ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿ ಚೀಟಿ ದಂಧೆಗೆ ರೈತರು ಹೈರಾಣು

ಬಿತ್ತನೆ ಆಲೂಗೆಡ್ಡೆಗೆ ದರ ನಿಗದಿಗೊಳಿಸಲು ರೈತ ಸಂಘದ ಸದಸ್ಯರ ಒತ್ತಾಯ
Last Updated 28 ಜುಲೈ 2022, 4:43 IST
ಅಕ್ಷರ ಗಾತ್ರ

ಬಂಗಾರಪೇಟೆ: ಬಿತ್ತನೆ ಆಲೂಗೆಡ್ಡೆಯ ಗುಣಮಟ್ಟ ಹಾಗೂ ಬೆಲೆ ನಿಗದಿಪಡಿಸಿ ಬಿಳಿ ಚೀಟಿ ದಂಧೆಗೆ ಕಡಿವಾಣ ಹಾಕಲು ವಿಶೇಷ ತಂಡ ರಚಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಸದಸ್ಯರು, ತಹಶೀಲ್ದಾರ್ ಎಂ. ದಯಾನಂದ ಹಾಗೂ ಎಪಿಎಂಸಿ ಕಾರ್ಯದರ್ಶಿ ಶ್ರೀನಿವಾಸ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಪ್ರತಿವರ್ಷ ಟೊಮೆಟೊ ಸುಗ್ಗಿ ಮುಗಿದ ನಂತರ ರೈತರು ಪರ್ಯಾಯ ಬೆಳೆಯಾಗಿ ಆಲೂಗೆಡ್ಡೆ ಬಿತ್ತನೆ ಮಾಡಲಿದ್ದು, ಶೀಘ್ರವೇ ಕ್ರಮ ಕೈಗೊಳ್ಳಬೇಕು. ಜತೆಗೆ ಸರ್ಕಾರವೇ ಆಲೂಗೆಡ್ಡೆಗೆ ಬೆಳೆ ವಿಮೆ ಹಣ ಪಾವತಿಸಬೇಕು ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ. ನಾರಾಯಣಗೌಡ ಒತ್ತಾಯಿಸಿದರು.

ಎರಡು ವರ್ಷದಿಂದ ಕೋವಿಡ್, ಪ್ರಕೃತಿ ವಿಕೋಪದಿಂದ ವಾಣಿಜ್ಯ ಬೆಳೆಗಳು ರೈತರ ಕೈಹಿಡಿದಿಲ್ಲ. ಈ ವರ್ಷವೂ ಟೊಮೆಟೊಗೆ ಬೆಲೆ ಇಲ್ಲದೆ ರಸ್ತೆಗೆ ಸುರಿಯುವಂತಾಗಿದೆ. ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸ್ತುತ ಆಲೂಗೆಡ್ಡೆ ಬಿತ್ತನೆ ಸುಗ್ಗಿ ಆರಂಭವಾಗಿದೆ. ಮಾರುಕಟ್ಟೆಯಲ್ಲಿ 50 ಕೆ.ಜಿ ಬಿತ್ತನೆ ಆಲೂಗೆಡ್ಡೆಯನ್ನು ₹ 4 ಸಾವಿರದಿಂದ ₹ 5 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಆದರೂ, ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.

ಜಿಲ್ಲಾ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿ, ಪಶ್ಚಿಮ ಬಂಗಾಳ, ಪಂಜಾಬ್, ಜಲಂದರ್‌ನಿಂದ ಬರುವ ವಿವಿಧ ತಳಿಯ ಬಿತ್ತನೆ ಆಲೂಗೆಡ್ಡೆ ಮಾರುಕಟ್ಟೆಗೆ ಬರುವ ಮುನ್ನವೇ ಸಂಬಂಧಿಸಿದ ಗುಣಮಟ್ಟದ ಅಧಿಕಾರಿಗಳು ಪರಿಶೀಲಿಸಬೇಕು. ಆದರೆ, ಅಧಿಕಾರಿಗಳು ಯಾವುದೇ ಪರಿಶೀಲನೆ ಮಾಡುತ್ತಿಲ್ಲ. ಇದು ಖಾಸಗಿ ಮಂಡಿ ಮಾಲೀಕರಿಗೆ ವರದಾನವಾಗಿದೆ ಎಂದು ದೂರಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಗೆ ಬರುವ ನೂರಾರು ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಜೊತೆಗೆ, ಬಾಡಿಗೆ ನಿಗದಿ ಮಾಡುವಲ್ಲಿಯೂ ಅಕ್ರಮ ನಡೆದಿದೆ. ವ್ಯಾಪಾರ ಮಾಡಲು ಅಂಗಡಿ ಪಡೆದು ಮನೆ ನಿರ್ಮಿಸಿರುವ ವರ್ತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಮಸ್ಯೆ ಬಗೆಹರಿಸದೆ ಹೋದರೆ ಬಿತ್ತನೆ ಆಲೂಗೆಡ್ಡೆ ಸಮೇತ ಜಿಲ್ಲಾಧಿಕಾರಿ ನಿವಾಸದ ಮುಂದೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ದಯಾನಂದ್ ಹಾಗೂ ಎಪಿಎಂಸಿ ಕಾರ್ಯದರ್ಶಿ ಶ್ರೀನಿವಾಸ್, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಅಧ್ಯಕ್ಷ ಮರಗಲ್ ಮುನಿಯಪ್ಪ, ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಕಿರಣ್, ಬಾಬಾಜಾನ್, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಚಲಪತಿ, ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ, ಕಾಮಸಮುದ್ರ ಮುನಿಕೃಷ್ಣ, ನಾಗಯ್ಯ, ಮುನಿರಾಜು, ಐತಾಂಡಹಳ್ಳಿ ಮುನ್ನಾ, ಬೂದಿಕೋಟೆ ಅನಿಲ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT