ಫೆ.16ಕ್ಕೆ ಫಲಪುಷ್ಪ ಪ್ರದರ್ಶನ

7
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಸಿಇಒ ಜಗದೀಶ್‌ ಹೇಳಿಕೆ

ಫೆ.16ಕ್ಕೆ ಫಲಪುಷ್ಪ ಪ್ರದರ್ಶನ

Published:
Updated:

ಕೋಲಾರ: ‘ನಗರದ ತೋಟಗಾರಿಕೆ ನರ್ಸರಿಯಲ್ಲಿ ಫೆ.16 ಮತ್ತು 17ರಂದು ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ತೋಟಗಾರಿಕೆ ಮಹಾವಿದ್ಯಾಲಯದ ಸಹಯೋಗದಲ್ಲಿ ಪ್ರದರ್ಶನ ನಡೆಸಲಾಗುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದರು.

‘ಹೂವುಗಳನ್ನು ಬಳಸಿ ಮಾದರಿ ಮತದಾನ ಕೇಂದ್ರ ರಚಿಸುವ ಮೂಲಕ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಜತೆಗೆ 18 ವರ್ಷ ತುಂಬಿದ ಯುವ ಮತದಾರರ ನೊಂದಣಿಗೆ ಪ್ರದರ್ಶನದಲ್ಲಿ ಕೌಂಟರ್ ತೆರೆಯಲಾಗುವುದು’ ಎಂದು ಮಾಹಿತಿ ನೀಡಿದರು.

‘ಮರಳಿನಲ್ಲಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಆಕೃತಿ ರಚನೆ, ತರಕಾರಿ ಕೆತ್ತನೆಗಳು ಹಾಗೂ ವಿವಿಧ ಜಾತಿಯ ಹೂವು ಮತ್ತು ಅಲಂಕಾರಿಕ ಗಿಡಗಳನ್ನು ಪ್ರದರ್ಶಿಸಲಾಗುವುದು. ಅರಣ್ಯ ಇಲಾಖೆ ಸಿಬ್ಬಂದಿಯು ಸಮಗ್ರ ಬೇಸಾಯ ಪದ್ಧತಿಯ ಪ್ರಾತ್ಯಕ್ಷತೆ ನೀಡುತ್ತಾರೆ’ ಎಂದು ಹೇಳಿದರು.

ಪ್ರಮುಖ ಆಕರ್ಷಣೆ: ‘ಸುಧಾರಿತ ಕೃಷಿ ಉಪಕರಣಗಳು, ಸಾವಯವ ಬೇಸಾಯ, ಹನಿ ನೀರಾವರಿ ಪದ್ಧತಿ, ಅಣಬೆ ಬೇಸಾಯ, ಹಸಿರು ಮನೆ ಬೇಸಾಯ ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆಗಳು. ರೇಷ್ಮೆ ಇಲಾಖೆಯಿಂದ ರೇಷ್ಮೆಗೂಡಿನ ಅಲಂಕಾರಿಕ ವಸ್ತುಗಳು ಹಾಗೂ ಹಿಪ್ಪು ನೇರಳೆ ಸಸಿಗಳ ಪ್ರಾತ್ಯಕ್ಷತೆ ತಾಕು ನಿರ್ಮಿಸಿ ರೈತರಿಗೆ ಮಾಹಿತಿ ನೀಡಲಾಗುವುದು. ವಿವಿಧ ಇಲಾಖೆಗಳಡಿ ನರೇಗಾ ಯೋಜನೆಯಿಂದ ದೊರೆಯುವ ಸೌಕರ್ಯದ ಬಗ್ಗೆ ಅರಿವು ಮೂಡಿಲಾಗುವುದು’ ಎಂದು ವಿವರಿಸಿದರು.

‘ಪಶು ಸಂಗೋಪನೆ ಇಲಾಖೆ ಹಾಗೂ ಕೋಚಿಮುಲ್ ವತಿಯಿಂದ ವಿವಿಧ ಮೇವು ತಳಿ ಪ್ರದರ್ಶನ, ತಾರಸಿ ಕೈತೋಟ, ಜೇನು ಸಾಕಾಣಿಕೆ ಪ್ರಾತ್ಯಕ್ಷಿಕೆ, ನೂತನವಾಗಿ ಅವಿಷ್ಕಾರವಾದ ಹೈಡ್ರೋ ಫೋನಿಕ್ಸ್‌ ಮಾದರಿ ಪ್ರದರ್ಶನ ನಡೆಯುತ್ತದೆ’ ತಿಳಿಸಿದರು.

43 ಲಕ್ಷ ಮಾನವ ದಿನ: ‘ನರೇಗಾದಡಿ ಮಾರ್ಚ್ ಅಂತ್ಯಕ್ಕೆ 43 ಲಕ್ಷ ಮಾನವ ದಿನ ಸೃಜಿಸುವ ವಿಶ್ವಾಸವಿದೆ. ಮುಂದಿನ ವರ್ಷ 57 ಲಕ್ಷ ಮಾನವ ದಿನ ಸೃಜಿಸುವ ಗುರಿ ಹೊಂದಲಾಗಿದೆ. ಬಜೆಟ್‌ನಲ್ಲಿ ಘೋಷಿಸಿರುವ ಜಲಧಾರೆ ಯೋಜನೆಯಡಿ ನೀರಿನ ಮೂಲದಿಂದ ಪ್ರತಿ ಮನೆಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜಲಾಮೃತ ಯೋಜನೆಯಡಿ ನರೇಗಾ ಯೋಜನೆ ಸಂಯೋಜಿಸಿಕೊಂಡು ಕಲ್ಯಾಣಿ, ಪುಷ್ಕರಣಿ, ಸಣ್ಣ ನೀರಿನ ಮೂಲಗಳನ್ನು ಪುನಶ್ಚೇತನಗೊಳಿಸಿ ಸಸಿ ನೆಡಲಾಗುವುದು’ ಎಂದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೆ.ಬಿ.ಕೃಷ್ಣಮೂರ್ತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಕೆ.ಶಿವಕುಮಾರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !