ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಹೋರಾಟ: ಸಂವಿಧಾನದ ಆಶಯಕ್ಕೆ ಧಕ್ಕೆ

ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕ ನಾರಾಯಣಸ್ವಾಮಿ ಆತಂಕ
Last Updated 21 ಫೆಬ್ರುವರಿ 2021, 12:23 IST
ಅಕ್ಷರ ಗಾತ್ರ

ಕೋಲಾರ: ‘ಮೀಸಲಾತಿಯ ಪರ ಮತ್ತು ವಿರುದ್ಧದ ಹೋರಾಟಗಳಿಂದ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗುವ ಅಪಾಯವಿದೆ’ ಎಂದು ವಿಧಾನ ಪರಿಷತ್ ಶಾಸಕ ವೈ.ಎ.ನಾರಾಯಣಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಮಡಿವಾಳ ಜನಾಂಗದ ನೌಕರರ ಕ್ಷೇಮಾಭಿವೃದ್ಧಿ ಸಂಘವು ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕರು, ಗ್ರಾ.ಪಂ ಮತ್ತು ನಗರಸಭೆ ನೂತನ ಸದಸ್ಯರಿಗೆ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟವು ಮುಂದೆ ಸಮಾಜದಲ್ಲಿ ಆರ್ಥಿಕ ಸ್ಥಿತಿಗತಿ ಆಧಾರದ ಮೇಲೆ ಮೀಸಲಾತಿ ನೀಡಬೇಕೆನ್ನುವ ಕೂಗು ಮತ್ತು ಮೀಸಲಾತಿ ಪರಿಷ್ಕರಣೆ ಬಗ್ಗೆ ಚರ್ಚೆ ಹುಟ್ಟು ಹಾಕಲಿದೆ. ಧರ್ಮ ರಕ್ಷಣೆಯ ಹೊಣೆ ಹೊತ್ತ ಸ್ವಾಮೀಜಿಗಳು ಜಾತಿ ಆಧಾರಿತ ವ್ಯವಸ್ಥೆ ಬಲಪಡಿಸುವ ಹಾದಿಯಲ್ಲಿ ಹೋರಾಟಕ್ಕೆ ಇಳಿದಿರುವುದು ವಿಷಾದಕರ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸ್ವಾಮೀಜಿಗಳು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಮತ್ತು ಧ್ವನಿಯಿಲ್ಲದ ಸಮಾಜದ ಕೈಹಿಡಿಯಬೇಕು. ಎಲ್ಲಾ ಜಾತಿಯ ಬಡವರಿಗೆ ಮೀಸಲಾತಿ ಸಿಗಬೇಕು. ಎಲ್ಲಾ ಜಾತಿಯ ಶ್ರೀಮಂತರಿಗೆ ಮೀಸಲಾತಿ ತೆಗೆಯಬೇಕು. ಆಗ ಮಾತ್ರ ದೇಶದಲ್ಲಿ ಸಮಾನತೆ ಸಾಧಿಸಲು ಸಾಧ್ಯ. ಐಎಎಸ್ ಅಧಿಕಾರಿಯ ಮಗನಿಗೆ ಮೀಸಲಾತಿ ಸಿಗುವಂತಾದರೆ ಹಳ್ಳಿಯ ಕಟ್ಟಕಡೆಯ ಬಡವ ಉದ್ಧಾರವಾಗಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು.

‘ಎಲ್ಲಾ ಸಮುದಾಯಗಳ ನಿರೀಕ್ಷೆ ಅರಿತು ಸಾಗಿದರೆ ಮಾತ್ರ ರಾಜಧರ್ಮ ಪಾಲನೆಯಾಗುತ್ತದೆ. ಎಲ್ಲಾ ಜಾತಿಗಳನ್ನು ಜತೆಗೆ ತೆಗೆದುಕೊಂಡು ಹೋಗಬೇಕು. ಇಲ್ಲವಾದರೆ ಸರ್ವರಿಗೂ ಸಮಬಾಳು ಎಂಬ ಮಾತಿಗೆ ಅರ್ಥವಿಲ್ಲ. ಸಮ ಬಾಳಿಗೆ ಸಂವಿಧಾನವೇ ಶಕ್ತಿಯಾಗಿದೆ. ಬೇಡುವ ಪರಿಪಾಠ ಬಿಡೋಣ, ವಿದ್ಯಾವಂತರಾಗಿ ಛಲದಿಂದ ಬದುಕೋಣ ಎಂಬ ಸಂಕಲ್ಪದೊಂದಿಗೆ ಮಕ್ಕಳಿಗೆ ಶಿಕ್ಷಣ ನೀಡಿ’ ಎಂದು ಕಿವಿಮಾತು ಹೇಳಿದರು.

ಹೋರಾಟ ಮಾರಕ: ‘ಮೀಸಲಾತಿಗಾಗಿ ದೊಡ್ಡ ಜಾತಿಗಳ ಹೋರಾಟ ಸರಿಯಲ್ಲ. ಸರ್ಕಾರದ ನೇತೃತ್ವ ವಹಿಸಿರುವವರೇ ಹೋರಾಟದ ಮುಂದಾಳತ್ವ ನೇತೃತ್ವ ವಹಿಸಿರುವುದು ದುರ್ದೈವ’ ಎಂದು ವಿಧಾನ ಪರಿಷತ್ ಶಾಸಕ ಗೋವಿಂದರಾಜು ಮಾರ್ಮಿಕವಾಗಿ ನುಡಿದರು.

‘ಮೀಸಲಾತಿ ಹೋರಾಟ ಸಮಾಜಕ್ಕೆ ಮಾರಕ. ಸತ್ಯ ಮಾತನಾಡಲು ಪಕ್ಷದ ಅಡ್ಡಿ ಇರುವುದರಿಂದ ಸಾಧ್ಯವಾಗುತ್ತಿಲ್ಲ. ಒಕ್ಕಲಿಗರಿಗೆ ಯಾವುದೇ ಪ್ರಾಧಿಕಾರ ಬೇಕಿಲ್ಲ, ನಮಗೆ ದುಡಿಮೆಯೇ ಶಕ್ತಿ. ಸಮುದಾಯದಲ್ಲಿನ ಶ್ರೀಮಂತರೇ ಬಡವರನ್ನು ಮೇಲೆತ್ತಲು ಜೈನ ಸಮುದಾಯದ ಆದರ್ಶ ಪಾಲಿಸಬೇಕು’ ಎಂದು ಸಲಹೆ ನೀಡಿದರು.

ಆದರ್ಶ ಮರೆಯುತ್ತಿದ್ದೇವೆ: ‘ಯಾವುದೇ ಸಮುದಾಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಬಲಗೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದು ಪೋಷಕರ ಧ್ಯೇಯವಾಗಲಿ’ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಆಶಿಸಿದರು.

‘ಸಮಾಜಕ್ಕೆ ಸಮಾನತೆಯ ಬೆಳಕು ನೀಡಿದ ಬಸವಣ್ಣನವರ ಆದರ್ಶ ಮರೆಯುತ್ತಿದ್ದೇವೆ. ಜನರು ಜಾತಿಯ ಸಂಕೋಲೆಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ’ ಎಂದು ನಗರಸಭೆ ಸದಸ್ಯ ಬಿ.ಎಂ.ಮುಬಾರಕ್‌ ವಿಷಾದಿಸಿದರು.

ನೀಟ್‌, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ನಗರಸಭೆ ಮತ್ತು ಗ್ರಾ.ಪಂ ನೂತನ ಸದಸ್ಯರನ್ನು ಪುರಸ್ಕರಿಸಲಾಯಿತು.

ರಾಜ್ಯ ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಯಲ್ಲಪ್ಪ, ಜಿಲ್ಲಾ ಮಡಿವಾಳ ಜನಾಂಗದ ನೌಕರರ ಸಂಘದ ಅಧ್ಯಕ್ಷ ವಿ.ಮಂಜುನಾಥ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ, ಮಡಿವಾಳ ಸಮುದಾಯದ ಮುಖಂಡ ಕೆ.ವಿ.ಅಮರನಾಥ್, ನಗರಸಭೆ ಸದಸ್ಯ ಕೆ.ಎಂ.ಮಂಜುನಾಥ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT