ಮಂಗಳವಾರ, ಜನವರಿ 28, 2020
19 °C

ರೈತರ ದಿನಾಚರಣೆ ರಾಷ್ಟ್ರೀಯ ಹಬ್ಬವಾಗಲಿ: ಸಂಸದ ಮುನಿಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರೈತರ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಬೇಕು. ಸರ್ಕಾರದಿಂದ ರೈತರ ದಿನ ಆಚರಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇನೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ರೈತ ದಿನಾಚರಣೆಯಲ್ಲಿ ಮಾತನಾಡಿ, ‘ರಾಜಕೀಯ ಪಕ್ಷಗಳಂತೆ ರೈತ ಸಂಘಟನೆಗಳಲ್ಲಿ ಹಲವು ಬಣಗಳಾಗಿವೆ. ಈ ಪೈಕಿ ಕೆಲ ಸಂಘಟನೆಗಳು ಅಸಲಿಯಾಗಿದ್ದರೆ ಮತ್ತೆ ಕೆಲವು ನಕಲಿ’ ಎಂದು ಕಳವಳ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಸತತ 14 ವರ್ಷಗಳಿಂದ ಬರ ಪರಿಸ್ಥಿತಿ ಇದ್ದರೂ ರೈತರು ಧೃತಿಗೆಟ್ಟಿಲ್ಲ. ರೈತರು ಆತ್ಮವಿಶ್ವಾಸಿಗಳಾಗಿದ್ದು, ಅವರ ಶ್ರಮಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ರೈತರ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಮೊದಲ ಆದ್ಯತೆ ಕೊಡಬೇಕು. ತಾಲ್ಲೂಕು ಹಾಗೂ ಹೋಬಳಿ ಕೇಂದ್ರದಲ್ಲಿ ಪೋಡಿ ಅದಾಲತ್‌ ನಡೆಸಬೇಕು’ ಎಂದು ಸೂಚಿಸಿದರು.

‘ಸದ್ಯದಲ್ಲೇ ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಗೊಂಡು ಜಿಲ್ಲೆಗೆ ನೀರು ಬರಲಿದೆ. ಎತ್ತಿನಹೊಳೆ ಯೋಜನೆ ಬದಲು ಕೃಷ್ಣಾ ನದಿಯಿಂದ ಜಿಲ್ಲೆಗೆ ಸುಲಭವಾಗಿ ನೀರು ತರಬಹುದಿತ್ತು. ಜಿಲ್ಲೆಯಲ್ಲಿ ಸುಮಾರು 2,300 ಕೆರೆಗಳಿವೆ. ಈ ಪೈಕಿ ಬಹುಪಾಲು ಕೆರೆಗಳು ಒತ್ತುವರಿಯಾಗಿವೆ. ಗ್ರಾಮಗಳಲ್ಲಿ ರೈತರೇ ಮುಂದೆ ನಿಂತು ಕೆರೆ ಒತ್ತುವರಿ ತೆರವು ಮಾಡಿಸಬೇಕು’ ಎಂದು ಕೋರಿದರು.

‘ನೀರಿನ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸರ್ಕಾರವು ಅಂತರರಾಜ್ಯ ನದಿ ಜೋಡಣೆ ಕಾಯ್ದೆ ರೂಪಿಸಿದೆ. ಅವಿಭಜಿತ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವಂತೆ ಹಾಗೂ ಜನರ ಸಮಸ್ಯೆ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬಳಿಗೆ ರೈತರ ನಿಯೋಗ ಕರೆದೊಯ್ಯುತ್ತೇವೆ’ ಎಂದು ಭರವಸೆ ನೀಡಿದರು.

‘ರೈತರ ಪರಿಸ್ಥಿತಿ ನೋಡಿದರೆ ಭಯವಾಗುತ್ತದೆ. ರೈತರಿಗೆ ಸಮರ್ಪಕ ಸೌಲಭ್ಯ ನೀಡದಿರುವುದು ದುರಂತ. ಅನ್ನದಾತ ಸುಖೀಭವ ಎನ್ನುವ ಬದಲು ಅಂಗಡಿದಾತ ಸುಖೀಭವ ಎಂಬ ಕಾಲ ಬಂದಿದೆ. ಭವಿಷ್ಯದಲ್ಲಿ ಊಟಕ್ಕಾಗಿ ಮಾತ್ರೆ ಮತ್ತು ಚುಚ್ಚುಮದ್ದು ಅವಲಂಬಿಸಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಆತಂಕ ವ್ಯಕ್ತಪಡಿಸಿದರು.

