ಶನಿವಾರ, ಡಿಸೆಂಬರ್ 14, 2019
23 °C
ರಾಜ್ಯ ಅಂಗನವಾಡಿ ನೌಕರರ ಸಂಘದ ಧರಣಿ: ಹುದ್ದೆ ಭರ್ತಿಗೆ ಮನವಿ

ಅಂಗನವಾಡಿಯಲ್ಲಿ ಎಲ್‌ಕೆಜಿ ಆರಂಭಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಆರಂಭಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಇಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ ಎದುರು ಧರಣಿ ನಡೆಸಿದರು.

ಪ್ರವಾಸಿ ಮಂದಿರದ ಬಳಿಯಿಂದ ಎಂ.ಜಿ.ರಸ್ತೆ, ಅಮ್ಮವಾರಿ ಪೇಟೆ, ಮೆಕ್ಕೆ ವೃತ್ತದ ಮಾರ್ಗವಾಗಿ ಜಿ.ಪಂವರೆಗೆ ಮೆರವಣಿಗೆ ಬಂದ ಸಂಘದ ಸದಸ್ಯರು, ‘ಅಂಗನವಾಡಿ ನೌಕರರಿಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಮನಾದ ವೇತನ ನೀಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದ ನಗರ ಮತ್ತು ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯುರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು. ಕಾರ್ಯಕರ್ತೆಯರು ಹಾಗೂ ಅಡುಗೆ ಸಹಾಯಕಿಯರ ಹುದ್ದೆ ಖಾಲಿ ಇರುವುದರಿಂದ ಹಾಲಿ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಿದೆ’ ಎಂದು ಸಂಘದ ರಾಜ್ಯ ಘಟಕದ ಉಪಾಧ್ಯಕ್ಷೆ ಲೀಲಾವತಿ ಹೇಳಿದರು.

‘ನಿಗದಿತ ಸಂಬಳಕ್ಕೆ ಕೆಲಸ ಮಾಡುತ್ತಿರುವ ನೌಕರರು ಶೇ ೨೬ರಷ್ಟಿದ್ದಾರೆ. ಇತರರು ಸ್ವಯಂ ಉದ್ಯೋಗ, ಅರೆಕಾಲಿಕ, ಸಾಂದರ್ಭಿಕ, ಗುತ್ತಿಗೆ ಉದ್ಯೋಗಿಗಳಾಗಿದ್ದಾರೆ. ಉದಾರೀಕರಣ ನೀತಿ ಅಪ್ಪಿಕೊಂಡು ಮುದ್ದಾಡುತ್ತಿರುವ ಸರ್ಕಾರ ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುತ್ತಿದೆ. ಆಹಾರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಯೋಜನೆಗಳ ಜವಾಬ್ದಾರಿಯನ್ನು ಬೇರೆಡೆಗೆ ವರ್ಗಾಯಿಸಿ ಬಲಹೀನಗೊಳಿಸುತ್ತಿದೆ’ ಎಂದು ಕಿಡಿಕಾರಿದರು.

‘ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯಲ್ಲಿ ೩ ವರ್ಷದಿಂದ ೮ ವರ್ಷದವರೆಗೆ ಒಂದು ವರ್ಗೀಕರಣ ಮಾಡಿ ಮಾಧ್ಯಮವನ್ನು ಶಿಕ್ಷಣ ಇಲಾಖೆಯಡಿ ತೆರೆಯಬೇಕೆಂದು ಶಿಫಾರಸ್ಸು ಮಾಡಲಾಗಿದೆ. ರಾಜ್ಯದಲ್ಲಿ ೨೦೧೯ರ ಮೇ ತಿಂಗಳಲ್ಲಿ ಮೂರೂವರೆ ವರ್ಷ ಮೇಲ್ಪಟ್ಟ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಈಗಾಗಲೇ ಆರಂಭಿಸಲಾಗಿದೆ’ ಎಂದು ತಿಳಿಸಿದರು.

ಎರಡು ಪಟ್ಟು ಹಣ: ‘ಶಿಕ್ಷಣ ಇಲಾಖೆಯ ಹೊಸ ಸುತ್ತೋಲೆಯು ಐಸಿಡಿಎಸ್ ಯೋಜನೆಯ ತದ್ರೂಪವೇ ಹೊರತು ಬೇರೆಯಲ್ಲ. ಯೋಜನೆಯಲ್ಲಿ ಪ್ರಸ್ತಾಪಿಸಿರುವ ಕಲಿಕೆ ಸ್ವರೂಪವು ಈಗಾಗಲೇ ಅಂಗನವಾಡಿ ಕೇಂದ್ರಗಳಲ್ಲಿ ಜಾರಿಯಲ್ಲಿದೆ’ ಎಂದು ವಿವರಿಸಿದರು.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಪೂರಕ ಪೌಷ್ಟಿಕ ಆಹಾರ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ₹ 4,200 ಕೋಟಿ ಖರ್ಚು ಮಾಡಲಾಗುತ್ತಿದೆ. ಸರ್ಕಾರ ಈ ಹಣವನ್ನು ಸದ್ಬಳಕೆ ಮಾಡುವ ಬದಲು ಶಿಕ್ಷಣ ಇಲಾಖೆ ಮೂಲಕ ಒಂದೇ ಮಗುವಿಗೆ ಎರಡು ಪಟ್ಟು ಹಣ ಖರ್ಚು ಮಾಡಲು ಹೊರಟಿರುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು.

ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಲಕ್ಷ್ಮೀದೇವಮ್ಮ, ಜಿಲ್ಲಾ ಘಟಕದ ಕಾರ್ಯದರ್ಶಿ ನಾಗರತ್ನಮ್ಮ, ಸದಸ್ಯರಾದ ಈಶ್ವರಮ್ಮ, ಲಕ್ಷ್ಮಮ್ಮ, ಕಲ್ಪನಾ, ವಿ.ಮಂಜುಳಾ, ವರಲಕ್ಷ್ಮೀ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)