ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಕರ್ತವ್ಯವೆಂದು ಭಾವಿಸಿ

ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್‌ ಅಧಿಕಾರಿ ನಾಗೇಂದ್ರಪ್ರಸಾದ್ ಕಿವಿಮಾತು
Last Updated 8 ಏಪ್ರಿಲ್ 2019, 16:04 IST
ಅಕ್ಷರ ಗಾತ್ರ

ಕೋಲಾರ: ‘ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿದಾಗ ಮಾತ್ರ ಪ್ರತಿನಿಧಿಗಳನ್ನು ಪ್ರಶ್ನಿಸುವ ನೈತಿಕತೆ ಇರುತ್ತದೆ’ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಜಿಲ್ಲಾ ನೋಡಲ್‌ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಅಭಿಪ್ರಾಯಪಟ್ಟರು.

ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆ ಸಹಯೋಗದಲ್ಲಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿ, ‘ಪ್ರತಿ ಬಾರಿಯೂ ಶೇ 30ರಷ್ಟು ಮಂದಿ ಮತದಾನದಿಂದ ದೂರ ಉಳಿಯುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘18 ವರ್ಷ ತುಂಬಿದ ಪ್ರತಿಯೊಬ್ಬರೂ ಮತ ಹಾಕಬೇಕು. ಮತದಾನವು ನಮ್ಮ ಕರ್ತವ್ಯವೆಂದು ಭಾವಿಸಬೇಕು. 5 ವರ್ಷಗಳ ಕಾಲ ದೇಶ ಆಳುವ ಹಾಗೂ ಅಭಿವೃದ್ಧಿಯ ನೇತೃತ್ವ ವಹಿಸುವ ಉತ್ತಮ ವ್ಯಕ್ತಿಯ ಆಯ್ಕೆ ಎಲ್ಲರ ಉದ್ದೇಶವಾಗಬೇಕು. ಜಾತಿ, ಧರ್ಮ, ಸ್ಥಳ ಆಧರಿಸಿ ಮತ ಹಾಕಬಾರದು. ನಾವೆಲ್ಲಾ ಭಾರತೀಯರೆಂಬ ಭಾವನೆಯಿಂದ ಮತದಾನದ ಹಕ್ಕು ಚಲಾಯಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಹಣ, ಹೆಂಡದ ಆಮಿಷಗಳಿಗೆ ಒಳಗಾಗದೆ ನೈತಿಕವಾಗಿ ಹಾಗೂ ಕಡ್ಡಾಯವಾಗಿ ಮತ ಹಾಕುವಂತೆ ಮಕ್ಕಳು ಪೋಷಕರಿಗೆ ಅರಿವು ಮೂಡಿಸಬೇಕು. ಪ್ರತಿಯೊಬ್ಬರೂ ಮತ ಹಾಕುವಂತೆ ಪ್ರೇರೇಪಿಸಬೇಕು’ ಎಂದು ಸಲಹೆ ನೀಡಿದರು.

ಅರಿವು ಮುಖ್ಯ: ‘ಮುಂದಿನ ಮೂರ್ನಾಲ್ಕು ವರ್ಷದಲ್ಲಿ ವಿದ್ಯಾರ್ಥಿಗಳಿಗೂ 18 ವರ್ಷ ತುಂಬಿ ಮತದಾರರಾಗುತ್ತೀರಿ. ಹೀಗಾಗಿ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವದ ಅರಿವು ಮೂಡಿಸುವುದು ಮುಖ್ಯ’ ಎಂದು ಶಾಲೆಯ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ಹೇಳಿದರು.

‘ಮತದಾನವು ದೇಶದ ಅಭಿವೃದ್ಧಿ ಹಾಗೂ ಸಮರ್ಥ ನಾಯಕತ್ವದ ದೃಷ್ಟಿಯಿಂದ ಅತ್ಯಂತ ಮಹತ್ವದ ಕಾರ್ಯ. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಪೋಷಕರ ಮನವೊಲಿಸಿ ಶೇ 100 ಮತದಾನ ಆಗುವಂತೆ ಮಾಡಬಹುದು’ ಎಂದು ಹೇಳಿದರು.

ದೂರು ಕೊಡಿ: ‘ಮತಕ್ಕಾಗಿ ಯಾರಾದರೂ ಆಮಿಷ ಒಡ್ಡುತ್ತಿರುವುದು ಗಮನಕ್ಕೆ ಬಂದರೆ ಸಹಾಯವಾಣಿ ಸಂಖ್ಯೆ 1950ಕ್ಕೆ ಕರೆ ಮಾಡಿ ದೂರು ಕೊಡಿ. ದೇಶದ ಸಮಗ್ರ ಅಭಿವೃದ್ಧಿ, ಜನೋಪಯೋಗಿ ಕೆಲಸಗಳಿಗಾಗಿ ಉತ್ತಮ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸಂವಿಧಾನ ನೀಡಿದೆ. ಮತದಾನದ ಹಕ್ಕನ್ನು ವಿವೇಚನೆಯಿಂದ ಬಳಸಿ ಆದರ್ಶ ಸಮಾಜ ಕಟ್ಟಿಕೊಳ್ಳಬಹುದು’ ಎಂದು ಶಿಕ್ಷಕಿ ಫರೀದಾ ತಿಳಿಸಿದರು.

ಶಾಲಾ ಮಕ್ಕಳು ಗ್ರಾಮದ ಮುಖ್ಯ ರಸ್ತೆಗಳಲ್ಲಿ ಜಾಥಾ ನಡೆಸಿ ಜನರಿಗೆ ಮತದಾನದ ಅರಿವು ಮೂಡಿಸಿದರು. ಶಿಕ್ಷಕರಾದ ಎಸ್.ಅನಂತಪದ್ಮನಾಭ್, ಸಿದ್ದರಾಜು, ಸತೀಶ್ ಎಸ್.ನ್ಯಾಮತಿ, ಭವಾನಿ, ಶ್ವೇತಾ, ಸುಗುಣಾ, ಲೀಲಾ, ವೆಂಕಟರೆಡ್ಡಿ, ಸಿ.ಎಲ್.ಶ್ರೀನಿವಾಸಲು, ನಾರಾಯಣಸ್ವಾಮಿ, ಡಿ.ಚಂದ್ರಶೇಖರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT