ಶನಿವಾರ, ಆಗಸ್ಟ್ 24, 2019
28 °C

ರೈತರಿಗೆ ಸೌಕರ್ಯ ಕಲ್ಪಿಸಿ: ಜಿ.ಪಂ ಸಿಇಒ

Published:
Updated:

ಕೋಲಾರ: ‘ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಿ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಕುರಿತು ಇಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿ, ‘ರೈತರಿಗೆ ವಿವಿಧ ಯೋಜನೆಗಳಡಿ ಆದ್ಯತೆ ಮೇರೆಗೆ ಸೌಕರ್ಯ ಕಲ್ಪಿಸಬೇಕು. ಬೇಡಿಕೆ ಎಷ್ಟಿದೆ ಎಂದು ಮಾಹಿತಿ ನೀಡಿದರೆ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಸಹಾಯವಾಗುತ್ತದೆ’ ಎಂದು ಹೇಳಿದರು.

‘ಹಿಂದಿನ ಬಾರಿ ಸಚಿವರ ಜತೆ ಚರ್ಚಿಸಿ ಬೇಡಿಕೆಗಳ ವರದಿ ನೀಡಿ ಮಂಜೂರಾತಿ ಪಡೆಯಲಾಗಿತ್ತು. ಹವಾಮಾನಕ್ಕೆ ಅನುಗುಣವಾಗಿ ಬೆಳೆ ಬೆಳೆಯಲು ರೈತರಿಗೆ ತರಬೇತಿ ನೀಡಬೇಕು. ಉತ್ತಮ ಬೆಳೆ ತೆಗೆದಿರುವ ರೈತರಿಂದ ಇತರ ರೈತರಿಗೆ ಮಾಹಿತಿ ಕೊಡಿಸಿ’ ಎಂದು ಸಲಹೆ ನೀಡಿದರು.

‘ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ 11,812 ಫಲಾನುಭವಿಗಳು ಸೌಕರ್ಯ ಪಡೆದಿದ್ದು, ಇನ್ನು ಹೆಚ್ಚಿಗೆ ಅರ್ಜಿಗಳು ಬಂದಿವೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಎಂ.ಗಾಯಿತ್ರಿ ವಿವರಿಸಿದರು.

ಯೋಜನೆಯಡಿ ಹಸಿರು ಮನೆ, ಹೊಸ ಅಂಗಾಂಶ ಕೃಷಿ ಘಟಕ, ಸಮುದಾಯ ಕೃಷಿ ಹೊಂಡ, ಸಂಸ್ಕರಣಾ ಘಟಕ, ಪ್ಯಾಕ್‌ಹೌಸ್, ಚಿಲ್ಲರೆ ಮಾರುಕಟ್ಟೆ, ಉಚಿತ ಶೀತಲೀಕರಣ ಘಟಕ, ಹಣ್ಣು ಮಾಗಿಸುವ ಘಟಕ, ಅಣಬೆ ಬೇಸಾಯಕ್ಕೆ ಸಿಗುವ ಸಹಾಯಧನದ ಬಗ್ಗೆ ಮಾಹಿತಿ ನೀಡಿದರು.

ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ಶಿವಾರೆಡ್ಡಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹೊಸಮಟ್ ಹಾಜರಿದ್ದರು.

Post Comments (+)