ದೇಶದ ಬೆನ್ನೆಲುಬು: ‘ರೈತರು ದೇಶದ ಬೆನ್ನೆಲುಬು. ದೇಶದ ಜನಸಂಖ್ಯೆಯಲ್ಲಿ ರೈತರು ಶೇ 68ರಷ್ಟಿದ್ದಾರೆ. ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ರೈತರು ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಉಪ ವಿಭಾಗಾಧಿಕಾರಿ ಸೋಮಶೇಖರ್‌ ಸ್ಮರಿಸಿದರು.

‘ದೇಶವು ಸಂಪೂರ್ಣವಾಗಿ ಕೃಷಿ ಅವಲಂಬಿಸಿದ್ದು, ಸರ್ಕಾರಗಳು ರೈತಪರ ಧೋರಣೆ ತಳೆಯಬೇಕು. ರೈತರ ಬದುಕು ಹಸನಾಗಬೇಕು. ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ಸಿಗಬೇಕು. ದೇಶವು ಸಮಗ್ರವಾಗಿ ಬಡತನದಿಂದ ಹೊರ ಬರಬೇಕು. ಜಿಲ್ಲೆಗೆ ಕೆ.ಸಿ ವ್ಯಾಲಿ ಯೋಜನೆ ನೀರು ಬಂದಿರುವುದರಿಂದ ರೈತರಿಗೆ ಒಳ್ಳೆಯದಾಗಿದೆ. ರೈತ ಸಂಘಟನೆಗಳು ಜನಪರವಾಗಿ ಹೋರಾಟ ನಡೆಸಬೇಕು’ ಎಂದು ಕಿವಿಮಾತು ಹೇಳಿದರು.

ವೆಚ್ಚ ತಗ್ಗಿಸಬೇಕು: ‘ಬೆಳೆ ಮತ್ತು ತಾಂತ್ರಿಕೆಯಲ್ಲಿ ಜಿಲ್ಲೆಯ ರೈತರು ಮುಂಚೂಣಿಯಲ್ಲಿದ್ದಾರೆ. ಆದರೆ, ವ್ಯವಸ್ಥೆಯಲ್ಲಿನ ಲೋಪದಿಂದ ಆರ್ಥಿಕವಾಗಿ ಸಶಕ್ತರಾಗಲು ಸಾಧ್ಯವಾಗುತ್ತಿಲ್ಲ. ಕೃಷಿಗೆ ಕೂಲಿ ಕಾರ್ಮಿಕರ ಸಮಸ್ಯೆ ಎದುರಾಗಿದೆ. ರೈತರು ಆಧುನಿಕ ತಾಂತ್ರಿಕತೆ ಅಳವಡಿಸಿಕೊಂಡು ಕೃಷಿ ಉತ್ಪಾದನಾ ವೆಚ್ಚ ತಗ್ಗಿಸಬೇಕು’ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್‌ ಸಲಹೆ ನೀಡಿದರು.

‘ಇಸ್ರೇಲ್‌ನಲ್ಲಿ ವರ್ಷಕ್ಕೆ ಕೇವಲ 120 ಮಿ.ಮೀ ಮಳೆಯಾಗುತ್ತದೆ. ಆದರೂ ಅಲ್ಲಿ ಕೃಷಿಗೆ ನೀರಿನ ಸಮಸ್ಯೆಯಿಲ್ಲ. ದೇಶದಲ್ಲಿ ವರ್ಷಕ್ಕೆ ಸರಾಸರಿ 570 ಮಿ.ಮೀ ಮಳೆಯಾದರೂ ಕೃಷಿಗೆ ನೀರು ಸಾಲುತ್ತಿಲ್ಲ. ಮಳೆ ನೀರಿನ ಸಂರಕ್ಷಣೆಯಲ್ಲಿ ಇಸ್ರೇಲ್‌ ಮುಂಚೂಣಿಯಲ್ಲಿದೆ. ಅಲ್ಲಿ ಶೇ 90ರಷ್ಟು ನೀರನ್ನು ಮರು ಬಳಕೆ ಮಾಡಲಾಗುತ್ತದೆ’ ಎಂದು ವಿವರಿಸಿದರು.

ದವಸ ಧಾನ್ಯ ವಿತರಣೆ: ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ರಾಗಿ ಮತ್ತು ಭತ್ತದ ರಾಶಿ ಹಾಗೂ ರಾಸುಗಳಿಗೆ ಸಂಘಟನೆ ಸದಸ್ಯರು ಪೂಜೆ ಸಲ್ಲಿಸಿದರು. ಬಡ ಜನರಿಗೆ, ಸಾರ್ವಜನಿಕರಿಗೆ ದವಸ ಧಾನ್ಯ, ತರಕಾರಿ ಮತ್ತು ಆಟೊ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಪುಷ್ಪಲತಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್‌.ಕೆ.ಶಿವಕುಮಾರ್‌, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ, ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ, ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್‌, ಸಂಚಾಲಕ ಕೆ.ಶ್ರೀನಿವಾಸಗೌಡ, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹರಿಕುಮಾರ್ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು