ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಪರಿಹಾರ: ₹ 34 ಲಕ್ಷ ನೀಡಲು ನಿರ್ಣಯ

Last Updated 18 ಆಗಸ್ಟ್ 2019, 13:33 IST
ಅಕ್ಷರ ಗಾತ್ರ

ಕೋಲಾರ: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶಾಶ್ವತ ನಿಧಿಯಿಂದ ₹ 30 ಲಕ್ಷ ಹಾಗೂ ಪದಾಧಿಕಾರಿಗಳಿಂದ ₹ 4 ಲಕ್ಷ ನೀಡಲು ಇಲ್ಲಿ ಭಾನುವಾರ ನಡೆದ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ರಾಜ್ಯ ಸರ್ಕಾರದಿಂದ ಪರಿಷತ್ತಿಗೆ ಬರುವ ಅನುದಾನ ಹೊರತುಪಡಿಸಿ ಶಾಶ್ವತ ನಿಧಿ ಹಾಗೂ ಪದಾಧಿಕಾರಿಗಳು ಸೇರಿ ಒಟ್ಟು ₹ 34 ಲಕ್ಷ ನೀಡಬೇಕು. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬಂದು ಪರಿಹಾರ ಕಾರ್ಯ ಪೂರ್ಣಗೊಂಡ ನಂತರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕೆಂದು ಸಮಿತಿ ಸದಸ್ಯರು ನಿರ್ಣಯ ಕೈಗೊಂಡರು.

ಹೊರ ದೇಶ ಹಾಗೂ ರಾಜ್ಯಗಳಲ್ಲಿ ಪರಿಷತ್ತಿನ ಘಟಕ ಸ್ಥಾಪಿಸಲು ಸದಸ್ಯರ ಸಂಖ್ಯಾಬಲ 500 ಇದ್ದ ಕಾರಣ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಸದಸ್ಯರ ಸಂಖ್ಯೆಯನ್ನು 250ಕ್ಕೆ ನಿಗದಿಪಡಿಸಬೇಕು. ಬಹ್ರೇನ್‌ನಲ್ಲಿ ನಿರ್ಮಿಸುತ್ತಿರುವ ಕನ್ನಡ ಭವನಕ್ಕೆ ಪರಿಷತ್ತಿನಿಂದ ₹ 25 ಲಕ್ಷ ನೀಡಿ, ಭವನದ ಸಭಾಂಗಣಕ್ಕೆ ಪರಿಷತ್ತಿನ ಹೆಸರಿಡುವಂತೆ ಮನವಿ ಮಾಡಬೇಕೆಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಮುಂದಿನ ವರ್ಷ ಎಲ್ಲಿ ದಲಿತ ಸಾಹಿತ್ಯ ಸಮ್ಮೇಳನ ನಡೆಸಬೇಕೆಂದು ಸೆಪ್ಟೆಂಬರ್‌ನಲ್ಲಿ ನಡೆಯುವ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನಿಸಬೇಕು. ಶೇ 50ರ ರಿಯಾಯಿತಿ ದರದಲ್ಲಿ ದಲಿತ ಸಾಹಿತ್ಯ ಸಂಪುಟಗಳನ್ನು ಮಾರಾಟ ಮಾಡಬೇಕು ಎಂದು ಸಭೆಯು ತೀರ್ಮಾನಿಸಿತು.

ಪುಸ್ತಕ ಬಿಡುಗಡೆ: ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌, ‘ನೇಪಾಳಿ ಭಾಷೆಗೆ ಭಾಷಾಂತರವಾಗಿರುವ ಕನ್ನಡದ ಪ್ರಮುಖ 51 ಕವನಗಳನ್ನು ನೇಪಾಳದ ಉಪ ರಾಷ್ಟ್ರಪತಿ ಬಿಡುಗಡೆ ಮಾಡಿದ್ದಾರೆ. ಅದೇ ರೀತಿ ನೇಪಾಳಿ ಭಾಷೆಯ 50 ಕವನಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಕಾರ್ಯ ಮುಗಿದಿದ್ದು, ಆಧುನಿಕ ನೇಪಾಳಿ ಕವನಗಳು ಎಂಬ ಪುಸ್ತಕ ಸದ್ಯದಲ್ಲೇ ಬಿಡುಗಡೆಯಾಗಲಿದೆ’ ಎಂದು ತಿಳಿಸಿದರು.

‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಅಧಿಕಾರಾವಧಿಯನ್ನು 5 ವರ್ಷಕ್ಕೆ ಹೆಚ್ಚಿಸಿರುವುದು ಸೇರಿದಂತೆ ಹಲವು ನಿಯಮಗಳ ತಿದ್ದುಪಡಿ ಸಂಬಂಧ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ. ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದರೂ ತಡೆಯಾಜ್ಞೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಈಗಾಗಲೇ ಹೊಸ ನಿಯಮ ಜಾರಿಯಾಗಿದ್ದು, ನ್ಯಾಯಾಲಯದಲ್ಲಿ ನಮ್ಮ ವಿರುದ್ಧವಾಗಿ ತೀರ್ಪು ಬಂದರೆ ಆ ಕ್ಷಣವೇ ಅಧ್ಯಕ್ಷ ಸ್ಥಾನ ಬಿಟ್ಟುಕೊಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT