ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಸ್ವಾರ್ಥಕ್ಕೆ ಸುಳ್ಳು ಆರೋಪ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ

ಮಾಜಿ ಶಾಸಕ ವೆಂಕಟಶಿವಾರೆಡ್ಡಿಗೆ ತಿರುಗೇಟು
Last Updated 25 ಅಕ್ಟೋಬರ್ 2021, 14:00 IST
ಅಕ್ಷರ ಗಾತ್ರ

ಕೋಲಾರ: ‘ಸಾಲ ಮನ್ನಾ ಯೋಜನೆಯ ಪರಿಕಲ್ಪನೆಯೇ ಇಲ್ಲದೆ ರಾಜಕೀಯ ಸ್ವಾರ್ಥಕ್ಕೆ ಬ್ಯಾಂಕ್ ವಿರುದ್ಧ ಸುಳ್ಳು ಆರೋಪ ಮಾಡದಿರಿ. ಫಲಾನುಭವಿ ರೈತರ ಪಟ್ಟಿ ಕೊಡುತ್ತೇನೆ. ಅವಳಿ ಜಿಲ್ಲೆಯಲ್ಲಿ ಓಡಾಡಿ ಸತ್ಯ ತಿಳಿದುಕೊಳ್ಳಿ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರಿಗೆ ಸವಾಲು ಹಾಕಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವೆಂಕಟಶಿವಾರೆಡ್ಡಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಗೋವಿಂದಗೌಡರು, ‘ಡಿಸಿಸಿ ಬ್ಯಾಂಕ್‌ ಸಾಲ ಮನ್ನಾ ಫಲಾನುಭವಿಗಳ ಪಟ್ಟಿಯನ್ನು ಅಫೆಕ್ಸ್‌ ಬ್ಯಾಂಕ್‌ಗೆ ಕಳುಹಿಸುತ್ತದೆ. ಅಲ್ಲಿಂದ ಅದು ಸರ್ಕಾರಕ್ಕೆ ಹೋಗುತ್ತದೆ. ಸಾಲ ಮನ್ನಾ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹೋಗುತ್ತದೆ. ಇದರಲ್ಲಿ ಯಾರ ಕೈವಾಡ ನಡೆಯಲ್ಲ’ ಎಂದು ಹೇಳಿದರು.

‘ಅವಿಭಜಿತ ಜಿಲ್ಲೆಯಲ್ಲಿ ಯಾವುದೇ ಸಾಲ ಮನ್ನಾ ಫಲಾನುಭವಿ ರೈತ ಒಂದು ರೂಪಾಯಿ ಅನ್ಯಾಯವಾಗಿದೆ ಎಂದು ಹೇಳಿಲ್ಲ. ವೆಂಕಟಶಿವಾರೆಡ್ಡಿ ಅವರದೇನು ಉಸಾಬರಿ. ಗೌನಿಪಲ್ಲಿ ಸೊಸೈಟಿ ವ್ಯಾಪ್ತಿಯಲ್ಲಿ ₹ 2.87 ಕೋಟಿ ಸಾಲ ನೀಡಲಾಗಿದೆ. ಆದರೆ, ಅಲ್ಲಿ ₹ 4 ಕೋಟಿ ಅವ್ಯವಹಾರವಾಗಿದೆ ಎಂದು ಹೇಳುವ ಮಾಜಿ ಶಾಸಕರಿಗೆ ಅನುಭವದ ಕೊರತೆಯಿದೆ’ ಎಂದು ಕುಟುಕಿದರು.

‘ಸಾಲ ಮನ್ನಾ ಪ್ರಯೋಜನ ಪಡೆದ ರೈತರ ಪಟ್ಟಿಯನ್ನು ಅಂಚೆ ಮೂಲಕ ವೆಂಕಟಶಿವಾರೆಡ್ಡಿ ಅವರಿಗೆ ಕಳುಹಿಸುತ್ತೇನೆ. ಅವರೇ ಆ ರೈತರ ಮನೆಗೆ ಬಾಗಿಲಿಗೆ ಹೋಗಿ ಸತ್ಯಾಂಶ ಅರಿತು ನಂತರ ಎಲ್ಲೆಲ್ಲಿ ಅವ್ಯವಹಾರವಾಗಿದೆ ಎಂದು ಹೇಳಲಿ. ಅಕ್ರಮ ನಡೆದಿದ್ದರೆ ಆ ದಾಖಲೆಪತ್ರಗಳನ್ನು ಸಿಬಿಐಗೂ ನೀಡಲಿ’ ಎಂದು ತಿಳಿಸಿದರು.

ದೂರು ಕೊಡಲಿ: ‘ಸೊಸೈಟಿಗಳ ನಿರ್ವಹಣೆ ಹೊಣೆ ಸಹಕಾರ ಇಲಾಖೆ ಉಪ ನಿಬಂಧಕರ ವ್ಯಾಪ್ತಿಗೆ ಬರುತ್ತದೆ. ಡಿಸಿಸಿ ಬ್ಯಾಂಕ್‌ಗೆ ಸಂಬಂಧವಿಲ್ಲ. ವೆಂಕಟಶಿವಾರೆಡ್ಡಿ ಅವರು ಹೇಳಿರುವಂತೆ 216 ಸೊಸೈಟಿಗಳಿಲ್ಲ. ಚಾಲ್ತಿಯಲ್ಲಿ ಇರೋದು 185 ಸೊಸೈಟಿ ಮಾತ್ರ. ಅವರ ಬಳಿ ಅಕ್ರಮದ ದಾಖಲೆಪತ್ರಗಳಿದ್ದರೆ ಉಪ ನಿಬಂಧಕರಿಗೆ ದೂರು ಕೊಟ್ಟು ಕ್ರಮ ಕೈಗೊಳ್ಳಲು ಆಗ್ರಹಿಸಲಿ’ ಎಂದರು.

‘ಎಸ್‍.ಎನ್.ಫೌಲ್ಟ್ರಿ, ದತ್ತ ಸಾಯಿ ಫೌಲ್ಟ್ರಿ ಫಾರಂ ಮತ್ತು ರಮೇಶ್‌ಕುಮಾರ್‌ರ ಫೌಲ್ಟ್ರಿ ಫಾರಂಗೆ ಸುಮಾರು 2 ಪಟ್ಟು ಭದ್ರತೆ ಇಟ್ಟುಕೊಂಡು ಸಾಲ ಕೊಟ್ಟಿದ್ದೇವೆ. ಸಾಲದ ಕಂತು ಪಾವತಿ ಸಮರ್ಪಕವಾಗಿದೆ. ಬಳಕೆದಾರರ ಸಂಘ, ಶಾಸಕ ಶ್ರೀನಿವಾಸಗೌಡರಿಗೆ ಮತ್ತು ಭುವನ್ ಎಂಟರ್‌ಪ್ರೈಸಸ್‌ಗೆ ಪಾರದರ್ಶಕವಾಗಿಯೇ ಸಾಲ ನೀಡಿದ್ದೇವೆ. ಬ್ಯಾಂಕ್‌ಗೆ ಕೋಟಿಗಟ್ಟಲೆ ಬಡ್ಡಿ ಹಣ ಹರಿದು ಬರುತ್ತಿದೆ’ ಎಂದು ವಿವರಿಸಿದರು.

‘ನಾನು 2008 ಮತ್ತು 2013ರ ವಿಧಾನಸಭಾ ಚುನಾವಣೆಯಲ್ಲಿ ವೆಂಕಟಶಿವಾರೆಡ್ಡಿ ಪರ ಪ್ರಾಮಾಣಿಕವಾಗಿ ಕೆಲಸ ಮಾಡಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅವರ ಹಾಗೂ ಶ್ರೀನಿವಾಸಗೌಡರ ಅನುಮತಿ ಪಡೆದು ಸ್ಪರ್ಧಿಸಿದರೂ ವೆಂಕಟಶಿವಾರೆಡ್ಡಿ ನನ್ನ ವಿರುದ್ದ ವೆಂಕಟರೆಡ್ಡಿಯನ್ನು ಕಣಕ್ಕಿಳಿಸಿದರು. ಕಾಂಗ್ರೆಸ್ ತನ್ನ ಅಭ್ಯರ್ಥಿ ಶೇಷಾಪುರ ಗೋವಿಂದಗೌಡರನ್ನು ಕಣದಿಂದ ಹಿಂದೆ ಸರಿಸಿತು. ಆದರೆ, ನೀವು ಮಾಡಿದ್ದೇನು? ಈಗ ತಾನೇ ಗೆಲ್ಲಿಸಿದೆ ಎಂದು ಹೇಳಿಕೊಳ್ಳುತ್ತಿದ್ದಿರಾ? ಇದು ನಿಮಗೆ ಶೋಭೆಯಲ್ಲ’ ಎಂದು ಗುಡುಗಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್‌ಕುಮಾರ್‌, ನೀಲಕಂಠೇಗೌಡ, ಸೋಮಣ್ಣ, ಕೆ.ವಿ.ದಯಾನಂದ್, ವೆಂಕಟರೆಡ್ಡಿ, ಗೋವಿಂದರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT