ಗುರುವಾರ , ನವೆಂಬರ್ 14, 2019
18 °C

ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಒಂದೇ ಕಂತಿನಲ್ಲಿ ಮನೆ ಬಾಡಿಗೆ: ಸಚಿವ ಆರ್.ಅಶೋಕ್

Published:
Updated:

ಕೋಲಾರ: ‘ಪ್ರವಾಹ ಪೀಡಿತ ಕುಟುಂಬಗಳಿಗೆ 5 ತಿಂಗಳ ಮನೆ ಬಾಡಿಗೆಯನ್ನು ಒಂದೇ ಕಂತಿನಲ್ಲಿ ನೀಡಲು ನಿರ್ಧರಿಸಲಾಗಿದೆ’ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ಸದ್ಯ ಮನೆ ಬಾಡಿಗೆಗೆ ₹ 5 ಸಾವಿರ ನೀಡಲಾಗಿದೆ. ಆದರೆ, ಕೆಲವೆಡೆ ಮನೆ ಮಾಲೀಕರು ಮುಂಗಡ ಹಣ ಕೇಳುತ್ತಿರುವುದರಿಂದ 5 ತಿಂಗಳ ಬಾಡಿಗೆ ಹಣ ₹ 25 ಸಾವಿರವನ್ನು ಒಂದೇ ಬಾರಿಗೆ ನೀಡಲು ಯೋಜನೆ ರೂಪಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಪ್ರವಾಹ ಪೀಡಿತ ಪ್ರತಿ ಕುಟುಂಬಕ್ಕೆ ₹ 10 ಸಾವಿರ ಪರಿಹಾರ ಮತ್ತು ಮನೆ ನಿರ್ಮಾಣಕ್ಕೆ ₹ 5 ಲಕ್ಷ ನೀಡಲಾಗುತ್ತಿದೆ. ಶೆಡ್ ನಿರ್ಮಿಸಿಕೊಳ್ಳುವವರಿಗೆ ₹ 50 ಸಾವಿರ ಕೊಡಲಾಗುತ್ತಿದೆ. ಶೇ 15ರಿಂದ 75ರಷ್ಟು ಹಾನಿಗೊಂಡಿರುವ ಮನೆಗಳ ಮಾಹಿತಿಯನ್ನು ತಹಶೀಲ್ದಾರ್‌ಗಳಿಂದ ಪಡೆದು ಹಾನಿ ಸರಿಪಡಿಸಿಕೊಳ್ಳಲು ಸಂತ್ರಸ್ತರ ಬ್ಯಾಂಕ್ ಖಾತೆಗೆ ನೇರವಾಗಿ ಒಂದೇ ಕಂತಿನಲ್ಲಿ ಹಣ ಬಿಡುಗಡೆ ಮಾಡುತ್ತೇವೆ’ ಎಂದರು.

‘ಪರಿಹಾರ ವಿತರಣೆಯಲ್ಲಿ ಅಕ್ರಮ ತಡೆಯಲು ಚೆಕ್ ನೀಡುವ ಬದಲಿಗೆ ಆರ್‌ಟಿಜಿಎಸ್‌ ಮೂಲಕ ಸಂತ್ರಸ್ತರಿಗೆ ಪರಿಹಾರ ಹಣ ಪಾವತಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ. ಕರ್ನಾಟಕದಲ್ಲಿ ಮಾತ್ರ ಪ್ರವಾಹ ಉಂಟಾಗಿಲ್ಲ. ಮಹಾರಾಷ್ಟ್ರ, ಗುಜರಾತ್‌ನಲ್ಲೂ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ಹಾನಿ ವರದಿ ಆಧರಿಸಿ ಕೇಂದ್ರ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡುತ್ತದೆ. ಪರಿಹಾರ ನೀಡಿಕೆಯಲ್ಲಿ ಬಿಜೆಪಿ ದ್ವೇಷ ರಾಜಕಾರಣ ಮಾಡುವುದಿಲ್ಲ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)