ಮಂಗಳವಾರ, ಮೇ 17, 2022
24 °C
ಜಿ.ಪಂ ಅಧ್ಯಕ್ಷ ವೆಂಕಟೇಶ್‌ ಆರೋಪ

ಪೀಠೋಪಕರಣ ಪೂರೈಕೆಯಲ್ಲಿ ಅಕ್ರಮ: ಬಿಇಒಗಳ ವಿರುದ್ಧ ಕ್ರಿಮಿನಲ್‌ ಪ್ರಕರಣಕ್ಕೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಪೀಠೋಪಕರಣ ಪೂರೈಕೆಯಲ್ಲಿ ಅಕ್ರಮ ನಡೆದಿದ್ದು, ಈ ಸಂಬಂಧ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಆದೇಶಿಸಿದರು.

ಇಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಈ ಹಿಂದೆ ಜಿಲ್ಲೆಯಲ್ಲಿ ಡಿಡಿಪಿಐ ಆಗಿದ್ದ ಕೆ.ರತ್ನಯ್ಯ ಅವರ ಅವಧಿಯಲ್ಲಿ ಶಾಲೆಗಳಿಗೆ ಪೀಠೋಪಕರಣ ಸರಬರಾಜು ಆಗದಿದ್ದರೂ ಬಿಇಒಗಳು ಟೆಂಡರ್‌ದಾರರಿಗೆ ಬಿಲ್‌ ಮಂಜೂರು ಮಾಡಿದ್ದಾರೆ. ಸುಮಾರು ₹ 30 ಲಕ್ಷ ಅವ್ಯವಹಾರ ನಡೆದಿದೆ’ ಎಂದು ಆರೋಪಿಸಿದರು.

‘ರತ್ನಯ್ಯ ಅವರು ಮಾರ್ಚ್‌ ಅಂತ್ಯದಲ್ಲಿ ತರಾತುರಿಯಲ್ಲಿ ಶಾಲಾ ಎಸ್‌ಡಿಎಂಸಿಗಳಿಗೆ ತಲಾ ₹ 1 ಲಕ್ಷ ಬಿಡುಗಡೆ ಮಾಡಿದ್ದಾರೆ. ಟೆಂಡರ್‌ದಾರರ ಖಾತೆಗೆ ಹಣ ವರ್ಗಾವಣೆ ಆಗಿದ್ದರೂ ಈವರೆಗೂ ಪೀಠೋಪಕರಣ ಸರಬರಾಜು ಮಾಡಿಲ್ಲ. ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಬೇಕು’ ಎಂದು ಸೂಚಿಸಿದರು.

‘ಕೃಷಿ ಇಲಾಖೆ ಸವಲತ್ತುಗಳು ಅನರ್ಹರ ಪಾಲಾಗುತ್ತಿವೆ. ಅರ್ಹ ರೈತರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ’ ಎಂದು ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿಗೌಡ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾದೇವಿ, ‘ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿ ಅರ್ಹರಿಗೆ ಸವಲತ್ತು ನೀಡಲಾಗಿದೆ. ಯಾವುದೇ ಅಕ್ರಮ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು. ಆಗ ಮಧ್ಯಪ್ರವೇಶಿಸಿದ ಜಿ.ಪಂ ಸಿಇಒ ಎನ್.ಎಂ.ನಾಗರಾಜ್, ‘ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಜತೆಯಲ್ಲಿ ಕರೆದೊಯ್ದು ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿರುವುದನ್ನು ತೋರಿಸಬೇಕು’ ಎಂದು ಸಲಹೆ ನೀಡಿದರು.

ಶಾಲೆ ಶಿಥಿಲ: ‘ಬೆಟ್ಟಬೆಣಜೇನಹಳ್ಳಿ ಸರ್ಕಾರಿ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಬಿಇಒ ಸ್ಥಳ ಪರಿಶೀಲನೆ ಮಾಡಿ ಒಂದು ವರ್ಷವಾದರೂ ಹಳೇ ಕಟ್ಟಡ ದುರಸ್ತಿ ಮಾಡಿಲ್ಲ’ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್.ಅರುಣ್‌ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.

‘ಶಾಲಾ ಯಾವುದೇ ಕುಸಿಯುವ ಸಾಧ್ಯತೆ ಇದ್ದು, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಕಟ್ಟಡ ಕುಸಿದು ಮಕ್ಕಳಿಗೆ ಅಪಾಯವಾದರೆ ಶಿಕ್ಷಣ ಇಲಾಖೆಯೇ ಜವಾಬ್ದಾರಿ’ ಎಂದು ಗುಡುಗಿದರು. ಆಗ ಸಿಇಒ ನಾಗರಾಜ್‌, ‘ಹಳೇ ಕಟ್ಟಡದಲ್ಲಿ ತರಗತಿ ನಡೆಸಬೇಡಿ. ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಾರಾಯಣಗೌಡಗೆ ತರಾಟೆ: ಸಭೆಯಲ್ಲಿ ಅಂಬೇಡ್ಕರ್‌ ಭವನಗಳ ವಿಚಾರ ಪ್ರಸ್ತಾಪವಾದಾಗ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ನಾರಾಯಣಗೌಡ ಮಾಹಿತಿ ನೀಡಲು ತಡಬಡಾಯಿಸಿದರು.

ಆಗ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್.ಅರುಣ್‌ಪ್ರಸಾದ್, ‘ಹಿಂದಿನ ಸಭೆಯಲ್ಲಿ ಅಂಬೇಡ್ಕರ್‌ ಭವನಗಳ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದಿಂದ ವಾಪಸ್‌ ಪಡೆಯುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಈ ಆದೇಶ ಜಾರಿಯಾಗಿಲ್ಲ. 3 ತಿಂಗಳಾದರೂ ಕಾಮಗಾರಿಯ ಮಾಹಿತಿ ಕೊಟ್ಟಿಲ್ಲ’ ಎಂದು ನಾರಾಯಣಗೌಡರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಧ್ವನಿಗೂಡಿಸಿದ ಜಿ.ಪಂ ಅಧ್ಯಕ್ಷರು, ‘ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಿರಿ. ಸರ್ಕಾರಿ ಅಧಿಕಾರಿಯಾಗಿ ಶಾಸಕರ ಏಜೆಂಟರಂತೆ ವರ್ತಿಸುತ್ತಿರುವ ನಿಮಗ ರಾಜಕೀಯ ತರವಲ್ಲ’ ಎಂದು ನಾರಾಯಣಗೌಡರ ವಿರುದ್ಧ ಕೆಂಡಾಮಂಡಲರಾದರು. ಆಗ ಸಿಇಒ, ‘ಮುಂದೆ ಶಿಷ್ಟಾಚಾರ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸುತ್ತೇವೆ’ ಎಂದು ಭರವಸೆ ನೀಡಿದರು.

ಶಾಸಕ ಕೆ.ಶ್ರೀನಿವಾಸಗೌಡ, ಜಿ.ಪಂ ಉಪಾಧ್ಯಕ್ಷೆ ಕೆ.ಯಶೋದಾ, ಉಪ ಕಾರ್ಯದರ್ಶಿ ಸಂಜೀವಪ್ಪ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು