ಸೈಬರ್‌ ಅಪರಾಧಕ್ಕೆ ಹೆಣ್ಣು ಮಕ್ಕಳು ಬಲಿಪಶು

ಶನಿವಾರ, ಮಾರ್ಚ್ 23, 2019
34 °C
ರಾಷ್ಟ್ರೀಯ ಕಾನೂನು ವಿ.ವಿ ಸಹ ಪ್ರಾಧ್ಯಾಪಕಿ ನಾಗರತ್ನ ವಿಷಾದ

ಸೈಬರ್‌ ಅಪರಾಧಕ್ಕೆ ಹೆಣ್ಣು ಮಕ್ಕಳು ಬಲಿಪಶು

Published:
Updated:
Prajavani

ಕೋಲಾರ: ‘ಮಹಿಳೆ ಹಾಗೂ ಮಕ್ಕಳ ರಕ್ಷಣೆಗೆ ಸಾಕಷ್ಟು ಕಾನೂನುಗಳಿವೆ. ಆದರೆ, ಅವು ಸಮರ್ಪಕವಾಗಿ ಜಾರಿಯಾಗದ ಕಾರಣ ಮಹಿಳೆಯರು ಮತ್ತು ಮಕ್ಕಳು ತೊಂದರೆ ಅನುಭವಿಸುವಂತಾಗಿದೆ’ ಎಂದು ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕಿ ಎ.ನಾಗರತ್ನ ವಿಷಾದಿಸಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಅರಹಳ್ಳಿ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಶುಕ್ರವಾರ ನಡೆದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ‘ಸಮಾಜದಲ್ಲಿ ಸೂಕ್ಷ್ಮ ಜೀವಿಗಳಂತಿರುವ ಮಹಿಳೆಯರು ಹಾಗೂ ಮಕ್ಕಳಿಗೆ ಸಂವಿಧಾನವು ಸಮಾನತೆಯ ಹಕ್ಕು ಕಲ್ಪಿಸಿದೆ. ಆದರೂ ಮಹಿಳೆಯರು ಅವಕಾಶದಿಂದ ವಂಚಿತರಾಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇತ್ತೀಚಿನ ವರ್ಷಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಸೈಬರ್‌ ಅಪರಾಧಗಳಿಗೆ ಹೆಣ್ಣು ಮಕ್ಕಳು ಬಲಿಪಶುವಾಗುತ್ತಿದ್ದಾರೆ. ಆನ್‌ಲೈನ್‌ ಖರೀದಿಯಲ್ಲೂ ಮೋಸಕ್ಕೆ ಒಳಗಾಗುತ್ತಿರುವುದು ನೋವಿನ ಸಂಗತಿ’ ಎಂದು ಹೇಳಿದರು.

‘2008ರಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿ ಬಳಿಕವಷ್ಟೇ ಮೊಬೈಲ್ ಹ್ಯಾಕಿಂಗ್ ಸಂಗತಿ ಹೊರಬಂದಿತು. ಆಗ ಕಾನೂನು ತಿದ್ದುಪಡಿ ಮಾಡಿದರೂ ಇಂದಿಗೂ ಮಹಿಳೆ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಸುರಕ್ಷತೆಯ ಜೀವನ ಇಲ್ಲವಾಗಿದೆ. ಹೈಕೋರ್ಟ್‌ ನ್ಯಾಯಾಧೀಶರು ಹಾಗೂ ಪೊಲೀಸ್‌ ಅಧಿಕಾರಿಗಳೇ ವಂಚನೆಗೊಳಗಾದ ಪ್ರಸಂಗಗಳಿವೆ’ ಎಂದರು.

ತೊಂದರೆಗೆ ಸಿಲುಕುತ್ತಿದ್ದಾರೆ: ‘ಆನ್‌ಲೈನ್‌ ವಹಿವಾಟಿನಲ್ಲಿ ಹೆಚ್ಚಾಗಿ ಮಹಿಳೆಯರೇ ಮೋಸ ಹೋಗುತ್ತಿದ್ದಾರೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಿಂದ ವಿನಾಕಾರಣ ತೊಂದರೆಗೆ ಸಿಲುಕುತ್ತಿದ್ದಾರೆ. ಮೊಬೈಲ್, ಕಂಪ್ಯೂಟರ್‌ನ ಜತೆಗೆ ಟಿ.ವಿಯನ್ನೂ ಹ್ಯಾಕ್‌ ಮಾಡುವ ಕಾಲಘಟ್ಟದಲ್ಲಿದ್ದೇವೆ.

‘ಬ್ಯಾಂಕ್‌ ಖಾತೆ, ರಕ್ತದ ಗುಂಪು ಹೀಗೆ ಯಾವುದೇ ವೈಯಕ್ತಿಕ ವಿವರ ಮತ್ತು ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಡಕ ಮಾಡುವ ಮುನ್ನ ಒಮ್ಮೆ ಆಲೋಚಿಸಿ. ಸಾಮಾಜಿಕ ಜಾಲತಾಣಗಳ ಸರ್ವರ್‌ ಅಮೆರಿಕದಲ್ಲಿದ್ದು, ಸಣ್ಣಪುಟ್ಟ ಸಮಸ್ಯೆ ಸಂಬಂಧ ತನಿಖೆ ಮಾಡುವುದು ಸುಲಭವಲ್ಲ. ಸ್ಥಳೀಯ ಪೊಲೀಸ್ ಅಧಿಕಾರಿಗಳು ತೊಂದರೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅಮೆರಿಕದ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುವುದಿಲ್ಲ’ ಎಂದು ಎಚ್ಚರಿಸಿದರು.

ದೂರು ನೀಡಬೇಕು: ‘ಸಾಕಷ್ಟು ಬಾರಿ ಮಹಿಳೆಯರು ಪರಿಚಿತರಿಂದಲೇ ಮೋಸಕ್ಕೆ ಒಳಗಾಗುತ್ತಾರೆ. ಏನೇ ಸಮಸ್ಯೆ ಎದುರಾದರೂ ತುರ್ತಾಗಿ ಪೊಲೀಸರಿಗೆ ದೂರು ನೀಡಬೇಕು. ತಡವಾದರೆ ವಂಚನೆಯಿಂದ ಕಳೆದುಕೊಂಡ ಹಣ, ವಸ್ತು ಸಿಗುವುದಿಲ್ಲ. ಸೈಬರ್ ಅಪರಾಧ ಪ್ರಕರಣಗಳ ಜ್ಞಾನವಿರುವ ವಕೀಲರ ಸಂಖ್ಯೆ ಕಡಿಮೆಯಿದೆ. ಆದರೆ, ಯಾವುದೇ ಅನ್ಯಾಯವಾದಾಗ ನ್ಯಾಯಾಧೀಶರಿಗೆ ತಾಂತ್ರಿಕವಾಗಿ ಅರ್ಥ ಮಾಡಿಸುವ ಮಟ್ಟಕ್ಕೆ ಸಿದ್ಧರಾದಲ್ಲಿ ಅನುಕೂಲ’ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲೆ ಎಂ.ಅನಿತಾ, ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾನೂನು ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಜೌಹ್ವರಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !