ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಡಿಎ ಪರೀಕ್ಷೆ ಅಕ್ರಮ: 3ಕ್ಕೆ ಪ್ರತಿಭಟನೆ

ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯ: ವಿವೇಕ್ ಇನ್ಫೋಟೆಕ್‌ ಸಂಸ್ಥೆ ಆರೋಪ
Last Updated 1 ಮಾರ್ಚ್ 2021, 11:44 IST
ಅಕ್ಷರ ಗಾತ್ರ

ಕೋಲಾರ: ‘ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ಖಂಡಿಸಿ ಸಂಸ್ಥೆ ವತಿಯಿಂದ ಮಾರ್ಚ್‌ 3ರಂದು ಬೆಳಿಗ್ಗೆ 9ಕ್ಕೆ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ವಿವೇಕ್ ಇನ್ಫೋಟೆಕ್‌ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎ.ಪ್ರಮೋದ್‌ಕುಮಾರ್‌ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ನಿರಂತರವಾಗಿ ಅಕ್ರಮ ನಡೆಯುತ್ತಲೇ ಇವೆ. ಸರ್ಕಾರಿ ಉದ್ಯೋಗಕ್ಕಾಗಿ ಹಗಲಿರುಳು ಕಷ್ಟಪಟ್ಟು ಓದುವ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಎಫ್‌ಡಿಎ ಪರೀಕ್ಷೆ ಪ್ರಶ್ನೆಪತ್ರಿಕೆ ಈ ಹಿಂದೆ ಸೋರಿಕೆಯಾಗಿತ್ತು. ಈ ಸಂಬಂಧ ಪೊಲೀಸರು ಕೆಲವರನ್ನು ಬಂಧಿಸಿದ್ದರು. ಆದರೆ, ತನಿಖೆ ಪೂರ್ಣಗೊಳ್ಳುವ ಮುನ್ನವೇ ಎಫ್‌ಡಿಎ ಪರೀಕ್ಷೆ ನಡೆಸಲಾಗಿದೆ. ಭಾನುವಾರ (ಫೆ.28) ನಡೆದ ಲಿಖಿತ ಪರೀಕ್ಷೆಯ ಕೀ ಉತ್ತರಗಳು ವಿಜಯಪುರದಲ್ಲಿ ಮೊದಲೇ ದೊರಕಿವೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದ್ದು, ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಜ.24ರಂದು ನಡೆಯಬೇಕಿದ್ದ ಎಫ್‌ಡಿಎ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಕಾರಣಕ್ಕೆ ಅಂತಿಮ ಕ್ಷಣದಲ್ಲಿ ರದ್ದುಪಡಿಸಿ ಫೆ.28ಕ್ಕೆ ಮುಂದೂಡಲಾಗಿತ್ತು. ಆದರೆ, ಭಾನುವಾರ ವಿಜಯಪುರದ ಜೆಎಸ್‌ಎಸ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಡಿ ಗ್ರೂಪ್‌ ನೌಕರನೊಬ್ಬ 96 ಅಂಕಗಳಿಗೆ ಸಿದ್ಧಪಡಿಸಿದ ಉತ್ತರಗಳ ಚೀಟಿಯನ್ನು ಕೇಂದ್ರದಲ್ಲಿ ವಿತರಿಸಿದ್ದಾನೆ’ ಎಂದು ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಿ.ಜಿ.ಮುರಳಿ ಆರೋಪಿಸಿದರು.

ನೀರು ಕೊಡುವ ನೆಪ: ‘ಭಾನುವಾರ ಪರೀಕ್ಷೆ ಆರಂಭಕ್ಕೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಪೂರ್ವ ಯೋಜನೆಯಂತೆ ಉತ್ತರಗಳನ್ನು ಸಣ್ಣ ಚೀಟಿಯಲ್ಲಿ ಬರೆದು ಕುಡಿಯುವ ನೀರು ಕೊಡುವ ನೆಪದಲ್ಲಿ ಕೇಂದ್ರದೊಳಗೆ ಹೋಗಿ ನಿಗದಿಪಡಿಸಿದ ಅಭ್ಯರ್ಥಿಗೆ ನೀಡಲಾಗಿದೆ. ಆ ಡಿ ಗ್ರೂಪ್‌ ನೌಕರನಿಂದಲೇ ಇತರೆ ಅಭ್ಯರ್ಥಿಗಳಿಗೂ ಕೀ ಉತ್ತರಗಳು ತಲುಪಿರುವ ಸಾಧ್ಯತೆಯಿದೆ’ ಎಂದು ಅನುಮಾನ ವ್ಯಕ್ತಪಡಿಸಿದರು.

‘ಪ್ರಶ್ನೆಪತ್ರಿಕೆ ಸೋರಿಕೆಗೆ ಕೆಪಿಎಸ್‌ಸಿಯೇ ಹೊಣೆ. ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ ಜರುಗಿಸಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು. ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೂ ಕೆಪಿಎಸ್‌ಸಿ ಯಾವುದೇ ನೇಮಕಾತಿ ಪರೀಕ್ಷೆ ನಡೆಸಬಾರದು. ಮಾರ್ಚ್‌ 3ರಂದು ನಡೆಯುವ ಪ್ರತಿಭಟನೆಯಲ್ಲಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಎಸ್.ಆರ್.ರಾಕೇಶ್, ಅಭ್ಯರ್ಥಿಗಳಾದ ವಿ.ರಾಜಕುಮಾರ್, ಕೆ.ವಿ.ಶಶಿಕುಮಾರ್‌, ಜಿ.ಎಸ್.ಗೋಪಾಲಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT