನ್ನೂ ಸಮಾನವಾಗಿ ನೋಡುವ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು’ ಎಂದು ಆಶಿಸಿದರು.

ಕಾನೂನಾತ್ಮಕ ರಕ್ಷಣೆ: ‘ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಾನೂನು ಇದೆ. ಮಹಿಳೆಯರು ಈ ಸಂಗತಿ ತಿಳಿದು ಕಾನೂನಾತ್ಮಕ ರಕ್ಷಣೆ ಪಡೆಯಬೇಕು. ಆದರೆ, ಕಾನೂನು ದುರ್ಬಳಕೆ ಆಗಬಾರದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಕಿವಿಮಾತು ಹೇಳಿದರು.

‘ಹೆಣ್ಣು ಸಮಾಜದ ಪ್ರತಿ ಹಂತದಲ್ಲೂ ಜಾಗೃತವಾಗಿರಬೇಕು. ಧೈರ್ಯವಾಗಿ ಸಮಾಜಕ್ಕೆ ಅಂಜದೆ ಮುನ್ನಡೆಯಬೇಕು. ಕಾನೂನು ನೀಡಿರುವ ಹಕ್ಕುಗಳನ್ನು ಮಾತ್ರ ಬಳಸಿಕೊಳ್ಳದೆ ಕರ್ತವ್ಯ ಪಾಲಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪಾಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಘುಪತಿಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT