ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಜಿಲ್ಲೆಯ ರೈತರು ಶ್ರಮಜೀವಿಗಳು: ಸಂಸದ

Last Updated 29 ಜುಲೈ 2020, 16:48 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆರೆಗಳು ತುಂಬಿ ರೈತರು ಸಂತೃಪ್ತರಾಗಿ ಬೆಳೆ ಬೆಳೆಯುವಂತಾಗಲಿ’ ಎಂದು ಸಂಸದ ಎಸ್.ಮುನಿಸ್ವಾಮಿ ಆಶಿಸಿದರು.

ತಾಲ್ಲೂಕಿನ ವಕ್ಕಲೇರಿ ಗ್ರಾಮದ ಮಾರ್ಕಂಡೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿ, ‘ಜಿಲ್ಲೆಯ ರೈತರು ಬರಗಾಲದಲ್ಲೂ ಬಂಗಾರದ ಬೆಳೆ ತೆಗೆಯುವ ಶ್ರಮಜೀವಿಗಳಾಗಿದ್ದು, ಎಲ್ಲಿಗೂ ವಲಸೆ ಹೋದವರಲ್ಲ ಹಾಗೂ ಆತ್ಮಹತ್ಯೆ ಮಾಡಿಕೊಂಡವರಲ್ಲ. ಜಿಲ್ಲೆಯಲ್ಲಿ ಮಳೆ ಆರಂಭವಾಗಿದ್ದು, ಉತ್ತಮ ಮಳೆಯಾದರೆ ರೈತರು ಸಂತೃಪ್ತರಾಗುತ್ತಾರೆ’ ಎಂದರು.

‘ಜಿಲ್ಲೆಯಲ್ಲಿ ಕಳೆದೊಂದು ದಶಕದಿಂದ ಬರಗಾಲವಿತ್ತು. ಅನಾವೃಷ್ಟಿಯಿಂದ ಬೆಳೆ ನಷ್ಟವಾಗಿ ರೈತರು ಸಂಕಷ್ಟಕ್ಕೆ ತುತ್ತಾಗಿದ್ದರು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಇಲ್ಲದೆ ರೈತರು ನಷ್ಟ ಅನುಭವಿಸಿದ್ದಾರೆ. ಸದ್ಯ ಉತ್ತಮ ಮಳೆಯಾಗಿ ಬಿತ್ತನೆ ಕಾರ್ಯ ಚುರುಕುಗೊಂಡಿರುವುದರಿಂದ ಈ ಬಾರಿ ಸಮೃದ್ಧ ಬೆಳೆ ಬರುವ ನಿರೀಕ್ಷೆಯಿದೆ’ ಎಂದು ಹೇಳಿದರು.

‘ಕೆ.ಸಿ ವ್ಯಾಲಿ ನೀರು ಜಿಲ್ಲೆಯ ಕೆರೆಗಳಿಗೆ ಹರಿಯುತ್ತಿದೆ. ಈಗಾಗಲೇ ಸಾಕಷ್ಟು ಕೆರೆಗಳು ತುಂಬಿವೆ. ಇನ್ನೂ ಕೆಲ ಕೆರೆಗಳು ತುಂಬಬೇಕಿದೆ. ಈ ನಡುವೆ ಇತ್ತೀಚೆಗೆ ಬಿದ್ದ ಮಳೆಯಿಂದ ಕೆರೆಗಳು ತುಂಬಿವೆ. ಕೆರೆಗಳು ಹೀಗೆಯೇ ಭರ್ತಿಯಾದರೆ ಅಂತರ್ಜಲ ವೃದ್ಧಿಯಾಗಿ ಜಿಲ್ಲೆಯ ನೀರಿನ ಬವಣೆ ಬಗೆಹರಿಯುತ್ತದೆ’ ಎಂದು ಅಭಿಪ್ರಾಯಪಟ್ಟರು.

ಜನಪರ ಸರ್ಕಾರ: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಪ್ರವಾಹ ಪರಿಸ್ಥಿತಿ ಹಾಗೂ ಕೊರೊನಾ ಸಂಕಷ್ಟದ ನಡುವೆ ಒಂದು ವರ್ಷ ಪೂರೈಸಿದ್ದು, ಉತ್ತಮ ಆಡಳಿತ ನೀಡಿದೆ. ಯಡಿಯೂರಪ್ಪ ಅವರಷ್ಟು ರೈತಪರ ಕಾಳಜಿ ಇರುವ ರಾಜಕಾರಣಿ ಮತ್ತೊಬ್ಬರಿಲ್ಲ. ಬಿಜೆಪಿ ಸರ್ಕಾರ ಜನಪರವಾಗಿದೆ. ಲಾಕ್‌ಡೌನ್ ನಡುವೆಯೂ ಸರ್ಕಾರ ರೈತರು, ಕಾರ್ಮಿಕರ ಜನಜೀವನಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಂಡಿದೆ’ ಎಂದು ತಿಳಿಸಿದರು.

‘ವಿರೋಧ ಪಕ್ಷಗಳ ಮುಖಂಡರು ಮಾಡುವ ಟೀಕೆಗೆ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ. ಜನರಿಗೆ ಕಷ್ಟದ ಅರಿವಿದೆ. ಕೆಲಸ ಮಾಡುವವರು ಯಾರು ಎಂದು ಜನರಿಗೆ ಗೊತ್ತಿದೆ. ಮುಂಬರುವ ಚುನಾವಣೆಗಳಲ್ಲಿ ಜನರೇ ಕಾಂಗ್ರೆಸ್‌ ನಾಯಕರಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಗುಡುಗಿದರು.

ಬಿಜೆಪಿ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಕೃಷ್ಣೇಗೌಡ, ಮುಖಂಡರಾದ ಸುರೇಶ್, ಸಂದೇಶ್, ಭಾಸ್ಕರ್, ಉದ್ಯಮಿ ಉಮೇಶ್‌ಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT