ಸೋಮವಾರ, ಆಗಸ್ಟ್ 3, 2020
26 °C
ಬೆಳೆಗೆ ಹೆಚ್ಚಿದ ಕಾಡು ಪ್ರಾಣಿಗಳ ಹಾವಳಿ

ಶ್ರೀನಿವಾಸಪುರ | ಕಾಡು ಪ್ರಾಣಿಗೆ ಹೆದರಿ ಕೃಷಿ ಬಿಟ್ಟ ರೈತರು

ಆರ್‌.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಕಾಡು ಪ್ರಾಣಿಗಳು ರೈತರ ನಿದ್ದೆಗೆಡಿಸಿವೆ. ಬೆಳೆಯನ್ನು ತಿಂದು ಹೋಗುವ ಜಿಂಕೆ ಹಾಗೂ ಕಾಡು ಹಂದಿಗಳು ತಲೆ ನೋವಾಗಿ ಪರಿಣಮಿಸಿವೆ.

ತಾಲ್ಲೂಕಿನಲ್ಲಿ ಜಿಂಕೆಗಳ ಸಂಖ್ಯೆ ಹೆಚ್ಚಿದೆ. ಇಲ್ಲಿನ ಕಾಡು ಮೇಡು ಹಾಗೂ ವಿಶಾಲವಾದ ಮಾವಿನ ತೋಟಗಳಲ್ಲಿ ವಾಸಿಸುವ ಜಿಂಕೆಗಳು, ರಾತ್ರಿ ಹೊತ್ತು ಗುಂಪಾಗಿ ಹೊಲ ಹಾಗೂ ತೋಟಗಳಿಗೆ ನುಗ್ಗಿ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ರಾಗಿ, ಅವರೆ, ತೊಗರಿ, ಹಿಪ್ಪುನೇಳೆ, ಕೋಸು ಜಿಂಕೆ ಹಾವಳಿಗೆ ತುತ್ತಾಗುತ್ತಿವೆ. ಅದರಲ್ಲೂ ಕಾಡಂಚಿನ ಬೆಳೆಗಳು ಕಾಡು ಪ್ರಾಣಿಗಳಿಗೆ ಮೇವಾಗುತ್ತಿವೆ.

ತಾಲ್ಲೂಕಿನಲ್ಲಿ, ಮೇಯಲು ಕಾಡಿಗೆ ಹೋದ ಮೇಕೆಗಳೊಂದಿಗೆ ಜಿಂಕೆ ಮರಿಗಳು ಗ್ರಾಮಗಳಿಗೆ ಬಂದಿರುವ ಉದಾಹರಣೆಗಳಿವೆ. ಪಟ್ಟಣದ ಹೊರ ವಲಯದ ಮನೆಗಳ ಬಳಿ ಬಂದು ನೀರು ಕುಡಿದು ಹೋಗಿರುವುದೂ ಉಂಟು. ಕಾಡಿನ ಮಧ್ಯೆ ಹಾದುಹೋಗುವ ರಸ್ತೆಗಳ ನಡುವೆ ಹಗಲು ರಾತ್ರಿ ಎನ್ನದೆ ಜಿಂಕೆಗಳು ಅಡ್ಡಾಡುವುದು ಹೆಚ್ಚಿದೆ.

‘ಅವರೆ ಹೊಲ ಜಿಂಕೆಗಳ ಪಾಲಾಗುತ್ತಿದೆ. ಕಾಯಿ ಗೊಂಚಲುಗಳನ್ನು ತಿಂದು ಹೋಗುತ್ತಿವೆ. ರಾತ್ರಿ ಹೊತ್ತು ಕಾವಲು ಕಾಯುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಾಡು ಹಂದಿ ಹಾಗೂ ಇಲಿಗಳ ಹಾವಳಿಯಿಂದ ಬೆಳೆ ನಷ್ಟ ಉಂಟಾಗುತ್ತಿದೆ’ ಎಂದು ಪಾಳ್ಯ ಗ್ರಾಮದ ರೈತ ಪಿ.ಎಂ. ವೆಂಕಟೇಶರೆಡ್ಡಿ ತಿಳಿಸಿದರು.

