ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಪರಿಹಾರ: ರಾಜಕೀಯ ಬೇಡ

ಕಾಂಗ್ರೆಸ್‌– ಜೆಡಿಎಸ್ ಮುಖಂಡರ ವಿರುದ್ಧ ಸಂಸದ ಮುನಿಸ್ವಾಮಿ ಆಕ್ರೋಶ
Last Updated 16 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಕೋಲಾರ: ‘ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವು ನೀಡುತ್ತಿರುವುದಕ್ಕೂ ಸಹಿಸಿಕೊಳ್ಳಲಾಗದವರು ರಾಜಕೀಯ ಬಣ್ಣ ಕಟ್ಟುತ್ತಿದ್ದಾರೆ’ ಎಂದು ಸಂಸದ ಎಸ್.ಮುನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನೆರೆ ಸಂತ್ರಸ್ತರಿಗೆ ಬಿಜೆಪಿ ವತಿಯಿಂದ ಸಂಗ್ರಹಿಸಿದ್ದ 45 ಟನ್ ಪರಿಹಾರ ಸಾಮಗ್ರಿ ಕೊಂಡೊಯ್ದ ವಾಹನಗಳಿಗೆ ಇಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ‘ಜನಪರ ಕೆಲಸ ಮಾಡುವುದನ್ನು ಕಾಂಗ್ರೆಸ್, ಜೆಡಿಎಸ್‌ ಮುಖಂಡರು ಸಹಿಸುವುದಿಲ್ಲ. ಮೇಲ್ನೋಟಕ್ಕೆ ಅವರು ಜನಪರರಂತೆ ಮಾತನಾಡುತ್ತಾರೆ’ ಎಂದು ಟೀಕಿಸಿದರು.

‘ಪ್ರವಾಹದಿಂದ ಹತ್ತಾರು ಜಿಲ್ಲೆಗಳ ಜನ ತತ್ತರಿಸಿದ್ದು, ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಪ್ರತಿಯೊಬ್ಬರೂ ಸಂತ್ರಸ್ತರ ನೆರವಿಗೆ ನಿಂತು ಕೈಲಾದ ಸಹಾಯ ಮಾಡಬೇಕು. ನೆರೆ ಸಂತ್ರಸ್ತರ ಕಷ್ಟದಲ್ಲಿ ಎಲ್ಲರೂ ಭಾಗಿಯಾಗಬೇಕು. ಈ ವಿಚಾರದಲ್ಲಿ ರಾಜಕೀಯ ಬೆರೆಸಬಾರದು’ ಎಂದು ಹೇಳಿದರು.

‘ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಂಗ್ರಹಿಸಿರುವ 45 ಟನ್ ಸಾಮಗ್ರಿಯನ್ನು ಮುಖ್ಯಮಂತ್ರಿಯವರು ಸೂಚಿಸಿದ ಕಡೆ ವಿತರಣೆ ಮಾಡಲಾಗುವುದು. ಬಿಜೆಪಿ ಕಾರ್ಯಕರ್ತರು ನೆರೆ ಸಂತ್ರಸ್ತರಿಗಾಗಿ ರಾಜ್ಯದೆಲ್ಲೆಡೆ ಪರಿಹಾರ ಸಾಮಗ್ರಿ ಸಂಗ್ರಹಿಸುತ್ತಿದ್ದು, ಈ ಸಾಮಗ್ರಿಗಳನ್ನು ಪ್ರಾಮಾಣಿಕವಾಗಿ ನಿರಾಶ್ರಿತರಿಗೆ ತಲುಪಿಸುತ್ತೇವೆ’ ಎಂದು ತಿಳಿಸಿದರು.

‘ಉತ್ತರ ಕರ್ನಾಟಕ ಭಾಗದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಇದರಿಂದ ಡ್ಯಾಂಗಳು ತುಂಬಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಆದರೆ, ಬಯಲುಸೀಮೆಯ ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಮಳೆಯಾಗದೆ ಬರ ಎದುರಾಗಿದೆ. ಒಂದೊಂದು ಕಡೆ ಒಂದೊಂದು ರೀತಿಯ ಸಮಸ್ಯೆಯಿದೆ. ಸಮಸ್ಯೆ ಪರಿಹಾರಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಸುಳ್ಳು ಆರೋಪ: ‘ಪಕ್ಷದ ಕಾರ್ಯಕರ್ತರ ತಂಡ ಮೂರ್ನಾಲ್ಕು ದಿನಗಳಿಂದ ಸಾಕಷ್ಟು ಆಹಾರ ಸಾಮಗ್ರಿ ಮತ್ತು ಹಣ ಸಂಗ್ರಹಿಸಿದ್ದು, ಅನೇಕ ದಾನಿಗಳು ಕೈಲಾದ ಸಹಾಯ ಮಾಡಿದ್ದಾರೆ’ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಓಂಶಕ್ತಿ ಚಲಪತಿ ವಿವರಿಸಿದರು.

‘ಕೆಲವರು ಸತ್ಯ ಅರಿಯದೆ ರಾಜಕೀಯ ದುರುದ್ದೇಶದಿಂದ ಕಾರ್ಯಕರ್ತರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ವಿರೋಧಿಗಳ ಟೀಕೆಗೆ ಕಿವಿಗೊಡುವುದಿಲ್ಲ. ಕೆಲಸ ಮಾಡಿ ತೋರಿಸುತ್ತೇವೆ’ ಎಂದು ಸವಾಲು ಹಾಕಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಮಾಜಿ ಶಾಸಕ ವೈ.ಸಂಪಂಗಿ, ನಗರ ಘಟಕದ ಅಧ್ಯಕ್ಷ ಎಂ.ಪಿ.ನಾರಾಯಣಸ್ವಾಮಿ, ಸದಸ್ಯರಾದ ರಾಮಚಂದ್ರ, ತಿಮ್ಮರಾಯಪ್ಪ, ಸುರೇಶ್, ಮುನಿರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT