ದೇಶದ ಬುನಾದಿಗೆ ಚುನಾವಣೆ ಅಡಿಗಲ್ಲು

ಬುಧವಾರ, ಏಪ್ರಿಲ್ 24, 2019
23 °C

ದೇಶದ ಬುನಾದಿಗೆ ಚುನಾವಣೆ ಅಡಿಗಲ್ಲು

Published:
Updated:
Prajavani

ಕೋಲಾರ: ‘ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಶಕ್ತಿ ಯುವ ಮತದಾರರ ಮೇಲಿದೆ’ ಎಂದು ಎಸ್‌ಡಿಸಿ ವಿದ್ಯಾಸಂಸ್ಥೆ ಅಧ್ಯಕ್ಷೆ ಉಷಾ ಗಂಗಾಧರ್ ಅಭಿಪ್ರಾಯಪಟ್ಟರು.

ಎಸ್‌ಡಿಸಿ ಕಾಲೇಜು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿ, ‘ಪ್ರತಿಯೊಬ್ಬರು ಮತದಾನದ ಮಹತ್ವ ಅರಿತು ಕಡ್ಡಾಯವಾಗಿ ಮತದಾನ ಮಾಡಬೇಕು’ ಎಂದು ಸಲಹೆ ನೀಡಿದರು.

‘ದೇಶದ ಭದ್ರ ಬುನಾದಿಗೆ ಚುನಾವಣೆ ಹಾಗೂ ಮತದಾನ ಅಡಿಗಲ್ಲು ಹಾಕುತ್ತವೆ. ಮತದಾನ ದಿನದಂದು ಹಣದ ಆಮಿಷಕ್ಕೆ ಬಲಿಯಾಗದೆ ಸ್ವಇಚ್ಛೆಯಿಂದ ಮತ ಹಾಕಬೇಕು. ಯುವಕ ಯುವತಿಯರು ಮತದಾನ ಕುರಿತು ಪೋಷಕರಿಗೆ ಜಾಗೃತಿ ಮೂಡಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಮತದಾನವು ಪ್ರತಿ ನಾಗರೀಕನಿಗೂ ಮೊದಲು ಸಿಗುವ ಹಕ್ಕು. ಈ ಹಕ್ಕು ಪಡೆದುಕೊಳ್ಳಲು ಶ್ರೀಮಂತ, ಬಡವ, ಜಾತಿ, ಧರ್ಮದ ಭೇದ ಭಾವವಿಲ್ಲ. ಎಲ್ಲಾ ವರ್ಗದವರಿಗೂ ಸಮನಾಗಿ ಈ ಹಕ್ಕು ದೊರೆಯುತ್ತದೆ. ಈ ಹಕ್ಕು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದಿದ್ದರೆ ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಎಸ್‌ಡಿಸಿ ಕಾಲೇಜು ವಿದ್ಯಾರ್ಥಿಗಳು ಎಂ.ಜಿ ರಸ್ತೆ, ಎಂ.ಬಿ ರಸ್ತೆ, ಬ್ರಾಹ್ಮಣರ ಬೀದಿ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಕರಪತ್ರ ಹಂಚಿ ಮತದಾನ ಕುರಿತು ಜಾಗೃತಿ ಮೂಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಸೌಮ್ಯ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಎಸ್‌ಡಿಸಿ ಕಾಲೇಜಿನ ಪ್ರಾಂಶುಪಾಲೆ ಪುಷ್ಪಲತಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವೆಂಕಟಸ್ವಾಮಿ, ಸ್ವೀಪ್ ಸಮಿತಿ ಕಾರ್ಯದರ್ಶಿ ಗೋವಿಂದಗೌಡ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !