ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ಪೀಡಿತ ಬಾಲಕಿಗೆ ಹಣಕಾಸು ನೆರವು

Last Updated 10 ಅಕ್ಟೋಬರ್ 2019, 15:36 IST
ಅಕ್ಷರ ಗಾತ್ರ

ಕೋಲಾರ: ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ ತಾಲ್ಲೂಕಿನ 6 ವರ್ಷದ ಬಾಲಕಿಯ ಚಿಕಿತ್ಸೆಗಾಗಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಇಲ್ಲಿ ಗುರುವಾರ ₹ 50 ಸಾವಿರ ಆರ್ಥಿಕ ನೆರವು ನೀಡಿದರು.

ತಾಲ್ಲೂಕಿನ ಬೆತ್ತನಿ ಗ್ರಾಮದ ಸುಮಂತ್‌ಕುಮಾರ್ ಮತ್ತು ಚೈತ್ರಾ ದಂಪತಿಯ ಮಗಳು ಕಾರುಣ್ಯ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಳೆ. ಕಾಯಿಲೆ ಪ್ರಥಮ ಹಂತದಲ್ಲಿರುವುದರಿಂದ ಶೀಘ್ರವೇ ಚಿಕಿತ್ಸೆ ನೀಡಿದರೆ ಬಾಲಕಿ ಗುಣಮುಖಳಾಗುತ್ತಾಳೆ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ.

ಖಾಸಗಿ ಶಾಲಾ ವಾಹನ ಚಾಲಕರಾಗಿರುವ ಸುಮಂತ್‌ಕುಮಾರ್ ಸುಮಾರು ₹ 1.50 ಲಕ್ಷ ಸಾಲ ಮಾಡಿ ಮಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಕಾರುಣ್ಯ ಬೆಂಗಳೂರಿನ ಸೆಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಗೆ ಹೆಚ್ಚಿನ ಚಿಕಿತ್ಸೆ ನೀಡಲು ₹ 7.50 ಲಕ್ಷ ಅಗತ್ಯವಿದೆ. ಮಗಳ ವೈದ್ಯಕೀಯ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಾಲಕಿಯ ಅನಾರೋಗ್ಯದ ಸಂಗತಿ ತಿಳಿದ ಗೋವಿಂದಗೌಡರು ಪೋಷಕರಿಗೆ ಹಣಕಾಸು ನೆರವಿನ ಚೆಕ್‌ ನೀಡಿದರು. ಅಲ್ಲದೇ, ಬಾಲಕಿಯ ಹೆಚ್ಚುವರಿ ಚಿಕಿತ್ಸೆಗೆ ತಗುಲುವ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು.

‘ಕ್ಯಾನ್ಸರ್‌ಪೀಡಿತ ಬಾಲಕಿಯನ್ನು ನೆನೆದರೆ ದೇವರು ಬಡವರಿಗೆ ಏಕೆ ಇಂತಹ ದೊಡ್ಡ ಕಾಯಿಲೆ ನೀಡಿದ ಎಂದು ನೋವಾಗುತ್ತದೆ. ಶಾಲೆಗೆ ಹೋಗಿ ಎಲ್ಲರಂತೆ ಕಲಿಯಬೇಕಾದ ಬಾಲಕಿ ನೋವಿನಿಂದ ದಿನ ದೂಡುತ್ತಿದ್ದಾಳೆ. ಬಾಲಕಿಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಪೋಷಕರು ಕಷ್ಟಕ್ಕೆ ಸಾರ್ವಜನಿಕರು ಸ್ಪಂದಿಸಬೇಕು’ ಎಂದು ಗೋವಿಂದಗೌಡ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT