ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇತಮಂಗಲ: ಕೆರೆ ಉಳಿವಿಗೆ ರೈತರ ಪ್ರತಿಭಟನೆ

ಗುತ್ತಿಗೆದಾರರ ಬೆದರಿಕೆಗೆ ಜನಪ್ರತಿನಿಧಿಗಳು ನಾಪತ್ತೆ: ಆರೋಪ
Last Updated 5 ಮೇ 2022, 2:28 IST
ಅಕ್ಷರ ಗಾತ್ರ

ಬೇತಮಂಗಲ: ಚೆನ್ನೈ ಕಾರಿಡಾರ್ ರಸ್ತೆ ಕಾಮಗಾರಿಯ ಗುತ್ತಿಗೆದಾರರ ಬೆದರಿಕೆಗೆ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ನಾಪತ್ತೆಯಾಗಿದ್ದು ಹುಡುಕಿ ಕೊಡಬೇಕೆಂದು ಆಗ್ರಹಿಸಿ ರೈತ ಸಂಘದಿಂದ ಬುಡದಿಮಿಟ್ಟ ಕೆರೆಯಲ್ಲಿ ಪ್ರತಿಭಟನೆ ನಡೆಯಿತು.

ಬಳಿಕ ರೈತರು ಕಂದಾಯ ಅಧಿಕಾರಿಗಳ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು. ಬುಡದಿಮಿಟ್ಟ ಕೆರೆಯಲ್ಲಿ ಕೆರೆಗಳಿಗೆ ಶ್ರದ್ಧಾಂಜಲಿ ಅರ್ಪಿಸಿ ಕೆರೆಗಳ ನಾಶದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಐತಂಡಳ್ಳಿ ಮಂಜುನಾಥ ಮಾತನಾಡಿ, ರಸ್ತೆ, ಕೈಗಾರಿಕೆ ಅಭಿವೃದ್ಧಿ ಹೆಸರಿನಲ್ಲಿ ರೈತರ ತಾಳ್ಮೆಯನ್ನು ಸರ್ಕಾರಗಳು ಕೆಣಕುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಶ್ವತ ನೀರಾವರಿ ಯೋಜನೆಗೆ ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡುತ್ತಿದೆ. ಕೆರೆಗಳೇ ಇಲ್ಲದಿದ್ದರೆ ಸಾರ್ವಜನಿಕರ ಹಣವನ್ನು ಖರ್ಚು ಮಾಡಿ ರೂಪಿಸುತ್ತಿರುವ ನೀರಾವರಿ ಯೋಜನೆಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಟೀಕಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಕೆರೆ ಹಾಗೂ ರೈತರ ಬೆಳೆಯನ್ನು ಗುತ್ತಿಗೆದಾರರಿಂದ ರಕ್ಷಣೆ ಮಾಡುವಲ್ಲಿ ಜಿಲ್ಲಾಡಳಿತ ಮರೆತಿದೆ. ಈ ನಿರ್ಲಕ್ಷ್ಯದ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪ್ರತಿಭಟನಾ ಸ್ಥಳಕ್ಕೆ ಕಂದಾಯ ಅಧಿಕಾರಿ ನಾರಾಯಣಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ರವಿ, ಗ್ರಾ.ಪಂ. ಕಾರ್ಯದರ್ಶಿ ಬ್ಯಾಟಪ್ಪ ಹಾಗೂ ಯೋಜನೆಯ ಗುತ್ತಿಗೆದಾರರು ಆಗಮಿಸಿ ರೈತರ ಸಮಸ್ಯೆ ಆಲಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ರಾಮಸಾಗರ ವೇಣು, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಸುರೇಂದ್ರ ರೆಡ್ಡಿ, ಮುಖಂಡರಾದ ಸುರೇಂದ್ರಗೌಡ, ವೆಂಕಟರಾಮೇಗೌಡ, ಸುರೇಶ್‍ಬಾಬು, ಪಾರಂಡಹಳ್ಳಿ ಮಂಜುನಾಥ, ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ತೆರ್ನಹಳ್ಳಿ ಆಂಜಿನಪ್ಪ, ಬಸ್‍ ಮಂಜು, ಈಕಂಬಳ್ಳಿ ಮಂಜುನಾಥ, ಐತಂಡಹಳ್ಳಿ ಮುನ್ನ, ಕಾಮಸಮುದ್ರ ಮುನಿಕೃಷ್ಣ, ಮರಗಲ್ ಮುನಿಯಪ್ಪ, ಆನಂದರೆಡ್ಡಿ, ಯಲುವಳ್ಳಿ ಪ್ರಭಾಕರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT