ಕೋಲಾರ: ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್ ವೇ ಕಾರಿಡಾರ್‌ಗೆ ಹೆದ್ದಾರಿ ಪ್ರಾಧಿಕಾರವು ಜಮೀನು ವಶಪಡಿಸಿಕೊಂಡು ಪರಿಹಾರ ನೀಡಿಲ್ಲವೆಂದು ತಂದೆ ಹಾಗೂ ಮಗ ಶನಿವಾರ ಕೀಟನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕೋಲಾರದ ಹಾರೋಹಳ್ಳಿ ಬಡಾವಣೆಯ ರೈತ ಕೃಷ್ಣಮೂರ್ತಿ (39) ಮತ್ತು ಇವರ ತಂದೆ ವೆಂಕಟೇಶಪ್ಪ(55) ಆತ್ಮಹತ್ಯೆಗೆ ಯತ್ನಿಸಿದವರು. ಕೃಷ್ಣಮೂರ್ತಿ ಅವರನ್ನು ನಗರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವೆಂಕಟೇಶಪ್ಪ ಮನೆಯಲ್ಲೇ ಇದ್ದು, ಅವರೂ ಅಪಾಯದಿಂದ ಪಾರಾಗಿದ್ದಾರೆ.
ಸರ್ಕಾರ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ಸಿಗದೆ ಲಕ್ಷ್ಮಿಸಾಗರ ಗ್ರಾಮದ ಅಭಿಗೌಡ ಎಂಬ ಮತ್ತೊಬ್ಬ ರೈತ ವಿಷ ಕುಡಿದಿದ್ದು, ಅವರು ಇದೇ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲ್ಲೂಕಿನ ಪಾರ್ಶ್ವಗಾನಹಳ್ಳಿಯ ಎಸ್.ಗೊಲ್ಲಹಳ್ಳಿಯಲ್ಲಿದ್ದು, 4 ಎಕರೆಯಲ್ಲಿ ವೆಂಕಟೇಶಪ್ಪ ಹಾಗೂ ಕೃಷ್ಣಮೂರ್ತಿ ವ್ಯವಸಾಯ ಮಾಡಿಕೊಂಡಿದ್ದರು. ಈ ಪೈಕಿ 2 ಎಕರೆ ಪಿ ನಂಬರ್‌ನಲ್ಲಿದ್ದು, ಸುಮಾರು 13 ಗುಂಟೆಯಷ್ಟು ಭಾಗವನ್ನು ಕಾರಿಡಾರ್ ರಸ್ತೆಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.
‘ಜಮೀನು ಹಾಗೂ ಅದರಲ್ಲಿ ಮಾವು ಮತ್ತು ತೆಂಗಿನ ಮರಗಳನ್ನು ಕತ್ತರಿಸಿ ಹಾಕಿದ್ದು, ಈವರೆಗೆ ಪರಿಹಾರ ಕೊಟ್ಟಿಲ್ಲ. ನಮ್ಮಲ್ಲಿ ಎಲ್ಲಾ ದಾಖಲೆಗಳು ಇವೆ. ಹಣಕ್ಕಾಗಿ ತಾಲ್ಲೂಕು ಕಚೇರಿ ಸೇರಿದಂತೆ ವಿವಿಧ ಕಚೇರಿಗಳಿಗೆ ಅಲೆದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ತಹಶೀಲ್ದಾರ್ ನಮಗೆ ಧಮ್ಕಿ ಹಾಕುತ್ತಿದ್ದಾರೆ. ಪೊಲೀಸರನ್ನು ಬಿಟ್ಟು ಹೆದರಿಸುತ್ತಿದ್ದಾರೆ. ಇದರಿಂದ ಬೇಸರಗೊಂಡು ಪತಿ ಕೃಷ್ಣಮೂರ್ತಿ ಹಾಗೂ ಮಾವ ವೆಂಕಟೇಶಪ್ಪ ವಿಷ ಕುಡಿದಿದ್ದಾರೆ. ಏನಾದರೂ ಅನಾಹುತವಾದರೆ ಅಧಿಕಾರಿಗಳೇ ನೇರ ಹೊಣೆ. ನಮ್ಮ ಭೂಮಿ ಪಡೆದು ನಮ್ಮ ಮೇಲೆಯೇ ದಬ್ಬಾಳಿಕೆ ಮಾಡುತ್ತಿದ್ದಾರೆ’ ಎಂದು ರೈತನ ಪತ್ನಿ ಸೌಮ್ಯಾ ಆರೋಪಿಸಿದರು.
ಶಾಸಕ ಆಸ್ಪತ್ರೆಗೆ ಭೇಟಿ: ಮಾಲೂರು ಶಾಸಕ ಕೆ.ವೈ.ನಂಜೇಗೌಡ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ವೈದ್ಯರೊಂದಿಗೆ ಚರ್ಚಿಸಿದರು.
‘ಸಮಸ್ಯೆಯನ್ನು ಮುಖ್ಯಮಂತ್ರಿ ಮತ್ತು ಕೃಷಿ ಸಚಿವರ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸುವೆ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸುವೆ’ ಎಂದರು.
ಸಂಸದ ಎಸ್.ಮುನಿಸ್ವಾಮಿ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.