ರಾಯಲ್ಪಾಡ್‌ ಸಮೀಪದ ಹಕ್ಕಿ ಪಿಕ್ಕಿ ಕಾಲೊನಿ ನಿವಾಸಿಗಳು ಜಿಂಕೆ ಕಾಟಕ್ಕೆ ಹೆದರಿ ಕೃಷಿಯನ್ನೇ ಬಿಟ್ಟಿದ್ದಾರೆ. ‘ನಾವು ಕಾಡಿನ ನಡುವೆ ರಾಗಿ ಬೆಳೆಯುತ್ತಿದ್ದೆವು. ಜಿಂಕೆಗಳು ತೆನೆ ತಿಂದು ಹೋಗುತ್ತಿದ್ದವು. ವರ್ಷದ ಕಷ್ಟ ಜಿಂಕೆ ಹೊಟ್ಟೆ ಸೇರುತ್ತಿತ್ತು. ಆದ್ದರಿಂದ ಕೃಷಿ ಬಿಟ್ಟು, ಪ್ಲಾಸ್ಟಿಕ್‌ ಹೂ ಕಟ್ಟಿ ವ್ಯಾಪಾರ ಮಾಡುತ್ತಿದ್ದೇವೆ’ ಎಂದು ಲಕ್ಷ್ಮಿ ತಿಳಿಸಿದರು.

ತಾಲ್ಲೂಕಿನ ಗಡಿ ಗ್ರಾಮಗಳ ರೈತರು ನೆಲಗಡಲೆ ಬೆಳೆಯುತ್ತಿದ್ದರು. ಮಳೆ ಆಶ್ರಯದಲ್ಲಿ ಬೆಳೆಯುತ್ತಿದ್ದ ನೆಲಗಡಲೆ ಅವರ ಮುಖ್ಯ ಆರ್ಥಿಕ ಮೂಲವಾಗಿತ್ತು. ಕಾಡುಹಂದಿ ಕಾಟ ಹೆಚ್ಚದ ಮೇಲೆ ನೆಲಗಡಲೆ ಬೆಳೆಯುವುದನ್ನೇ ಬಿಟ್ಟಿದ್ದಾರೆ. ಧೈರ್ಯ ಮಾಡಿ ಬಿತ್ತಿದರೆ, ಕಾವಲು ಕಷ್ಟವಾಗುತ್ತದೆ. ಕಾವಲಿನ ನಡುವೆಯೇ ನೆಲಗಡಲೆ ಹಂದಿಗಳಿಗೆ ಮೇವಾಗುತ್ತದೆ.

ತಾಲ್ಲೂಕಿನ ಕೆಲವೆಡೆಗಳಲ್ಲಿ ನವಿಲು ಕಾಟ ಹೆಚ್ಚಿದೆ. ಕಾಡು ಹಾಗೂ ಮಾವಿನ ತೋಟಗಳಿಂದ ಹಿಂಡು ಹಿಂಡಾಗಿ ಹಾರಿ ಬರುವ ನವಿಲುಗಳು, ರಾಗಿಯಂತಹ ಧಾನ್ಯಗಳನ್ನು ತಿನ್ನುತ್ತಿವೆ.

ವಿವಿಧ ಪ್ರಯೋಗ
ಜಿಂಕೆ ಹಾಗೂ ಹಂದಿ ಹಾವಳಿ ತಡೆಯಲು ರೈತರು ರಾತ್ರಿ ಹೊತ್ತು ಬೆಳೆಯಲ್ಲಿ ಪಟಾಕಿ ಸಿಡಿಸುವುದು, ಬೆಳೆ ಪಕ್ಕದಲ್ಲಿ ಬೆಂಕಿ ಉರಿಸುವುದು, ತೋಟದ ಸುತ್ತಲೂ ದಾರ ಕಟ್ಟುವುದು ಮುಂತಾದ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಆದರೂ ತಡೆಯಲು ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ. ಬೆಳೆಯ ನಡುವೆ ಕೋಲುಗಳನ್ನು ನೆಟ್ಟು, ಖಾಲಿ ಚೀಲ ನೇತುಹಾಕುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.