ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಪೈಪೋಟಿ: ದ್ವಿತಳಿ ಗೂಡು ಉತ್ಪಾದಿಸಿ

ರೈತರಿಗೆ ರೇಷ್ಮೆ ಇಲಾಖೆ ಉಪ ನಿರ್ದೇಶಕ ಆಂಜನೇಯಗೌಡ ಕಿವಿಮಾತು
Last Updated 11 ನವೆಂಬರ್ 2020, 14:14 IST
ಅಕ್ಷರ ಗಾತ್ರ

ಕೋಲಾರ: ‘ಗುಣಮಟ್ಟದ ದ್ವಿತಳಿ ರೇಷ್ಮೆಗೂಡು ಉತ್ಪಾದಿಸುವ ಮೂಲಕ ವಿದೇಶಿ ಪೈಪೋಟಿ ಮೆಟ್ಟಿ ನಿಲ್ಲಲು ರೈತರು ರೇಷ್ಮೆ ಕೃಷಿಯಲ್ಲಿ ಆಧುನಿಕ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು’ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ಆಂಜನೇಯಗೌಡ ಕಿವಿಮಾತು ಹೇಳಿದರು.

ತಾಲ್ಲೂಕಿನ ಗಂಗಾಪುರ ಗ್ರಾಮದಲ್ಲಿ ಬುಧವಾರ ನಡೆದ ರೈತರಿಂದ ರೈತರಿಗೆ ರೇಷ್ಮೆ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಚೀನಾ ರೇಷ್ಮೆ ಆಮದಿನಿಂದ ದೇಶದ ರೇಷ್ಮೆ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದು’ ಎಂದು ಸಲಹೆ ನೀಡಿದರು.

‘ರೇಷ್ಮೆ ಇಲಾಖೆಯು ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಅತಿ ಹೆಚ್ಚು ಮಾನವ ದಿನ ಸೃಜಿಸಿದೆ. ಹಿಪ್ಪುನೇರಳೆ ಬೇಸಾಯ ಅಭಿವೃದ್ಧಿಪಡಿಸಿ ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೇರಿದೆ. ಚೀನಾ ರೇಷ್ಮೆ ಆಮದು ತಡೆ ಜತೆಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭದಾಯಕವಾಗಿ ರೇಷ್ಮೆ ಕೃಷಿ ನಿರ್ವಹಣೆ ಮಾಡಲು ರೈತರು ತಾಂತ್ರಿಕ ಅರಿವು ಪಡೆಯಬೇಕು. ಗುಣಮಟ್ಟದ ರೇಷ್ಮೆಗೂಡು ಉತ್ಪಾದಿಸಿದರೆ ಚೀನಾ ರೇಷ್ಮೆ ಆಮದು ನಿಲ್ಲುತ್ತದೆ’ ಎಂದರು.

‘ನೂಲು ಬಿಚ್ಚಾಣಿಕೆದಾರರು ಗುಣಮಟ್ಟದ ಕೊರತೆಯ ನೆಪ ಮಾಡಿಕೊಂಡು ಚೀನಾ ರೇಷ್ಮೆಗೆ ಬೇಡಿಕೆಯೊಡ್ಡುತ್ತಾರೆ. ಸರ್ಕಾರ ವಿದೇಶಿ ರೇಷ್ಮೆ ಆಮದು ಸುಂಕ ಹೆಚ್ಚಿಸಬೇಕು. ದೇಶದ ರೈತರು ಗುಣಮಟ್ಟದ ರೇಷ್ಮೆ ಉತ್ಪಾದಿಸಿದರೆ ನೂಲು ಬಿಚ್ಚಾಣಿಕೆದಾರರು ಸ್ವದೇಶಿ ನೂಲು ಖರೀದಿಸುತ್ತಾರೆ’ ಎಂದು ತಿಳಿಸಿದರು.

ರೈತ ಉತ್ಪಾದಕ ಸಂಸ್ಥೆ: ‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ರಾಜ್ಯ ಸರ್ಕಾರದ ಕೃಷಿ ಮತ್ತು ಜಲಾನಯನ ಇಲಾಖೆ ಅಧೀನದಲ್ಲಿ ರೈತ ಉತ್ಪಾದಕ ಸಂಸ್ಥೆಗಳನ್ನು ಆರಂಭಿಸಲಾಗಿದೆ. ದಲ್ಲಾಳಿಗಳ ಹಾವಳಿ ತಪ್ಪಿಸಿ ಸೂಕ್ತ ಮಾರುಕಟ್ಟೆ ಒದಗಿಸುವ ಉದ್ದೇಶ ಹೊಂದಿದ್ದು, ರೈತರು ಸಂಸ್ಥೆ ರಚನೆಗೆ ಮುಂದಾಗಬೇಕು’ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್‌ ಮನವಿ ಮಾಡಿದರು.

‘ವೇಮಗಲ್, ವಕ್ಕಲೇರಿ ಸೇರಿದಂತೆ ಒಂದು ರೈತ ಉತ್ಪಾದಕ ಸಂಸ್ಥೆ ರಚಿಸಲಾಗುತ್ತಿದೆ. ಇದರಿಂದ ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗುತ್ತದೆ ಮತ್ತು ರೈತರಿಗೆ ಅನ್ಯಾಯವಾಗುವುದಿಲ್ಲ. ಹೊಸದಾಗಿ ಹಿಪ್ಪುನೇರಳೆ ನಾಟಿಗೆ ನರೇಗಾ ಯೋಜನೆಯಲ್ಲಿ ಸಹಾಯಧನ ಸೌಲಭ್ಯಗಳ ನೀಡಲಾಗುತ್ತದೆ. ರೈತರು ನರೇಗಾ ಯೋಜನೆಯ ಲಾಭ ಪಡೆದು ಹಿಪ್ಪುನೇರಳೆ ತೋಟ ಅಭಿವೃದ್ಧಿಪಡಿಸಬೇಕು’ ಎಂದು ಹೇಳಿದರು.

2ನೇ ಸ್ಥಾನ: ‘ವಾತಾವರಣದಲ್ಲಿ ಶ್ಯೆತ್ಯಾಂಶ ಪ್ರಮಾಣ ಹೆಚ್ಚಾದರೆ ಸುಣ್ಣಕಟ್ಟು ರೋಗ ಬರುತ್ತದೆ. ಈ ಬಗ್ಗೆ ರೈತರು ಎಚ್ಚರ ವಹಿಸಬೇಕು. ರೇಷ್ಮೆ ಉತ್ಪಾದನೆಯಲ್ಲಿ ದೇಶವು ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ. ಜಿಲ್ಲೆಯ ರೇಷ್ಮೆಗೂಡಿಗೆ ಹೆಚ್ಚಿನ ಬೇಡಿಕೆಯಿದೆ. ರೇಷ್ಮೆ ಇಲಾಖೆಯಲ್ಲಿ ಹಲವು ಯೋಜನೆಗಳಿದ್ದು, ರೈತರು ಇವುಗಳನ್ನು ಸದ್ಬಳಕೆ ಮಾಡಿಕೊಂಡು ಗುಣಮಟ್ಟದ ಹಿಪ್ಪುನೇರಳೆ ಬೆಳೆಯಬೇಕು’ ಎಂದು ತಿಳಿಸಿದರು.

ರೇಷ್ಮೆ ಇಲಾಖೆ ಚನ್ನಪಟ್ಟಣದ ಸಹಾಯಕ ನಿರ್ದೇಶಕ ರಮೇಶ್, ರೇಷ್ಮೆ ಬೆಳೆ, ರೋಗ, ಊಜಿ ನೊಣ ಮತ್ತು ಬಯೋ ಡಿಕಾಂಪೋಸರ್ ಬಳಕೆ ಬಗ್ಗೆ ರೈತರಿಗೆ ಅರಿವು ಮೂಡಿಸಿದರು. ಚನ್ನಪಟ್ಟಣ ತರಬೇತಿ ಶಾಲೆಯ ಸಹಾಯಕ ನಿರ್ದೇಶಕ ಪಶುಪತಿ ಅವರು ಹಿಪ್ಪುನೇರಳೆ ತೋಟದ ನಿರ್ವಹಣೆ ಹಾಗೂ ರೋಗಗಳ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.

ರೇಷ್ಮೆ ಕೃಷಿ ವಿಸ್ತರಣಾಧಿಕಾರಿಗಳಾದ ಎಂ.ಎಸ್.ಕಲ್ಯಾಣಸ್ವಾಮಿ, ಎನ್.ಚಂದ್ರಶೇಖರಗೌಡ, ರೈತ ಉತ್ಪಾದಕ ಸಂಸ್ಥೆ ಸಂಯೋಜಕ ಧನಂಜಯ, ಪ್ರದರ್ಶಕ ಎನ್.ವಾಸುದೇವ, ಪ್ರಗತಿಪರ ರೈತರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT