ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃಥಾ ಆರೋಪ: ತಾಯಿಗೆ ದ್ರೋಹ ಬಗೆದಂತೆ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ

ವಿರೋಧಿಗಳಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂಗೌಡ ತಿರುಗೇಟು
Last Updated 10 ನವೆಂಬರ್ 2021, 14:15 IST
ಅಕ್ಷರ ಗಾತ್ರ

ಕೋಲಾರ: ‘ಬಡವರು, ರೈತರು, ಮಹಿಳೆಯರ ಆರ್ಥಿಕ ಸದೃಢತೆಗೆ ಕಾರಣವಾಗಿರುವ ಡಿಸಿಸಿ ಬ್ಯಾಂಕ್ ವಿರುದ್ಧ ವೃಥಾ ಆರೋಪ ಮಾಡುವುದು ಹೆತ್ತ ತಾಯಿಗೆ ದ್ರೋಹ ಬಗೆದಂತೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ವಿರೋಧಿಗಳಿಗೆ ತಿರುಗೇಟು ನೀಡಿದರು.

ಇಲ್ಲಿ ಬುಧವಾರ ನಡೆದ ಬ್ಯಾಂಕ್‌ನ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ‘ಬ್ಯಾಂಕ್ ದಿವಾಳಿಯಾದಾಗ ಯಾರೂ ಮಾತನಾಡಲಿಲ್ಲ. ಈಗ ರೈತರು, ಮಹಿಳೆಯರಿಗೆ ನೆರವಾಗಿ ನಿಂತಿರುವಾಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಯಾವುದೇ ತಪ್ಪಿಲ್ಲದಿದ್ದರೂ ಪ್ರತಿನಿತ್ಯ ದೂರು ಸಲ್ಲಿಸುವುದರಿಂದ ಬೇಸರವಾಗಿದೆ. ಸೊಸೈಟಿಗಳ ಕೆಲ ಪ್ರಾಮಾಣಿಕ ಸಿಇಒಗಳ ಮೇಲೆ ಅಧಿಕಾರಿಗಳು ದಬ್ಬಾಳಿಕೆ ನಡೆಸಿ ಮಾನಸಿಕ ಹಿಂಸೆಗೆ ಗುರಿ ಮಾಡಿದ್ದಾರೆ’ ಎಂದು ಆರೋಪಿಸಿದರು.

ಇತಿಹಾಸದಲ್ಲೇ ಮೊದಲು: ‘ಡಿಸಿಸಿ ಬ್ಯಾಂಕ್‌ನ 55 ವರ್ಷದ ಇತಿಹಾಸದಲ್ಲಿ ಬ್ಯಾಂಕ್ ತನ್ನ ಲಾಭದ ₹ 1.14 ಕೋಟಿ ಲಾಭಾಂಶವನ್ನು ಸೊಸೈಟಿಗಳಿಗೆ ಡಿವಿಡೆಂಟ್ ಹಂಚಿಕೆ ಮಾಡಿರುವುದು ಇದೇ ಮೊದಲು’ ಎಂದು ಸಂತಸ ವ್ಯಕ್ತಪಡಿಸಿದರು.

‘ಅಧಿಕಾರ ವಹಿಸಿಕೊಂಡಾಗ ನಮ್ಮನ್ನು ನೋಡಿ ದಿವಾಳಿ ಬ್ಯಾಂಕ್‌ನ ಒಡೆಯರು ಎಂದು ನಗುತ್ತಿದ್ದರು. ಆದರೆ, ಈಗ ದೇಶದಲ್ಲೇ ಮೊದಲು ಕಂಪ್ಯೂಟರೀಕರಣ ಮಾಡಿದ್ದೇವೆ. ವಹಿವಾಟಿನಲ್ಲಿ ಪಾರದರ್ಶಕತೆ ಇದೆ. ಎಲ್ಲಾ ಮಹಿಳೆಯರು, ರೈತರಿಗೆ ಎಟಿಎಂ ಕಾರ್ಡ್ ನೀಡಿದ್ದೇವೆ’ ಎಂದು ಹೇಳಿದರು.

‘ರೈತರಿಗೆ ಬೆಳೆ ಸಾಲ ನಿಗದಿ ವೈಜ್ಞಾನಿಕವಾಗಿಲ್ಲ. ಯಾವ ಬೆಳೆಗೆ ಎಷ್ಟು ನೀಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಡಿಸಿಸಿ ಬ್ಯಾಂಕ್‌ಗೆ ಇಲ್ಲ. ಟೊಮೆಟೊಗೆ ಎಕರೆಗೆ ₹ 70 ಸಾವಿರ, ಆಲೂಗಡ್ಡೆಗೆ ₹ 68 ಸಾವಿರ ನಿಗದಿ ಮಾಡಿರುವುದು ಸಾಲದು. ಈ ಸಂಬಂಧ ರಾಜ್ಯ ಮಟ್ಟದ ತಾಂತ್ರಿಕ ಸಮಿತಿಗೆ ಮನವಿ ಮಾಡಿದ್ದೇವೆ’ ಎಂದು ವಿವರಿಸಿದರು.

ಶಾಸಕಿ ಎಂ.ರೂಪಕಲಾ, ಬ್ಯಾಂಕ್‌ನ ಉಪಾಧ್ಯಕ್ಷ ಎ.ನಾಗರಾಜ್, ನಿರ್ದೇಶಕರಾದ ಸೋಮಣ್ಣ, ಹನುಮಂತರೆಡ್ಡಿ, ಎಂಎಲ್.ಅನಿಲ್‌ಕುಮಾರ್ ಕೆ.ವಿ.ದಯಾನಂದ್, ಗೋವಿಂದರಾಜು, ಸೊಣ್ಣೇಗೌಡ, ಚೆನ್ನರಾಯಪ್ಪ, ವೆಂಕಟರೆಡ್ಡಿ, ನಾಗಿರೆಡ್ಡಿ, ಮೋಹನ್‍ರೆಡ್ಡಿ, ಎಚ್.ವಿ.ನಾಗರಾಜ್, ಎಸ್.ವಿ.ಸುಧಾಕರ್, ಇಲಿಯಾಸ್ ಖಾನ್, ಬ್ಯಾಂಕ್‌ನ ಸಿಇಒ ವೆಂಕಟೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT