ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ಬೊಗಸೆಯೊಡ್ಡಿದ ರೈತ: ಮಳೆ ಆಶ್ರಿತ ಪ್ರದೇಶದಲ್ಲಿ ಮೂಲಂಗಿ ಬೆಳೆದು ಸಾಧನೆ

ಮಳೆಯಾಶ್ರಿತ ಪ್ರದೇಶದಲ್ಲಿ ಮೂಲಂಗಿ ಬೆಳೆದ ಖುಷಿ
Last Updated 22 ಸೆಪ್ಟೆಂಬರ್ 2022, 4:20 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಪನಸಮಾಕನಹಳ್ಳಿಯ ರೈತ ನಾರಾಯಣಸ್ವಾಮಿ ಮಳೆಯಾಶ್ರಿತ ಪ್ರದೇಶದಲ್ಲಿ ಮೂಲಂಗಿ ಬೆಳೆಯುವ ಮೂಲಕ ಕೃಷಿಕ ಸಮುದಾಯದ ಗಮನ ಸೆಳೆದಿದ್ದಾರೆ.

ಗ್ರಾಮದ ರೈತರು ಮಳೆಯಾಶ್ರಿತದಲ್ಲಿ ಸಾಂಪ್ರದಾಯಿಕವಾಗಿ ರಾಗಿ, ನೆಲಗಡಲೆ, ಅವರೆ, ತೊಗರಿ ಬೆಳೆಯುತ್ತಾರೆ. ನಾರಾಯಣಸ್ವಾಮಿ ಸಾಂಪ್ರದಾಯಿಕ ಬೆಳೆ ಬೆಳೆಯದೆ ತರಕಾರಿ ಬೆಳೆಯಾದ ಮೂಲಂಗಿ ಬೀಜ ಬಿತ್ತನೆ ಮಾಡುವುದನ್ನು ಕಂಡು ನಕ್ಕವರೇ ಹೆಚ್ಚು. ಕೆಲವು ಆತ್ಮೀಯರು ಹುಚ್ಚು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದೂ ಉಂಟು.

ಆದರೆ, ಅವರು ಮಾತ್ರ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಸುಮಾರು ಒಂದು ಎಕರೆ ಪ್ರದೇಶದಲ್ಲಿ ಮೂಲಂಗಿ ಬಿತ್ತನೆ ಮಾಡಿಯೇ ಬಿಟ್ಟರು. ಕಾಲಕಾಲಕ್ಕೆ ಸರಿಯಾಗಿ ಮಳೆಯಾಯಿತು. ಸಾವಯವ ಗೊಬ್ಬರ ಹಾಕಿದ್ದ ಪರಿಣಾಮ ಬೆಳೆ ಹುಲುಸಾಗಿ ಬೆಳೆಯಿತು. ಗಡ್ಡೆ ಕಟ್ಟತೊಡಗಿತು. ಆಗ ಮೂಲಂಗಿ ಬೀಜ ಬಿತ್ತುವುದನ್ನು ಕಂಡು ನಕ್ಕಿದ್ದ ಅಕ್ಕಪಕ್ಕದ ರೈತರು ಹೊಲದ ಬದುವಿನ ಮೇಲೆ ನಿಂತು ನೋಡತೊಡಗಿದರು. ಪ್ರಯತ್ನ ಫಲ ಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈಗ ತರಕಾರಿ ಬೆಲೆ ಗಗನಕ್ಕೇರಿದೆ. ಯಾವುದೇ ತರಕಾರಿ ಬೆಲೆ ಕೆ.ಜಿಯೊಂದಕ್ಕೆ ₹ 80 ಇದೆ. ಇನ್ನು ಹಿಡಿ ಗಾತ್ರದ 1 ಕಟ್ಟು ಸೊಪ್ಪಿನ ಬೆಲೆ ₹ 40ರ ಗಡಿ ದಾಟಿದೆ. ನಾಟಿ ಕೊತ್ತಂಬರಿ ಸೊಪ್ಪಿನ ಬೆಲೆ ಕಟ್ಟೊಂದಕ್ಕೆ ₹ 120 ಇದೆ. ಅಷ್ಟಾದರೂ ಸೊಪ್ಪು ಹಾಗೂ ಕೊತ್ತಂಬರಿ ಸೊಪ್ಪು ಮಾರುಕಟ್ಟೆಯಲ್ಲಿ ಕಾಣಿಸುವುದು ಅಪರೂಪ. ಬೆಳೆ ಇರುವ ರೈತರಿಗೆ ಒಳ್ಳೆಯ ಬೆಲೆ ಸಿಗುತ್ತಿದೆ.

‘ದೇವರ ದಯೆ. ಜನರ ಕೊಂಕು ಮಾತುಗಳ ನಡುವೆ ಧೈರ್ಯ ಮಾಡಿ ಮೂಲಂಗಿ ಬೀಜದ ಬಿತ್ತನೆ ಮಾಡಿದೆ. ಮಳೆರಾಯನ ಕರುಣೆಯಿಂದ ಅನಿರೀಕ್ಷಿತ ಯಶಸ್ಸು ಸಿಕ್ಕಿದೆ. ಮಾರುಕಟ್ಟೆಯಲ್ಲಿ ಕೆಜಿಯೊಂದಕ್ಕೆ ₹ 40 ರಂತೆ ಮಾರಾಟವಾಗುತ್ತಿದೆ. ಮನೆ ಮಂದಿಯ ಕಷ್ಟಕ್ಕೆ ಮೋಸವಾಗಿಲ್ಲ. ನಾಲ್ಕು ಕಾಸು ಸಿಗುತ್ತಿದೆ’ ಎಂದು ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ತಂದೆ ಹಾಗೂ ತಾತ ಮಳೆಯಾಶ್ರಿತದಲ್ಲಿಯೇ ಮನೆಗೆ ಅಗತ್ಯವಿರುವಷ್ಟು ಮೆಣಸಿನ ಕಾಯಿ, ತರಕಾರಿ ಹಾಗೂ ಕೊತ್ತಂಬರಿ ಬೆಳೆಯುತ್ತಿದ್ದರು. ಅವರ ಮಾದರಿ ಅನುಸರಿಸಿ ನಾನು ತರಕಾರಿ ಬೆಳೆಯುವ ನಿರ್ಧಾರ ಕೈಗೊಂಡೆ. ಅಲ್ಪಾವಧಿ ತರಕಾರಿ ಬೆಳೆಯಾದರೆ ಒಳ್ಳೆಯದು. ಒಂದು ಅಂತರದಲ್ಲಿ ಮಳೆಯಾದರೆ ಸಾಕು ಬೆಳೆ ಕೈಗೆ ಬರುತ್ತದೆ’ ಎಂದು
ವಿವರಿಸಿದರು.

ಹೌದು, ತಾಲ್ಲೂಕಿನ ರೈತರು ಕೊನೆ ಮಳೆಯ ತೇವಾಂಶ ಬಳಸಿಕೊಂಡು ಗದ್ದೆ ಬಯಲಲ್ಲಿ ಹಸಿಕಡಲೆ ಹಾಗೂ ಕೊತ್ತಂಬರಿ ಬೀಜ ಬೆಳೆಯುತ್ತಿದ್ದರು. ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಕರಬೂಜ ಬೆಳೆಯುತ್ತಿದ್ದರು. ಬೀಜ ಮೊಳಕೆ ಬಂದರೆ ಸಾಕು ಮಂಜಿಗೆ ಬೆಳೆಯಾಗುತ್ತಿತ್ತು. ಆ ಪದ್ಧತಿ ಕೆಲವು ಕಡೆ ಈಗಲೂ ಚಾಲ್ತಿಯಲ್ಲಿದೆ. ಆದರೆ, ಈ ಮಾದರಿಯಡಿ ಬೆಳೆ ಬೆಳೆಯುವವರ ಸಂಖ್ಯೆ ತೀರಾ ಕಡಿಮೆ ಎಂದು ಹೇಳಬಹುದು.

‘ಮಳೆ, ಮಳೆ ನೀರು ಹಾಗೂ ತೇವಾಂಶ ಬಳಸಿಕೊಂಡು ಬೆಳೆ ಮಾಡುವ ಪದ್ಧತಿ ಮುಂದುವರಿಯಬೇಕು. ಇದರಿಂದ ಬೆಳೆಯ ನಿರ್ವಹಣಾ ವೆಚ್ಚ ಕಡಿಮೆಯಾಗುತ್ತದೆ. ಶುದ್ಧ ನೀರಿನಿಂದ ಬೆಳೆದ ಕೃಷಿ ಉತ್ಪನ್ನದ ಸೇವನೆಯಿಂದ ಆರೋಗ್ಯ ರಕ್ಷಣೆಯಾಗುತ್ತದೆ’ ಎಂಬುದು ಸಾವಯವ ಕೃಷಿಕ ರಾಂಪುರ ಅಶೋಕ್ ಕುಮಾರ್ ಅವರ
ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT