ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ರಾಜ್ಯಗಳ ಫಲಿತಾಂಶ ರಾಜ್ಯದ ಮೇಲೆ ಪ್ರಭಾವ ಬೀರಲ್ಲ: ಸಿದ್ದರಾಮಯ್ಯ ವಿಶ್ವಾಸ

ರಾಜ್ಯದಲ್ಲಿ ಕಾಂಗ್ರೆಸ್‌ ಗೆಲುವು ಶತಸಿದ್ಧ
Last Updated 13 ಮಾರ್ಚ್ 2022, 13:43 IST
ಅಕ್ಷರ ಗಾತ್ರ

ಕೋಲಾರ: ‘5 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆಯಾಗಿದೆ. ಆದರೆ, ಈ ಫಲಿತಾಂಶ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಖಂಡಿತ ಅಧಿಕಾರಕ್ಕೆ ಬರುತ್ತದೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾವು ಭ್ರಮೆಯಲ್ಲಿ ತೇಲುತ್ತಿಲ್ಲ. ಜನರ ನಾಡಿ ಮಿಡಿತ ಅರಿತು ಮಾತನಾಡುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಇದು ಶತಸಿದ್ಧ. ಜನಾಶೀರ್ವಾದಿಂದ ಬಂದ ಮೇಲೆ ಶಾಸಕರು ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಹೈಕಮಾಂಡ್ ಅದಕ್ಕೆ ಮುದ್ರೆ ಒತ್ತುತ್ತದೆ. ಅದಕ್ಕೆ ಎಲ್ಲರೂ ಬದ್ಧ’ ಎಂದರು.

‘5 ರಾಜ್ಯಗಳ ಪೈಕಿ ಪಂಜಾಬ್‍ನಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆದರೆ, ಅಲ್ಲಿ ಸ್ವಯಂಕೃತ ಅಪರಾಧದಿಂದ ಸೋತಿದ್ದೇವೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಆತ್ಮಾವಲೋಕನಕ್ಕೆ ಇದು ಸಕಾಲ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಹಾಗೆಂದು ನಾಯಕತ್ವ ಬದಲಾವಣೆ ಆಗಲ್ಲ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರೇ ಪಕ್ಷ ಮುನ್ನಡೆಸುತ್ತಾರೆ’ ಎಂದು ತಿಳಿಸಿದರು.

‘ಕಾಂಗ್ರೆಸ್‌ನಲ್ಲಿ ಪ್ರಬಲ ನಾಯಕತ್ವವಿಲ್ಲ ಎಂಬ ವಾದ ಸರಿಯಲ್ಲ. ಮನಮೋಹನ್ ಸಿಂಗ್ 2 ಬಾರಿ ಪ್ರಧಾನಿಯಾಗಿದ್ದಾಗ ಸೋನಿಯಾ ಗಾಂಧಿ ಸಮರ್ಥವಾಗಿ ಪಕ್ಷ ಮುನ್ನಡೆಸಿರಲಿಲ್ಲವೇ? ಬಿಜೆಪಿಯಲ್ಲಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಅವರಿಬ್ಬರೇ ಗೆದ್ದಿದ್ದ ಕಾಲವಿತ್ತು. ಆದರೆ, ಅವರಿಬ್ಬರೇ ಬಿಜೆಪಿಯನ್ನು ಅಧಿಕಾರಕ್ಕೆ ತರಲಿಲ್ಲವೇ? ಅವರು ನಾಯಕರಲ್ವಾ? ಪ್ರಧಾನಿ ಮೋದಿ ವಾಜಪೇಯಿಗಿಂತ ದೊಡ್ಡ ನಾಯಕರಾ?’ ಎಂದು ಪ್ರಶ್ನಿಸಿದರು.

ಚಕಾರ ಎತ್ತಿಲ್ಲ: ‘2013ರ ವಿಧಾನಸಭಾ ಚುನಾವಣೆಯಲ್ಲಿ ಭದ್ರಾವತಿಯಲ್ಲಿ ಸಂಗಮೇಶ್‌ ಅವರನ್ನು ಬಿಟ್ಟು ಸಿ.ಎಂ.ಇಬ್ರಾಹಿಂ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟೆವು. ಆದರೆ, ಅಲ್ಲಿ 3ನೇ ಸ್ಥಾನಕ್ಕೆ ಕುಸಿದ ಇಬ್ರಾಹಿಂಗೆ ನಂತರ ಯೋಜನಾ ಮಂಡಳಿ ಉಪಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿದೆವು. ಈಗ ಅವರು ಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗಲಿಲ್ಲವೆಂದು ಕಾಂಗ್ರೆಸ್‌ನಿಂದ ಹೊರ ಹೋಗಿದ್ದಾರೆ’ ಎಂದು ಟೀಕಿಸಿದರು.

‘ರಾಜ್ಯ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಿದ್ದ ₹ 3 ಸಾವಿರ ಕೋಟಿ ಅನುದಾನವನ್ನು ₹ 880 ಕೋಟಿಗೆ ಇಳಿಸಿದರೂ ಇಬ್ರಾಹಿಂ ಅವರು ಪರಿಷತ್‍ನಲ್ಲಿ ಈ ಬಗ್ಗೆ ಚಕಾರ ಎತ್ತಿಲ್ಲ. ಅವರು ಈಗ ಪಕ್ಷ ಯಾಕೆ ಬಿಟ್ಟರೋ ಗೊತ್ತಿಲ್ಲ. ಕಾಂಗ್ರೆಸ್‌ ತೊರೆದಿರುವ ಅವರಿಗೆ ಒಳ್ಳೆಯದಾಗಲಿ. ಈಗಲೂ ಅವರು ನನ್ನ ಗೆಳೆಯ. ಹೀಗಾಗಿ ಅವರ ಬಗ್ಗೆ ಹೆಚ್ಚು ಮಾತನಾಡಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT