ಆಷಾಢದಲ್ಲೇ ಹೂವಿನ ಬೆಲೆ ಗಗನಮುಖಿ

ಮಂಗಳವಾರ, ಜೂಲೈ 23, 2019
25 °C

ಆಷಾಢದಲ್ಲೇ ಹೂವಿನ ಬೆಲೆ ಗಗನಮುಖಿ

Published:
Updated:
Prajavani

ಕೋಲಾರ: ಶ್ರಾವಣ ಮಾಸ ಆರಂಭಕ್ಕೂ ಮುನ್ನವೇ ಸ್ಥಳೀಯ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಗಗನಮುಖಿಯಾಗಿದ್ದು, ಹೂವು ಬೆಳೆಗಾರರಲ್ಲಿ ಮಂದಹಾಸ ಮೂಡಿದೆ.

ಬರ ಪರಿಸ್ಥಿತಿಯ ಕಾರಣಕ್ಕೆ ನೀರಿನ ಸಮಸ್ಯೆ ಎದುರಾಗಿದ್ದು, ಹೂವು ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಹೂವಿನ ಬೆಳೆ ಪ್ರಮಾಣ ಕುಸಿದಿರುವುದರಿಂದ ಮಾರುಕಟ್ಟೆಯಲ್ಲಿ ಹೂವಿನ ಆವಕ ಕಡಿಮೆಯಾಗಿದೆ. ಬೇಡಿಕೆಗೆ ಹೋಲಿಸಿದರೆ ಮಾರುಕಟ್ಟೆಗೆ ಬರುತ್ತಿರುವ ಹೂವಿನ ಪ್ರಮಾಣ ತುಂಬಾ ಕಡಿಮೆಯಿದೆ.

ಜಿಲ್ಲೆಯಲ್ಲಿ ಪ್ರಮುಖವಾಗಿ ಸೇವಂತಿಗೆ, ಗುಲಾಬಿ, ಚೆಂಡು ಹೂವು, ಕನಕಾಂಬರ, ಕಾಕಡ, ಮಲ್ಲಿಗೆ ಹೂವು ಬೆಳೆಯಲಾಗುತ್ತದೆ. ಜಿಲ್ಲಾ ಕೇಂದ್ರದ ಹಳೆ ಬಸ್‌ ನಿಲ್ದಾಣದ ಬಳಿಯ ಮಾರುಕಟ್ಟೆಯ ಮಳಿಗೆಗಳಲ್ಲಿ ತಾತ್ಕಾಲಿಕವಾಗಿ ಹೂವಿನ ವಹಿವಾಟು ನಡೆಯುತ್ತಿದೆ.

ಮಾರುಕಟ್ಟೆಯಲ್ಲಿ ಬೆಳಿಗ್ಗೆ 10 ಗಂಟೆ ವೇಳೆಗೆ ಹೂವಿನ ವಹಿವಾಟು ಆರಂಭವಾಗುತ್ತದೆ. ಮಾರುಕಟ್ಟೆಗೆ ಜಿಲ್ಲೆಯ ಜತೆಗೆ ಪಕ್ಕದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ತಮಿಳುನಾಡಿನ ಹೊಸೂರಿನಿಂದ ಹೆಚ್ಚಿನ ಪ್ರಮಾಣದಲ್ಲಿ ಹೂವು ಬರುತ್ತದೆ. ಪ್ರತಿನಿತ್ಯ ಮಧ್ಯಾಹ್ನ 12 ಗಂಟೆ ವೇಳೆಗೆ ತಾಜಾ ಹೂವಿನ ಆವಕವಾಗುತ್ತದೆ. ಅದಕ್ಕೂ ಮುನ್ನ ಹಿಂದಿನ ದಿನ ಖರೀದಿಯಾಗದೆ ಉಳಿದ ಹೂವಿನ ವಹಿವಾಟು ನಡೆಯುತ್ತದೆ.

ಹೂವು ಮಾರುಕಟ್ಟೆಗೆ ಬಂದ ಕ್ಷಣ ಮಾತ್ರದಲ್ಲಿ ಬಿಡಿ ಹೂವು ಕಟ್ಟುವವರು ಹಾಗೂ ಸಗಟು ವ್ಯಾಪಾರಿಗಳು ಸರಕು ಖರೀದಿ ಮಾಡುತ್ತಾರೆ. ರಾತ್ರಿ 8 ಗಂಟೆವರೆಗೂ ಹೂವಿನ ವಹಿವಾಟು ನಡೆಯುತ್ತದೆ. ಶುಕ್ರವಾರ ಏಕಾದಶಿ ಹಬ್ಬ ಇರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಗುರುವಾರ ಹೂವಿಗೆ ಹೆಚ್ಚಿನ ಬೇಡಿಕೆಯಿತ್ತು.

ಆದರೆ, ಹೂವಿನ ಆವಕ ಕುಸಿದ ಕಾರಣ ಬೆಲೆ ಗಗನಕ್ಕೇರಿತು. ಸೇವಂತಿ ಹೂವಿನ ಬೆಲೆ ಕೆ.ಜಿಗೆ ₹ 140, ಗುಲಾಬಿ ₹ 160, ಕನಕಾಂಬರ ₹ 800, ಮಲ್ಲಿಗೆ ₹ 600, ಕಾಕಡ ₹ 600 ಹಾಗೂ ಚೆಂಡು ಹೂವು ₹ 50 ಇತ್ತು. ಹೂವು ಖರೀದಿಗಾಗಿ ಮಾರುಕಟ್ಟೆಗೆ ಬಂದಿದ್ದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿತು. ಬೆಲೆ ಹೆಚ್ಚಳದ ಕಾರಣಕ್ಕೆ ಗ್ರಾಹಕರು ತಮ್ಮ ಆರ್ಥಿಕ ಶಕ್ತಿಗೆ ಅನುಗುಣವಾಗಿ ಅಲ್ಪ ಪ್ರಮಾಣದಲ್ಲಿ ಹೂವು ಖರೀದಿಸಿದರು.

ಸಂಜೆ 3 ಗಂಟೆ ವೇಳೆಗೆ ಸಾಕಷ್ಟು ಮಳಿಗೆಗಳಲ್ಲಿ ಹೂವಿನ ಸರಕು ಖಾಲಿಯಾಗಿತ್ತು. ಹೂವು ಖರೀದಿಗಾಗಿ ಮಾರುಕಟ್ಟೆಗೆ ಬಂದ ಗ್ರಾಹಕರು ಚಿಲ್ಲರೆ ಅಂಗಡಿಗಳತ್ತ ಮುಖ ಮಾಡಿದರು. ಆಷಾಢ ಮಾಸದಲ್ಲೇ ಹೂವಿನ ಬೆಲೆ ಏರಿಕೆಯಾಗಿರುವುದು ಗ್ರಾಹಕರಿಗೆ ಬೇಸರ ತರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !