ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಮಾಳ ರಕ್ಷಣೆಗೆ ಒತ್ತಾಯ

ಹದಗೆಟ್ಟ ತಾಲ್ಲೂಕು ಆಡಳಿತ: ರೈತ ಸಂಘ ಆರೋಪ
Last Updated 22 ಸೆಪ್ಟೆಂಬರ್ 2022, 4:14 IST
ಅಕ್ಷರ ಗಾತ್ರ

ಮುಳಬಾಗಿಲು: ಜಾನುವಾರು ರಕ್ಷಣೆಗೆ ಪ್ರತಿ ಹಳ್ಳಿಯಲ್ಲಿ 10 ಎಕರೆ ಗೋಮಾಳ ಕಾಯ್ದಿರಿಸುವ ಜೊತೆಗೆ ಅಕ್ರಮ ಸಾಗುವಳಿ, ಭೂ ಒತ್ತುವರಿ ತನಿಖೆಗೆ ವಿಶೇಷ ತಂಡ ರಚಿಸಬೇಕು. ಹದಗೆಟ್ಟಿರುವ ತಾಲ್ಲೂಕು ಆಡಳಿತದ ಸುಧಾರಣೆಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿ ರೈತ ಸಂಘದಿಂದ ಜಾನುವಾರು ಸಮೇತ ನಗರದ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.

ರೈತ ಸಂಘ ರಾಜ್ಯ ಘಟಕದ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ರೈತರು, ಕೂಲಿ ಕಾರ್ಮಿಕರ ಜೀವನಾಡಿಯಾಗಿರುವ ಪಶು ಸಂಗೋಪನೆಯ ರಕ್ಷಣೆಗೆ ಹರಸಾಹಸ ಪಡುವಂತಾಗಿದೆ. ದಿನೇ ದಿನೇ ಗೋಮಾಳ ಬಲಾಢ್ಯರ ಪಾಲಾಗುತ್ತಿದೆ. ಜಾನುವಾರು ಮೇಯಿಸಲು ಜಾಗವಿಲ್ಲದೆ ಪಶು ಸಂಗೋಪನೆಯಿಂದ ಗ್ರಾಮೀಣರು ವಿಮುಖರಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಸುಪ್ರೀಂ ಕೋರ್ಟ್ ಆದೇಶದನ್ವಯ ಒಂದು ಸಾವಿರ ಜಾನುವಾರುಗಳಿಗೆ 100 ಎಕರೆ ಗೋಮಾಳ ಮೀಸಲಿಡಬೇಕು. ಈ ಆದೇಶ ಪಾಲಿಸುವಲ್ಲಿ ಕಂದಾಯ ಅಧಿಕಾರಿಗಳು ವಿಫಲವಾಗಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಪಶುಪಾಲನಾ ಕ್ಷೇತ್ರವನ್ನು ನಾಶಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೂಲ ಸೌಕರ್ಯಗಳಿಲ್ಲದೆ ತಾಲ್ಲೂಕು ಆಡಳಿತ ಹದಗೆಟ್ಟಿದೆ. ಗ್ರಾಮೀಣ ಪ್ರದೇಶದಿಂದ ತಾಲ್ಲೂಕು ಕಚೇರಿಗೆ ಬರುವ ಜನಸಾಮಾನ್ಯರನ್ನು ಹೆಜ್ಜೆ ಹೆಜ್ಜೆಗೂ ಶೋಷಣೆ ಮಾಡುವ ದಲ್ಲಾಳಿಗಳ ಹಾವಳಿ ಹೆಚ್ಚಿದೆ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲದೆ ಜನಸಾಮಾನ್ಯರ ಸಮಸ್ಯೆಗೆ ತೊಂದರೆಯಾಗಿದೆ ಎಂದು ದೂರಿದರು.

ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ, ತಾಲ್ಲೂಕಿನಾದ್ಯಂತ ರೈತರು, ಕೂಲಿ ಕಾರ್ಮಿಕರು, ಭೂರಹಿತಬಡವರಿಗೆ ಸಾಗುವಳಿ ಚೀಟಿ ಸಿಗುತ್ತಿಲ್ಲ. ಬಡವರ ಹೆಸರಿನಲ್ಲಿ ಬೆಂಗಳೂರಿನ ರಿಯಲ್ ಎಸ್ಟೇಟ್ ಹಾಗೂ ರಾಜಕಾರಣಿಗಳಿಗೆಅಕ್ರಮವಾಗಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿಕೊಡುತ್ತಿದ್ದಾರೆ. ಬೀದಿಗಳಲ್ಲಿ ಸಾಗುವಳಿ ಚೀಟಿ ಮಾರಾಟ ಮಾಡುವ ದಂಧೆಕೋರರ ವಿರುದ್ಧ ದೂರು ನೀಡಿದರೂ ಇದುವರೆಗೂ ತನಿಖೆ ನಡೆಸಿಲ್ಲ ಎಂದು
ಆರೋಪಿಸಿದರು.

ಶಾಸಕರು ಗುದ್ದಲಿಪೂಜೆ, ಸಭೆ, ಸಮಾರಂಭಗಳಿಗೆ ಸೀಮಿತವಾಗಿದ್ದಾರೆ. ಅಧಿಕಾರಿಗಳ ಪರ ನಿಂತಿದ್ದು ಜನಸಾಮಾನ್ಯರನ್ನು ಮರೆತಿದ್ದಾರೆ. ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಬೇಕು. ಜನಪರ ತಾಲ್ಲೂಕು ಆಡಳಿತಕ್ಕೆ ಒತ್ತು ನೀಡಬೇಕು. ಇಲ್ಲವಾದರೆ ಶಾಸಕರ ಕಚೇರಿ ಮುಂಭಾಗ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಚ್ಚರಿಕೆ ನೀಡಿದರು.

ತಹಶೀಲ್ದಾರ್ ಶೋಭಿತ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಕ್‌ ಪಾಷ, ಬಂಗಾರಿ ಮಂಜು, ಭಾಸ್ಕರ್, ಸುನೀಲ್‌ ಕುಮಾರ್, ರಾಜೇಶ್, ಗುರುಸ್ವಾಮಿ, ಪದ್ಮಘಟ್ಟ ಧರ್ಮ, ಜುಬೇದ್‌ಪಾಷ, ಆದಿಲ್ ಪಾಷ, ವೇಣು, ನವೀನ್, ರಾಮಕೃಷ್ಣಪ್ಪ, ಸಂದೀಪ್ ರೆಡ್ಡಿ, ಸಂದೀಪ್‌ ಗೌಡ, ವೇಣು, ಕಿರಣ್,ಯಲ್ಲಣ್ಣ, ಹರೀಶ್, ಪುತ್ತೇರಿ ರಾಜು, ಗಿರೀಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT