ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಧಾನ್ಯ ವಿತರಣೆ: ಎಚ್ಚರ ವಹಿಸಿ

ಶಾಲಾ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಗೌಡ ಸೂಚನೆ
Last Updated 4 ಏಪ್ರಿಲ್ 2020, 14:15 IST
ಅಕ್ಷರ ಗಾತ್ರ

ಕೋಲಾರ: ‘ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಮಕ್ಕಳಿಗೆ ಆಹಾರ ಭದ್ರತೆ ಕಾಯ್ದೆಯಡಿ ಬಿಸಿಯೂಟದ ಆಹಾರಧಾನ್ಯ ವಿತರಿಸಲಾಗುತ್ತಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಹೇಳಿದರು.

ನಗರದ ನೂತನ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಶುಕ್ರವಾರ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕಾಗಿ ಆಹಾರ ಧಾನ್ಯಗಳನ್ನು ವಿತರಿಸಿ ಮಾತನಾಡಿ, ‘ಮಕ್ಕಳ ಪೋಷಕರು ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರ ಧಾನ್ಯ ಪಡೆಯಬೇಕು’ ಎಂದು ಮನವಿ ಮಾಡಿದರು.

‘ಕೊರೊನಾ ಸೋಂಕಿನ ಭೀತಿ ಕಾರಣಕ್ಕೆ ಮಕ್ಕಳ ಮನೆಗೆ ಬಿಸಿಯೂಟದ ಆಹಾರ ಧಾನ್ಯ ತಲುಪಿಸುವಂತೆ ಇಲಾಖೆ ಸೂಚನೆ ನೀಡಿದೆ. ತಾಲ್ಲೂಕಿನಲ್ಲಿ ಈಗಾಗಲೇ ಶೇ 90ರಷ್ಟು ಮಕ್ಕಳಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗಿದೆ. ಆಹಾರ ಧಾನ್ಯ ವಿತರಣೆಯಲ್ಲಿ ಲೋಪವಾಗದಂತೆ ಶಿಕ್ಷಕರು ಎಚ್ಚರಿಕೆ ವಹಿಸಬೇಕು’ ಎಂದು ಸೂಚಿಸಿದರು.

‘ಸರ್ಕಾರಿ ಶಾಲೆಗಳಿಗೆ ಬರುವ ಬಹುಪಾಲು ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾಗಿದ್ದಾರೆ. ಶಾಲೆಯಲ್ಲಿ ನೀಡುವ ಬಿಸಿಯೂಟವು ಮಕ್ಕಳ ಪೌಷ್ಟಿಕತೆ ಹಾಗೂ ಆರೋಗ್ಯ ಕಾಪಾಡಲು ಅತ್ಯಗತ್ಯ. ಪೋಷಕರು ಪಡೆದ ಆಹಾರ ಧಾನ್ಯಗಳನ್ನು ಸದ್ಬಳಕೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಆಹಾರ ಭದ್ರತಾ ಕಾಯ್ದೆ ಅನ್ವಯ ಮಕ್ಕಳಿಗೆ ಆಹಾರ ಧಾನ್ಯ ಪ್ರಮಾಣದ ವೆಚ್ಚ ಹಾಗೂ ಪರಿವರ್ತನಾ ವೆಚ್ಚ ಸೇರಿಸಿ ಅಕ್ಕಿ, ತೊಗರಿ ಬೇಳೆಯನ್ನು ಸರ್ಕಾರಿ ರಜೆ ದಿನ ಹೊರತುಪಡಿಸಿ ಏ.10ರವರೆಗೂ ಲೆಕ್ಕಾಚಾರ ಹಾಕಿ ಒಂದೇ ಬಾರಿಗೆ ವಿತರಿಸಲಾಗುತ್ತಿದೆ’ ಎಂದು ವಿವರಿಸಿದರು.

‘1ನೇ ತರಗತಿಯಿಂದ 5ನೇ ತರಗತಿವರೆಗಿನ ಪ್ರತಿ ಮಗುವಿಗೆ ದಿನವೊಂದಕ್ಕೆ 100 ಗ್ರಾಂ ಅಕ್ಕಿ, 50 ಗ್ರಾಂ ತೊಗರಿಬೇಳೆ ಹಾಗೂ 6ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ ಮಕ್ಕಳಿಗೆ ದಿನಕ್ಕೆ 150 ಗ್ರಾಂ ಅಕ್ಕಿ, 75 ಗ್ರಾಂ ತೊಗರಿ ಬೇಳೆಯಂತೆ ವಿತರಿಸಲಾಗುತ್ತಿದೆ. ಎಲ್ಲಾ ಪೋಷಕರು ಆಹಾರ ಧಾನ್ಯ ಪಡೆಯಬೇಕು. ಆಹಾರ ಧಾನ್ಯದ ಕೊರತೆಯಾದರೆ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕರ ಗಮನಕ್ಕೆ ತರಬೇಕು’ ಎಂದು ಮಾಹಿತಿ ನೀಡಿದರು.

ಸಾಮಾಜಿಕ ಅಂತರ: ‘ಕೊರೊನಾ ಸೋಂಕಿ ತಡೆಗೆ ಸಾಮಾಜಿಕ ಅಂತರ ಬಹಳ ಮುಖ್ಯ. ಇದರ ಜತೆಗೆ ಸ್ವಚ್ಛತೆಗೆ ಒತ್ತು ಕೊಡಿ. ಮಕ್ಕಳು ವಿನಾಕಾರಣ ಮನೆಯಿಂದ ಹೊರಬಂದು ರಸ್ತೆಗಳಲ್ಲಿ ತಿರುಗಾಡಬಾರದು. 8 ಮತ್ತು 9ನೇ ತರಗತಿಯ ಮಕ್ಕಳಿಗೆ ಈ ಬಾರಿ ಪರೀಕ್ಷೆಯಿಲ್ಲ’ ಎಂದು ಹೇಳಿದರು.

‘ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಓದು ಮುಂದುವರಿಸಬೇಕು. ಆತ್ಮಸ್ಥೈರ್ಯ ಕಳೆದುಕೊಳ್ಳದೆ ಪರೀಕ್ಷೆಗೆ ಸಿದ್ಧರಾಗಬೇಕು. ರಜೆ ಅವಧಿಯನ್ನು ಸಂಪೂರ್ಣವಾಗಿ ಓದಿಗೆ ಮೀಸಲಿಡಬೇಕು. ಪೋಷಕರು ಮಕ್ಕಳಿಗೆ ಧೈರ್ಯ ತುಂಬಿ ಕಲಿಕೆಯತ್ತ ಗಮನ ಹರಿಸುವಂತೆ ಮಾಡಿ’ ಎಂದು ಕಿವಿಮಾತು ಹೇಳಿದರು.

‘ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆಹಾರ ಧಾನ್ಯ ಪಡೆಯಲು ಒಂದೇ ಬಾರಿಗೆ ಬರಬಾರದು. ಕೊರೊನಾ ಸೋಂಕಿನ ಕಾರಣಕ್ಕೆ ಪ್ರತಿನಿತ್ಯ ಕೆಲವರಿಗೆ ಮಾತ್ರ ಆಹಾರ ಧಾನ್ಯ ನೀಡಲಾಗುತ್ತಿದೆ. ಸರದಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು’ ಎಂದು ಶಾಲೆಯ ಉಪ ಪ್ರಾಂಶುಪಾಲ ವಿ.ರುದ್ರಪ್ಪ ತಿಳಿಸಿದರು.

ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣಪ್ಪ, ಶಿಕ್ಷಕರಾದ ಪ್ರಭಾಕರ್, ಕಾಳಿದಾಸ, ಉಮೇರಾ ಫಾತಿಮಾ, ಹೇಮಂತ್, ನಾಗೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT