ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರ ಆಸೆ ಪೂರೈಸಿದ ಖುಷಿ

ಯುಪಿಎಸ್‌ಸಿ: ಮೈಸೂರಿನ ಕೃತಿಕಾ, ಪೃಥ್ವಿಕ್‌ಗೆ ರ‍್ಯಾಂಕ್‌
Last Updated 28 ಏಪ್ರಿಲ್ 2018, 12:54 IST
ಅಕ್ಷರ ಗಾತ್ರ

ಮೈಸೂರು: ‘ನಾವು ಐಎಎಸ್‌ ಅಧಿಕಾರಿ ಆಗಬೇಕು ಎಂಬುದು ಪೋಷಕರ ಕನಸು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‍್ಯಾಂಕ್‌ ಬಂದಿರುವುದು ಅವರಿಗೆ ತುಂಬಾ ಖುಷಿ ಉಂಟು ಮಾಡಿದೆ’

–ಯುಪಿಎಸ್‌ಸಿ ಪರೀಕ್ಷೆಯಲ್ಲಿ 194ನೇ ರ‍್ಯಾಂಕ್‌ ಪಡೆದಿರುವ ಮೈಸೂರಿನ ಕೃತಿಕಾ ಹಾಗೂ 211ನೇ ರ‍್ಯಾಂಕ್‌ ಪಡೆದಿರುವ ಪೃಥ್ವಿಕ್‌ ಶಂಕರ್‌ ಅವರ ಸಂಭ್ರಮದ ಮಾತುಗಳಿವು.

ಪೃಥ್ವಿಕ್‌ ಶಂಕರ್‌

‘ಈ ಸಾಧನೆಯನ್ನು ಪೋಷಕರಿಗೆ ಅರ್ಪಿಸುತ್ತೇನೆ. ಏಕೆಂದರೆ ಅವರು ನನ್ನಲ್ಲಿ ಸ್ಫೂರ್ತಿ ತುಂಬಿದರು. ಯಶಸ್ಸು ಸಾಧಿಸಬಹುದು ಎಂದು ಹೇಳಿ ಹುರಿದುಂಬಿಸಿದರು. ಪರೀಕ್ಷೆ ಸಮಯದಲ್ಲಿ ಮಾತ್ರ ನಾನು ಹೆಚ್ಚು ಓದುತ್ತಿದ್ದೆ. ಸಾಮಾನ್ಯ ಜ್ಞಾನ ವಿಷಯಕ್ಕೆ ಆದ್ಯತೆ ನೀಡಿದ್ದೆ. ಆದರೆ, ನನಗೆ ಈ ಸಾಧನೆ ಪೂರ್ಣವಾಗಿ ತೃಪ್ತಿ ತಂದಿಲ್ಲ. ಇನ್ನೂ ಹೆಚ್ಚಿನ ರ‍್ಯಾಂಕ್‌ ಪಡೆಯಲು ಮತ್ತೊಮ್ಮೆ ಪರೀಕ್ಷೆ ಎದುರಿಸುತ್ತೇನೆ’ ಎಂದು ಪೃಥ್ವಿಕ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮೈಸೂರಿನ ವಿಜಯನಗರ ರೈಲ್ವೆ ಬಡಾವಣೆಯಲ್ಲಿ ನೆಲೆಸಿರುವ ಪೃಥ್ವಿಕ್‌ ಅವರು ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಎರಡನೇ ಯತ್ನದಲ್ಲಿ ಉತ್ತೀರ್ಣರಾಗಿದ್ದು, ಮುಖ್ಯ ಪರೀಕ್ಷೆಯಲ್ಲಿ ಸಾರ್ವಜನಿಕ ಆಡಳಿತ ವಿಷಯ ಆಯ್ಕೆ ಮಾಡಿಕೊಂಡಿದ್ದರು.

ಪೃಥ್ವಿಕ್‌ ತಂದೆ ಶಂಕರೇಗೌಡ ಅವರು ಮದ್ದೂರು ಶಾಖೆಯಲ್ಲಿ ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಆಗಿದ್ದಾರೆ. ತಾಯಿ ಸುಧಾ ಗೃಹಿಣಿ.

ಕೃತಿಕಾ ಅವರು ಇಲ್ಲಿನ ರೂಪಾನಗರದವರು. ವಿದ್ಯಾವರ್ಧಕ ಕಾಲೇಜಿನಲ್ಲಿ ಎಂಜಿನಿಯರಿಂಗ್‌ (ಕಂಪ್ಯೂಟರ್‌ ವಿಜ್ಞಾನ) ವ್ಯಾಸಂಗ ಮಾಡಿದ್ದಾರೆ. ಅವರ ತಾಯಿ ಲಲಿತಾ ಅವರು ಬಿಎಸ್‌ಎನ್ಎಲ್‌ನ ಮಾಜಿ ಉದ್ಯೋಗಿ.

‘ನಾಗರಿಕ ಸೇವಾ ಪರೀಕ್ಷೆ ಬರೆಯಬೇಕೆಂಬುದು ಬಾಲ್ಯದ ಕನಸು. ಐದನೇ ಪ್ರಯತ್ನದಲ್ಲಿ ನನಗೆ ರ‍್ಯಾಂಕ್‌ ಬಂದಿದೆ. ಹೆಚ್ಚಿನ ರ‍್ಯಾಂಕ್‌ ಪಡೆಯಲು ಮತ್ತೊಮ್ಮೆ ಪರೀಕ್ಷೆ ಬರೆಯಬೇಕು ಅಂದುಕೊಂಡಿದ್ದೇನೆ’ ಎಂದರು.

ಬೆಂಗಳೂರಿನಲ್ಲಿ ನೆಲೆಸಿರುವ ಮೈಸೂರು ಮೂಲದ ಎಂ.ಶ್ವೇತಾ ಅವರು ನಾಲ್ಕನೇ ಪ್ರಯತ್ನದಲ್ಲಿ 119ನೇ ರ‍್ಯಾಂಕ್‌ ಪಡೆದಿದ್ದಾರೆ. ಇವರೆಲ್ಲ ಬೆಂಗಳೂರಿನ ಡಾ.ರಾಜಕುಮಾರ್‌ ಸಿವಿಲ್‌ ಸರ್ವಿಸಸ್‌ ಅಕಾಡೆಮಿಯಲ್ಲಿ ಕೋಚಿಂಗ್‌ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT