ನೀರಿನ ಸಮಸ್ಯೆ ಬಗೆಹರಿಸುವಲ್ಲಿ ವಿಫಲ: ನಾರಾಯಣಸ್ವಾಮಿ ಆರೋಪ

7
ಕೆರೆ ಪರಿಶೀಲನೆ

ನೀರಿನ ಸಮಸ್ಯೆ ಬಗೆಹರಿಸುವಲ್ಲಿ ವಿಫಲ: ನಾರಾಯಣಸ್ವಾಮಿ ಆರೋಪ

Published:
Updated:
Deccan Herald

ಕೋಲಾರ: ‘ನಗರದ ಹೊರವಲಯದ ಅಮ್ಮೇರಹಳ್ಳಿ ಮತ್ತು ಮಡೇರಹಳ್ಳಿ ಕೆರೆ ಅಂಗಳದ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿದ್ದರೂ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ನಗರಸಭೆ ಆಡಳಿತ ಯಂತ್ರ ವಿಫಲವಾಗಿದೆ’ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಆರೋಪಿಸಿದರು.

ಅಮ್ಮೇರಹಳ್ಳಿ ಮತ್ತು ಮಡೇರಹಳ್ಳಿ ಕೆರೆಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ‘ನಗರದಲ್ಲಿ ಬೇಸಿಗೆಗೂ ಮುನ್ನವೇ ನೀರಿನ ಸಮಸ್ಯೆ ಗಂಭೀರವಾಗಿದೆ. ಜನ ಹಣ ಕೊಟ್ಟು ನೀರು ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಆದರೆ, ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ಸಮಸ್ಯೆಯ ಅರಿವಿಲ್ಲ’ ಎಂದು ದೂರಿದರು.

‘ನಗರದೊಳಗಿನ ಕೊಳವೆ ಬಾವಿಗಳಲ್ಲಿ ನೀರು ಬತ್ತಿದ್ದ ಕಾರಣ ಈ ಕೆರೆಗಳ ಅಂಗಳದಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು. ಹಿಂದಿನ ವರ್ಷ ಉತ್ತಮ ಮಳೆಯಾಗಿ ಕೆರೆಗಳಿಗೆ ನೀರು ಬಂದಿದ್ದರಿಂದ ಕೊಳಬೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸಿದೆ. ಆದರೆ, ನೀರನ್ನು ಬಳಕೆ ಮಾಡಿಕೊಳ್ಳುವಲ್ಲಿ ಆಡಳಿತ ಯಂತ್ರ ಎಡವಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಂಬ ದುರಸ್ತಿ: ‘ನೀರು ಲಭ್ಯವಿರುವ ಕೊಳವೆ ಬಾವಿಗಳಿಗೆ ಪಂಪ್‌, ಮೋಟರ್‌ ಅಳವಡಿಸುವ ಬಗ್ಗೆ ಹಿಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿತ್ತು. ಆದರೆ, ಅಧಿಕಾರಿಗಳು ಈವರೆಗೂ ಪಂಪ್‌, ಮೋಟರ್ ಅಳವಡಿಸಿಲ್ಲ. ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಂಬಗಳು ಬಾಗಿದ್ದು, ತಂತಿಗಳು ನೆಲ ಮಟ್ಟದಲ್ಲಿ ನೇತಾಡುತ್ತಿವೆ. ಬೆಸ್ಕಾಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಕಂಬ ದುರಸ್ತಿ ಮಾಡುವಂತೆ ಸೂಚಿಸಲಾಗಿದೆ’ ಎಂದು ವಿವರಿಸಿದರು.

‘ಕೆರೆಗಳಲ್ಲಿ ಇಷ್ಟು ದಿನ ನೀರಿತ್ತು. ಈಗ ನೀರು ಖಾಲಿಯಾಗಿದ್ದು, ಕೊಳವೆ ಬಾವಿ ಮತ್ತು ಕಂಬಗಳನ್ನು ಶೀಘ್ರವೇ ದುರಸ್ತಿ ಮಾಡಿಸುತ್ತೇವೆ. ಕೊಳವೆ ಬಾವಿಗಳ ನಿರ್ವಹಣೆಯ ಗುತ್ತಿಗೆದಾರನ ಟೆಂಡರ್ ಮುಗಿದು ಒಂದು ತಿಂಗಳಾಗಿದೆ. ಮರು ಟೆಂಡರ್ ಕರೆಯುವಂತೆ ಆಯುಕ್ತರಿಗೆ ತಿಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !