ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಯೋಧರಿಗೆ ಆತ್ಮೀಯ ಸನ್ಮಾನ

Last Updated 3 ಫೆಬ್ರುವರಿ 2020, 14:16 IST
ಅಕ್ಷರ ಗಾತ್ರ

ಕೋಲಾರ: ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಜಿಲ್ಲೆಗೆ ಆಗಮಿಸಿದ ಜಿಲ್ಲೆಯ 14 ಮಂದಿ ಯೋಧರನ್ನು ಜಿಲ್ಲಾ ಮಾಜಿ ಯೋಧರ ಟ್ರಸ್ಟ್‌ ಸದಸ್ಯರು ಇಲ್ಲಿನ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಅಭಿನಂದಿಸಿ ಆತ್ಮೀಯವಾಗಿ ಬರಮಾಡಿಕೊಂಡರು.

ಬಸ್‌ ನಿಲ್ದಾಣದಿಂದ ಕಾಳಮ್ಮಗುಡಿ ರಸ್ತೆ, ಎಂ.ಜಿ ರಸ್ತೆ ಮಾರ್ಗವಾಗಿ ಶಾಶ್ವತ ನೀರಾವರಿ ಹೋರಾಟ ವೇದಿಕೆವರೆಗೆ ಯೋಧರ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ವಿವಿಧ ಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳು ಯೋಧರ ಪರ ಘೋಷಣೆ ಕೂಗಿದರು.ಮೆರವಣಿಗೆಯಲ್ಲಿ ಬಂದ ಯೋಧರನ್ನು ಯುವಕರು ಹೆಗಲ ಮೇಲೆ ಹೊತ್ತು ವೇದಿಕೆಗೆ ಕರೆ ತಂದರು. ನಂತರ ಮೈಸೂರು ಪೇಟೆ ತೊಡಿಸಿ ಸನ್ಮಾನಿಸಲಾಯಿತು.

‘ಸೇವಾ ನಿವೃತ್ತಿ ಹೊಂದಿದರೂ ದೇಶ ಸೇವೆಯಿಂದ ನಿವೃತ್ತಿಯಾಗಿಲ್ಲ. ದೇಶ ರಕ್ಷಣೆಗೆ ಯಾವಾಗ ಕರೆದರೂ ಹೋಗಲು ಸಿದ್ಧ. ದೇಶ ಸೇವೆಯು ದೇವರ ಸೇವೆ ಇದ್ದಂತೆ. ಸೇನೆಯಲ್ಲಿ ಸಾಕಷ್ಟು ಹುದ್ದೆ ಖಾಲಿಯಿದ್ದು, ಯುವಕರು ಸೇನೆಗೆ ಸೇರಬೇಕು’ ಎಂದು ನಿವೃತ್ತ ಯೋಧ ಸುರೇಶ್‌ಬಾಬು ಹೇಳಿದರು.

‘ನಾನು ಜಮ್ಮು ಕಾಶ್ಮೀರ, ಅಸ್ಸಾಂ, ಪಂಜಾಬ್, ಹರಿಯಾಣ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿದ್ದೇನೆ. ಪಾಕಿಸ್ತಾನದ ವಿರುದ್ಧ ಹೋರಾಡಲು ಭಾರತ ಸೇನೆಗೆ ಸಾಮರ್ಥ್ಯವಿದೆ. ಪಾಕಿಸ್ತಾನದವರು ಹೇಡಿಗಳಂತೆ ಉಗ್ರರ ಮೂಲಕ ಸೇನೆ ಮೇಲೆ ದಾಳಿ ಮಾಡಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ದೇಶಭಿಮಾನ ಇರುವ ವ್ಯಕ್ತಿಗಳು ಮಾತ್ರ ದೇಶದ ಗಡಿ ಕಾಯಲು ಹೋಗುತ್ತಾರೆ. ಸೈನಿಕರು ಮಕ್ಕಳು, ಊರು ಬಿಟ್ಟು ಹಗಲು ರಾತ್ರಿ ರಾಷ್ಟ್ರಕ್ಕಾಗಿ ದುಡಿಯುತ್ತಾರೆ. ಪ್ರತಿಯೊಬ್ಬರು ಅವರ ಸೇವೆ ಸ್ಮರಿಸಬೇಕು’ ಎಂದು ಬೆರಳಚ್ಚು ಘಟಕದ ಇನ್ಸ್‌ಪೆಕ್ಟರ್ ಸೋಮಶೇಖರ್ ಸಲಹೆ ನೀಡಿದರು.

ಗೌರವ ಸಿಕ್ಕಿದೆ

‘ಸೈನಿಕನಾಗಿ ತಂದೆ ತಾಯಿ ಮಕ್ಕಳನ್ನು ಬಿಟ್ಟು ದೇಶ ಸೇವೆ ಮಾಡಿದ್ದಕ್ಕೆ ಈಗ ನಿಜವಾದ ಗೌರವ ಸಿಕ್ಕಿದೆ. ನಾವು ಸೇನೆಯಿಂದ ಮಾತ್ರವೇ ನಿವೃತ್ತಿಯಾಗಿದ್ದು, ದೇಶ ಸೇವೆಗೆ ಸದಾ ಸಿದ್ಧ. ಜಿಲ್ಲೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಬೇಕು’ ಎಂದು ನಿವೃತ್ತ ಯೋಧ ಆನಂದ್‌ ಹೇಳಿದರು.

‘ನಗರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 2003ರಲ್ಲಿ ನಡೆದ ಸೈನಿಕರ ನೇಮಕಾತಿ ಪ್ರಕ್ರಿಯೆಯಲ್ಲಿ ಜಿಲ್ಲೆಯ 14 ಮಂದಿ ಆಯ್ಕೆಯಾದೆವು. ಆದರೆ, ಯಾರೂ ಒಟ್ಟಿಗೆ ಒಂದೇ ಜಾಗದಲ್ಲಿ ಕೆಲಸ ಮಾಡಿದವರಲ್ಲ. ಒಬ್ಬೊಬ್ಬರು ಒಂದೊಂದು ಕಡೆ ಕಾರ್ಯ ನಿರ್ವಹಿಸಿದೆವು’ ಎಂದು ವಿವರಿಸಿದರು.

ನಿವೃತ್ತ ಯೋಧರ ಟ್ರಸ್ಟ್ ಅಧ್ಯಕ್ಷ ಜಗನ್ನಾಥ್, ಉಪಾಧ್ಯಕ್ಷ ಕೃಷ್ಣಮೂರ್ತಿ, ನಿವೃತ್ತ ಯೋಧ ಕೃಷ್ಣೇಗೌಡ, ನಗರಸಭೆ ಸದಸ್ಯ ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT