ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವನ ವಿಕೃತಿಯಿಂದ ಅರಣ್ಯ ನಾಶ

ಉಪನ್ಯಾಸದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್‌ ಕಳವಳ
Last Updated 13 ಫೆಬ್ರುವರಿ 2019, 16:11 IST
ಅಕ್ಷರ ಗಾತ್ರ

ಕೋಲಾರ: ‘ಪ್ರಸ್ತುತ ದಿನಗಳಲ್ಲಿ ಮಾನವನ ವಿಕೃತ ಚಟುವಟಿಕೆಗಳಿಂದ ಅರಣ್ಯ ನಾಶವಾಗಿ ಕಾಡು ಪ್ರಾಣಿಗಳು ನಾಡಿಗೆ ಪ್ರವೇಶಿಸುತ್ತಿವೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್‌ ಕಳವಳ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆಯು ತಾಲ್ಲೂಕಿನ ಚಿಕ್ಕಹಸಾಳ ಗ್ರಾಮದಲ್ಲಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ’ ಕುರಿತು ಉಪನ್ಯಾಸದಲ್ಲಿ ಮಾತನಾಡಿ, ‘ಮನುಷ್ಯ ಹಣ ಸಂಪಾದನೆಗಾಗಿ ಅರಣ್ಯ ಸಂಪತ್ತು ನಾಶಪಡಿಸುತ್ತಿದ್ದಾನೆ’ ಎಂದು ಹೇಳಿದರು.

‘ಮನುಷ್ಯ ಕಾಡು ಪ್ರವೇಶಿಸುತ್ತಿರುವುದರಿಂದ ಅರಣ್ಯ ನಾಶವಾಗುತ್ತಿದೆ. ಹೀಗಾಗಿ ಕಾಡು ಪ್ರಾಣಿಗಳಿಗೆ ಅರಣ್ಯದಲ್ಲಿ ಆಹಾರ, ನೀರು ಸಿಗದೆ ನಾಡಿನತ್ತ ಮುಖ ಮಾಡಿವೆ. ವಿನಾಶದ ಅಂಚಿನಲ್ಲಿರುವ ಅರಣ್ಯ ಸಂಪತ್ತಿನ ರಕ್ಷಣೆಗೆ ರಾಜ್ಯ ಸರ್ಕಾರವು ಕೃಷಿ ಅರಣ್ಯ ಎಂಬ ಚಟುವಟಿಕೆ ಆರಂಭಿಸಿದೆ. ಈ ಚಟುವಟಿಕೆಗೆ ಎಲ್ಲರೂ ಕೈಜೋಡಿಸಬೇಕು’ ಎಂದರು.

‘ಕೃಷಿ ಅರಣ್ಯ ಎಂದರೆ ಮಾನವನು ವ್ಯವಸಾಯದ ಮೂಲಕ ಅರಣ್ಯ ಅಭಿವೃದ್ಧಿಪಡಿಸುವುದು. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನ ಹೆಚ್ಚಿದ್ದು, ಅರಣ್ಯ ನಾಶದಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ. ವೃಕ್ಷೊ ರಕ್ಷತಿ ರಕ್ಷಿತ: ಎಂಬ ಧ್ಯೇಯ ವಾಕ್ಯದಡಿ ಸಾಲುಮರದ ತಿಮ್ಮಕ್ಕ ಅವರು ಆಲದ ಕೊನೆಗಳನ್ನು ನೆಟ್ಟು ಪೋಷಿಸಿ ಪರಿಸರ ಪ್ರೇಮಿಯಾಗಿ ಗುರುತಿಸಿಕೊಂಡಿದ್ದಾರೆ’ ಎಂದು ಸ್ಮರಿಸಿದರು.

ಚಿಪ್ ಅಳವಡಿಕೆ: ‘ಅರಣ್ಯದಲ್ಲಿರುವ ಸ್ವಾಭಾವಿಕ ಗಿಡಗಳನ್ನು ಬೆಳೆಸುವುದು ಕಷ್ಟವಲ್ಲ. ಸರ್ಕಾರವು ಈ ಗಿಡಗಳನ್ನು ಕೃಷಿ ಜಮೀನಿನಲ್ಲೂ ಬೆಳೆಸುವುದಕ್ಕೆ ಸಾಕಷ್ಟು ಅವಕಾಶ ಹಾಗೂ ಸೌಲಭ್ಯ ಒದಗಿಸುತ್ತಿದೆ. ಅರಣ್ಯ ಸಸಿಗಳಾದ ತೇಗ, ಬೀಟೆ, ಶ್ರೀಗಂಧ ಬೆಳೆಯುವುದಕ್ಕೆ ರೈತಾಪಿ ವರ್ಗ ಭಯಪಡುತ್ತಿದೆ. ಆದರೆ, ತಾಂತ್ರಿಕತೆಯಲ್ಲಿ ಅಭಿವೃದ್ಧಿ ಸಾಧಿಸಿರುವ ಸರ್ಕಾರವು ಇಂತಹ ಮರಗಳ ಒಳಗೆ ಚಿಪ್ ಕಾರ್ಡ್‌ ಅಳವಡಿಸುತ್ತಿದೆ’ ಎಂದು ವಿವರಿಸಿದರು.

‘ರೈತರು ಅರಣ್ಯ ಗಿಡಗಳಾದ ಕಾಡು ಬೇವು, ಹುಣಸೆ, ನೇರಳೆ, ಸಿಲ್ವರ್, ಹಲಸು ರೀತಿಯ ಗಿಡಗಳನ್ನು ನೆಡುವ ಮೂಲಕ ಹೆಚ್ಚಿನ ಆದಾಯ ಗಳಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಜತೆಗೆ ಅರಣ್ಯ ಸಂಪತ್ತು ವೃದ್ಧಿಸುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಶ್ರೀಗಂಧ ಮರದಿಂದ ಎಣ್ಣೆ ತೆಗೆಯುತ್ತಾರೆ. ಹೆಚ್ಚು ಬೆಲೆ ಬಾಳುವ ಬೀಟೆ, ತೇಗ, ಶ್ರೀಗಂಧದಂತಹ ಮರಗಳನ್ನು ಕಡಿಯುವುದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು. ಕಾಡ್ಗಿಚ್ಚು ತಡೆಗೆ ಎಚ್ಚರಿಕೆ ವಹಿಸಬೇಕು. ವನ್ಯಜೀವಿಗಳು ನಾಡು ಪ್ರವೇಶಿಸದಂತೆ ಅರಣ್ಯ ಪ್ರದೇಶದಲ್ಲಿ ಅವುಗಳಿಗೆ ಆಹಾರ ಮತ್ತು ನೀರು ಸಿಗುವಂತೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಸಂಕಲ್ಪ ಮಾಡಿ: ‘ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ಮನುಷ್ಯನ ಆರೋಗ್ಯ ಮತ್ತು ಪರಿಸರದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಹೀಗಾಗಿ ಸರ್ಕಾರವೇ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧಿಸಿದೆ. ಬಟ್ಟೆ ಚೀಲ ಬಳಸುವ ಮೂಲಕ ಪ್ಲಾಸ್ಟಿಕ್ ನಿರ್ಮೂಲನೆಗೆ ಸಂಕಲ್ಪ ಮಾಡಬೇಕು’ ಎಂದು ಜವಾಹರ್‌ ನವೋದಯ ವಿದ್ಯಾಲಯದ ಪ್ರಾಂಶುಪಾಲ ಎ.ಸಿ.ಎಸ್.ರೆಡ್ಡಿ ಹೇಳಿದರು.

ವಿದ್ಯಾಲಯದ ಶಿಕ್ಷಕರಾದ ಸಂಜಯ್‌ಕುಮಾರ್, ವಿವೇಕಾನಂದ ಘೋಷ್, ಸೆಲ್ವಿ, ಕಾಳಿಮಾತ, ಸುರೇಂದ್ರಕುಮಾರ್, ಅವಿನಾಶ್, ರೂಪಾ, ಆಶಾ, ಅಶೋಕ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT