ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಜಿಲ್ಲೆಯಲ್ಲಿ ಕಳೆಗಟ್ಟಿದ ಬೆಳಕಿನ ಹಬ್ಬ

ಬಾನಂಗಳದಲ್ಲಿ ಬಾಣ ಬಿರುಸುಗಳ ಚಿತ್ತಾರ: ಮಕ್ಕಳ ಸಂಭ್ರಮ
Last Updated 28 ಅಕ್ಟೋಬರ್ 2019, 12:35 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಾದ್ಯಂತ ಸೋಮವಾರ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಕಳೆಗಟ್ಟಿತು. ಜಿಲ್ಲೆಯಲ್ಲಿ ನೋಮು ಹಬ್ಬ (ನೋಮುಲ ಪಂಡಗ) ಎಂದೇ ಹೆಸರಾಗಿರುವ ದೀಪಾವಳಿಯನ್ನು ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರು ಪೂಜಾ ಸಾಮಗ್ರಿ ಖರೀದಿಸಲು ಮಾರುಕಟ್ಟೆಗಳಿಗೆ ಮುಗಿಬಿದ್ದರು. ವಸ್ತುಗಳ ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ವಹಿವಾಟು ಜೋರಾಗಿತ್ತು. ಹಳೆ ಬಸ್‌್ ನಿಲ್ದಾಣ, ಎಂ.ಜಿ.ರಸ್ತೆ, ಹೊಸ ಬಸ್‌ ನಿಲ್ದಾಣ, ದೊಡ್ಡಪೇಟೆ, ವಾಸವಿ ದೇವಸ್ಥಾನ ರಸ್ತೆ, ಕಾಳಮ್ಮ ಗುಡಿ ರಸ್ತೆ, ಅಮ್ಮವಾರಿಪೇಟೆ ಸೇರಿದಂತೆ ಪ್ರಮುಖ ವಾಣಿಜ್ಯ ಸ್ಥಳಗಳ ಸುತ್ತಮುತ್ತ ಹೆಚ್ಚಿನ ಜನಜಂಗುಳಿ ಕಂಡುಬಂತು.

ಪಟಾಕಿ, ಹಣ್ಣು, ತರಕಾರಿ, ದಿನಸಿ, ಬಟ್ಟೆ ಹಾಗೂ ಸಿಹಿ ತಿನಿಸು ಅಂಗಡಿಗಳು ಗ್ರಾಹಕರಿಂದ ತುಂಬಿ ಹೋಗಿದ್ದವು. ಪ್ರಮುಖ ರಸ್ತೆಗಳ ಬದಿಯಲ್ಲಿ ಹಾಗೂ ಪಾದಚಾರಿ ಮಾರ್ಗದಲ್ಲಿ ವರ್ತಕರು ಹೂವು, ಹಣ್ಣು, ಬಾಳೆಕಂದು, ಬಿದಿರಿನ ಮೊರ, ನೋಮು ದಾರ, ಮಾವಿನ ಸೊಪ್ಪು ಮಾರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲ ವ್ಯಾಪಾರಿಗಳು ತಳ್ಳುಗಾಡಿಗಳಲ್ಲಿ ಹಬ್ಬದ ಸಾಮಗ್ರಿಗಳನ್ನು ಮಾರುತ್ತಿದ್ದ ದೃಶ್ಯ ಬಡಾವಣೆಗಳಲ್ಲಿ ಕಂಡುಬಂತು.

ಟಿ.ಚನ್ನಯ್ಯ ರಂಗಮಂದಿರ ಮುಂಭಾಗದ ರಸ್ತೆ ಬದಿಯ ಹಣ್ಣಿನ ಅಂಗಡಿಗಳು ಹಾಗೂ ಜೂನಿಯರ್‌ ಕಾಲೇಜು ಮೈದಾನದಲ್ಲಿನ ಪಟಾಕಿ ಅಂಗಡಿಗಳು ಗ್ರಾಹಕರಿಂದ ಗಿಜಿಗುಡುತ್ತಿದ್ದವು. ಹೂವು, ಹಣ್ಣಿನ ಜತೆಗೆ ದಿನಸಿ ಪದಾರ್ಥಗಳ ಬೆಲೆಗಳು ಏರಿಕೆಯಾಗಿದ್ದವು. ಪೂಜಾ ಸಾಮಗ್ರಿಗಳ ಖರೀದಿಗಾಗಿ ಮಾರುಕಟ್ಟೆಗೆ ಬಂದಿದ್ದ ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿತು.

ದೇವಸ್ಥಾನ ಹಾಗೂ ಅಂಗಡಿಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಮನೆ ಅಂಗಳದಲ್ಲಿ ಮಹಿಳೆಯರು ಬಣ್ಣ ಬಣ್ಣದ ರಂಗೋಲಿ ಬಿಡಿಸಿದ್ದರು. ಬಾಗಿಲಿಗೆ ತಳಿರು ತೋರಣ ಕಟ್ಟಿ ಸಿಂಗರಿಸಿದ್ದರು.

ಬಾಗಿನದ ವಾಡಿಕೆ: ದೀಪಾವಳಿ ದಿನ ಕಜ್ಜಾಯ ಮತ್ತು ಬಾಗಿನವನ್ನು ದೇವಾಲಯಗಳಿಗೆ ತೆಗೆದುಕೊಂಡು ಹೋಗುವುದು ವಾಡಿಕೆ. ದೀಪಾವಳಿಯ ಮೊದಲ ದಿನವಾದ ಭಾನುವಾರ ಮಹಿಳೆಯರು ಕಜ್ಜಾಯ ತಯಾರಿಸಲು ಮೀಸಲಿಟ್ಟ ಅಕ್ಕಿಯ ಪಾತ್ರೆಗೆ ನೀರು ತುಂಬಿಸುವ ಹಬ್ಬ ಆಚರಿಸಿದ್ದರು. ಅಮಾವಾಸ್ಯೆ ದಿನದಂದು ಬೆಲ್ಲದ ಪಾಕ ಎತ್ತಿ, ಕಜ್ಜಾಯ ತಯಾರಿಸಿದರು.

ಸಂಪ್ರದಾಯದಂತೆ ಹೊಸ ಪಾತ್ರೆಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಕಜ್ಜಾಯಗಳನ್ನು ತುಂಬಿಸಿ ಬಿದಿರಿನ ಮೊರದಲ್ಲಿ ಇಟ್ಟು ಬಣ್ಣ ಬಣ್ಣದ ನೋಮುದಾರಗಳ ಸಮೇತ ದೇವಾಲಯಕ್ಕೆ ಕೊಂಡೊಯ್ದರು. ದೇವಸ್ಥಾನಗಳಲ್ಲಿ ಗೌರಿ ಕಳಶ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ಕೇದಾರೇಶ್ವರ ವ್ರತ ಆಚರಿಸಲಾಯಿತು. ಅರ್ಚಕರು ಕೇದಾರೇಶ್ವರ ವ್ರತದ ಮಹತ್ವ ಓದಿ ಹೇಳಿದರು.

ನೋಮುದಾರ ಪೂಜೆ: ದೇವಾಲಯಗಳಲ್ಲಿ ಹಳೆ ನೋಮುದಾರ ಪಡೆದುಕೊಂಡು ಹೊಸ ದಾರಗಳಿಗೆ ಪೂಜೆ ಸಲ್ಲಿಸಲಾಯಿತು. ಭಕ್ತರು ಹೊಸ ನೋಮುದಾರಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಿ ಕುಟುಂಬದ ಹಿರಿಯ ಸದಸ್ಯರಿಂದ ಕೈಗೆ ಕಟ್ಟಿಸಿಕೊಂಡರು. ಮತ್ತೆ ಕೆಲವರು ದೇವಾಲಯಗಳಲ್ಲೇ ಹಿರಿಯರಿಂದ ನೋಮುದಾರ ಕಟ್ಟಿಸಿಕೊಂಡರು.

ಮನೆಗಳಲ್ಲಿ ಭಕ್ತಿ ಭಾವದಿಂದ ಗೌರಿ ಪೂಜೆ ನೆರವೇರಿಸಿ ಮಹಿಳೆಯರಿಗೆ ಬಾಗಿನ ಕೊಡಲಾಯಿತು. ವ್ಯಾಪಾರಿಗಳು ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಿದರು. ಹೊಸ ಬಟ್ಟೆ ತೊಟ್ಟಿದ್ದ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಿರಿಯರೂ ಮಕ್ಕಳ ಜತೆ ಪಟಾಕಿ ಸಿಡಿಸಿದರು. ಕತ್ತಲಾಗುತ್ತಿದ್ದಂತೆ ಪಟಾಕಿ ಶಬ್ಧ ಮೇರೆ ಮೀರಿತ್ತು. ಬಾನಂಗಳದಲ್ಲಿ ಬಾಣ ಬಿರುಸುಗಳು ಬಣ್ಣದ ಚಿತ್ತಾರ ಬಿಡಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT