ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡುವು ನೀಡಿದ ಮಳೆರಾಯ: ನೇಸರನ ದರ್ಶನ

Last Updated 13 ನವೆಂಬರ್ 2021, 15:47 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಸತತ 3 ದಿನದಿಂದ ಸುರಿಯುತ್ತಿದ್ದ ಮಳೆರಾಯ ಶನಿವಾರ ಬಿಡುವು ನೀಡಿದ್ದು, ಆಕಾಶದಲ್ಲಿ ನೇಸರನ ದರ್ಶನವಾಯಿತು.

ಜಡಿ ಮಳೆ ಹಾಗೂ ಮೈ ಕೊರೆಯುವ ಚಳಿಯಿಂದ ತತ್ತರಿಸಿದ್ದ ಜಿಲ್ಲೆಯ ಜನರಿಗೆ ಸೂರ್ಯ ದೇವ ಶನಿವಾರ ಬೆಚ್ಚನೆಯ ಹಿತಾನುಭವ ನೀಡಿದ. ಜಡಿ ಮಳೆಯ ಕಾರಣಕ್ಕೆ ಹೊರ ಬರಲಾಗದೆ ಮನೆಗಳಲ್ಲೇ ಉಳಿದಿದ್ದ ಜನರು ಬಿಸಿಲಿಗೆ ಮೈಯೊಡ್ಡಿ ಪುಳಕಿತಗೊಂಡರು.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಕಾರಣ ಜಿಲ್ಲೆಯಾದ್ಯಂತ ಬುಧವಾರದಿಂದ ಮೋಡ ಮುಸುಕಿದ ವಾತಾವರಣವಿತ್ತು. ಜತೆಗೆ ನಿರಂತರವಾಗಿ ತುಂತುರು ಮಳೆ ಸುರಿಯುತ್ತಿತ್ತು. ಅಲ್ಲದೇ, ಶೀತ ಗಾಳಿಯ ತೀವ್ರತೆ ಹೆಚ್ಚಿ ಜಿಲ್ಲೆಯಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಯಾಗಿತ್ತು.

ಸತತ ಮಳೆಯಿಂದ ಅಸ್ತವ್ಯಸ್ತಗೊಂಡಿದ್ದ ಜನಜೀವನ ಸಹಜ ಸ್ಥಿತಿಗೆ ಮರಳಿತು. ಮಳೆಯ ಕಾರಣಕ್ಕೆ ಸ್ಥಗಿತಗೊಂಡಿದ್ದ ವಾಣಿಜ್ಯ ಚಟುವಟಿಕೆಗಳು ಪುನರಾರಂಭವಾದವು. ಮಳೆಯಿಂದಾಗಿ ಜಮೀನುಗಳಲ್ಲಿ ನೆಲಕ್ಕೆ ಬಾಗಿದ್ದ ರಾಗಿ ಪೈರನ್ನು ರೈತರು ಮೇಲಕ್ಕೆ ಎತ್ತಿ ಕಟ್ಟಿದರು.

900 ಎಕರೆ ಬೆಳೆ ನಷ್ಟ: ‘ಸತತ ಮಳೆಯಿಂದ ಜಿಲ್ಲೆಯಲ್ಲಿ ಸುಮಾರು 900 ಎಕರೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ನಷ್ಟವಾಗಿದ್ದು, ಈ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ತಿಳಿಸಿದ್ದಾರೆ.

‘ಮಳೆಯಿಂದ ಆಗಿರುವ ಬೆಳೆ ನಷ್ಟದ ಸಂಬಂಧ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ವರದಿ ಕೊಟ್ಟಿದ್ದಾರೆ. ಮಳೆ ಸಂ‍ಪೂರ್ಣವಾಗಿ ನಿಂತ ನಂತರ ಮತ್ತೊಮ್ಮೆ ಬೆಳೆ ನಷ್ಟದ ಸಮೀಕ್ಷೆ ನಡೆಸಲಾಗುತ್ತದೆ.ಮಳೆಯಿಂದ 2 ಕಡೆ ಮನೆಗಳು ಕುಸಿದಿವೆ ಮತ್ತು ತುಂಬಾ ಹಳೆಯ ಶಾಲಾ ಕಟ್ಟಡಗಳು ಶಿಥಿಲಗೊಂಡಿವೆ. ಈ ಶಾಲಾ ಕಟ್ಟಡಗಳನ್ನು ದುರಸ್ತಿ ಮಾಡಲಾಗುತ್ತದೆ’ ಎಂದು ಹೇಳಿದ್ದಾರೆ.

ನಾಲ್ಕೈದು ದಿನ ಮಳೆ: ಜಿಲ್ಲೆಯಲ್ಲಿ ಇನ್ನೂ ನಾಲ್ಕೈದು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ತಿಳಿಸಿದ್ದಾರೆ.

ನ.14ರಂದು ಬಂಗಾರಪೇಟೆ ತಾಲ್ಲೂಕಿನಲ್ಲಿ 17.9 ಮಿ.ಮೀ, ಕೋಲಾರ ತಾಲ್ಲೂಕಿನಲ್ಲಿ 13.9 ಮಿ.ಮೀ, ಮಾಲೂರು ತಾಲ್ಲೂಕಿನಲ್ಲಿ 23 ಮಿ.ಮೀ, ಮುಳಬಾಗಿಲು ತಾಲ್ಲೂಕಿನಲ್ಲಿ 14.9 ಮಿ.ಮೀ ಹಾಗೂ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 17.8 ಮಿ.ಮೀ ಮಳೆಯಾಗಲಿದೆ. ನ.15ರಂದು ಬಂಗಾರಪೇಟೆ ತಾಲ್ಲೂಕಿನಲ್ಲಿ 18 ಮಿ.ಮೀ, ಕೋಲಾರ ತಾಲ್ಲೂಕಿನಲ್ಲಿ 15.7 ಮಿ.ಮೀ, ಮಾಲೂರು ತಾಲ್ಲೂಕಿನಲ್ಲಿ 18.3 ಮಿ.ಮೀ, ಮುಳಬಾಗಿಲು ತಾಲ್ಲೂಕಿನಲ್ಲಿ 17.8 ಮಿ.ಮೀ ಹಾಗೂ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 15 ಮಿ.ಮೀ ಮಳೆಯಾಗಲಿದೆ ಎಂದು ಹೇಳಿದ್ದಾರೆ.

ನ.16ರಂದು ಬಂಗಾರಪೇಟೆ ತಾಲ್ಲೂಕಿನಲ್ಲಿ 36.5 ಮಿ.ಮೀ, ಕೋಲಾರ ತಾಲ್ಲೂಕಿನಲ್ಲಿ 31.5 ಮಿ.ಮೀ, ಮಾಲೂರು ತಾಲ್ಲೂಕಿನಲ್ಲಿ 34.7 ಮಿ.ಮೀ, ಮುಳಬಾಗಿಲು ತಾಲ್ಲೂಕಿನಲ್ಲಿ 29.7 ಮಿ.ಮೀ, ಶ್ರೀನಿವಾಸಪುರ ತಾಲ್ಲೂಕಿನಲ್ಲಿ 26.6 ಮಿ.ಮೀ ಮಳೆ ಬೀಳಲಿದೆ ಎಂದು ಮಾಹಿತಿ ನೀಡಿದ್ದಾರೆ.

ನ.17ರಂದು ಬಂಗಾರಪೇಟೆ ತಾಲ್ಲೂಕಿನಲ್ಲಿ 28.9 ಮಿ.ಮೀ, ಕೋಲಾರ ತಾಲ್ಲೂಕಿನಲ್ಲಿ 28 ಮಿ.ಮೀ, ಮಾಲೂರು ತಾಲ್ಲೂಕಿನಲ್ಲಿ 29.7 ಮಿ.ಮೀ, ಮುಳಬಾಗಿಲು ತಾಲ್ಲೂಕಿನಲ್ಲಿ 22.5 ಮಿ.ಮೀ, ಶ್ರೀನಿವಾಸಪುರ ತಾಲ್ಲೂಕಿನಲ್ಲಿ 26.7 ಮಿ.ಮೀ ಮಳೆ ಬೀಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT