ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಜಿಲ್ಲೆಯಲ್ಲಿ ಜೂಜು ಅಡ್ಡೆಗಳಾದ ಮಾವಿನ ತೋಟ-ನೀಲಗಿರಿ ತೋಪುಗಳು: ಹಣದ ಹೊಳೆ

Last Updated 20 ಫೆಬ್ರುವರಿ 2021, 13:09 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜೂಜು ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಊರ ಹೊರಗಿನ ಮಾವಿನ ತೋಟಗಳು ಹಾಗೂ ನೀಲಗಿರಿ ತೋಪುಗಳೇ ಜೂಜು ಅಡ್ಡೆಗಳಾಗಿವೆ.

ಬೆಂಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಜತೆಗೆ ತಮಿಳುನಾಡು ಮತ್ತು ಆಂಧ್ರಪ್ರದೇಶದ ಗಡಿ ಭಾಗದ ನೂರಾರು ಜನರು ಪ್ರತಿನಿತ್ಯ ಜಿಲ್ಲೆಗೆ ಬಂದು ಜೂಜಾಡುತ್ತಿದ್ದು, ದಂಧೆಯಲ್ಲಿ ಕೋಟಿಗಟ್ಟಲೇ ಹಣದ ಹೊಳೆ ಹರಿಯುತ್ತಿದೆ.

ಗ್ರಾಮಗಳ ಹೊರವಲಯದ ಅರಣ್ಯ ಪ್ರದೇಶ, ಜನರ ಓಡಾಟವಿಲ್ಲದ ನೀಲಗಿರಿ ತೋಪುಗಳು ಮತ್ತು ಮಾವಿನ ತೋಟಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಜೂಜಾಟ ನಡೆಯುತ್ತಿದೆ. ದಂಧೆಯ ರೂವಾರಿಗಳು ಜನರಿಗೆ ಸಿಕ್ಕಿ ಬೀಳುವ ಭಯಕ್ಕೆ ನಿರ್ಜನ ಪ್ರದೇಶಗಳಲ್ಲೇ ಹೆಚ್ಚಾಗಿ ಜೂಜು ಆಡಿಸುತ್ತಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು, ಹೆಬ್ಬಟ, ಗೌನಿಪಲ್ಲಿ, ಉನಿಕಿಲಿ, ಕೋಲಾರ ತಾಲ್ಲೂಕಿನ ವೇಮಗಲ್, ವೆಲಗಲಬುರ್ರೆ, ಮಾದಮಂಗಲ, ಮದ್ದೇರಿ, ತೊಟ್ಲಿ ಗ್ರಾಮದ ಗಡಿ ಭಾಗ, ಮಾಲೂರು ತಾಲ್ಲೂಕಿನ ಶಿವಾರಪಟ್ಟಣ, ಸಂಪಂಗೆರೆ, ಲಕ್ಕೂರು, ಚಿಕ್ಕತಿರುಪತಿಯ ಗಡಿಯಂಚಿನ ಪ್ರದೇಶ, ಮುಳಬಾಗಿಲು ತಾಲ್ಲೂಕಿನ ನಂಗಲಿ ಬಳಿಯ ಸುನುಪಕುಂಟೆ, ಘಟ್ಟುಗುಡಿ ಅರಣ್ಯ ಪ್ರದೇಶದಲ್ಲಿ ಜೂಜು ಅಡ್ಡೆಗಳು ವ್ಯಾಪಕವಾಗಿವೆ.

ಸಕಲ ವ್ಯವಸ್ಥೆ

ದಂಧೆಯ ರೂವಾರಿಗಳು ಜೂಜಾಡಲು ಬರುವವರಿಗೆ ಕೂರಲು ಚಾಪೆ, ಟಾರ್ಪಲ್‌, ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಾರೆ. ಜತೆಗೆ ದಂಧೆಯ ಸ್ಥಳಕ್ಕೆ ಸಿಗರೇಟ್‌, ಮಾಂಸದೂಟ, ಮದ್ಯವೂ ಸರಬರಾಜಾಗುತ್ತಿದೆ.

ಪ್ರತಿನಿತ್ಯ ಜಾಗ ಬದಲಿಸುತ್ತಾ ರಾಜಾರೋಷವಾಗಿ ದಂಧೆ ನಡೆಸಲಾಗುತ್ತಿದೆ. ದಂಧೆಯ ಕಿಂಗ್‌ಪಿನ್‌ಗಳು ಜೂಜಾಡಲು ಬರುವವರಿಗೆ ಕರೆ ಮಾಡಿ ಜಾಗದ ಮಾಹಿತಿ ನೀಡುತ್ತಾರೆ. ಬೈಕ್‌, ಕಾರುಗಳಲ್ಲಿ ಅಲ್ಲಿಗೆ ಬರುವ ಮಂದಿ ಸಂಜೆವರೆಗೂ ಜೂಜಾಡುವುದು ಸಾಮಾನ್ಯವಾಗಿದೆ.

ಸ್ಥಳದಲ್ಲೇ ಸಾಲ

ಜೂಜಾಟದಲ್ಲಿ ಹಣ ಕಳೆದುಕೊಂಡು ಬರಿಗೈ ಆಗುವವರಿಗೆ ದಂಧೆಯ ಕಿಂಗ್‌ಪಿನ್‌ಗಳು ಸ್ಥಳದಲ್ಲೇ ಸಾಲ ಸಹ ಕೊಡುತ್ತಾರೆ. ಶೇ 10ರ ಬಡ್ಡಿ ದರದಲ್ಲಿ ಸಾಲ ಕೊಟ್ಟು ಮತ್ತೆ ಜೂಜು ಆಡಿಸುತ್ತಾರೆ. ಸಾಲಕ್ಕೆ ಪ್ರತಿಯಾಗಿ ಚಿನ್ನಾಭರಣ, ಬೈಕ್‌ಗಳು, ಖಾಲಿ ಚೆಕ್‌ಗಳನ್ನು ಭದ್ರತೆಯಾಗಿ ಪಡೆದುಕೊಳ್ಳುತ್ತಾರೆ.

ಸಕಾಲಕ್ಕೆ ಸಾಲ ಹಿಂದಿರುಗಿಸದಿದ್ದರೆ ದಂಧೆಕೋರರು ಸಾಲಗಾರರ ಮನೆ ಬಳಿ ಹೋಗಿ ಬೆದರಿಕೆ ಹಾಕುತ್ತಾರೆ. ಅಲ್ಲದೇ, ಊರ ಜನರ ಮುಂದೆ ಗಲಾಟೆ ಮಾಡುವುದಾಗಿ ಹೆದರಿಸಿ ಮನೆ, ಜಮೀನಿನ ದಾಖಲೆಪತ್ರ ಪಡೆದು ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿವೆ.

ಪೊಲೀಸರ ಪಾತ್ರ

ಜೂಜು ದಂಧೆ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇದ್ದರೂ ದಂಧೆಗೆ ಕಡಿವಾಣ ಹಾಕದೆ ಮೌನಕ್ಕೆ ಶರಣಾಗಿರುವುದು ಜನರಲ್ಲಿ ಅನುಮಾನ ಮೂಡಿಸಿದೆ. ದಂಧೆಯಲ್ಲಿ ಪೊಲೀಸರ ಪಾತ್ರವಿರುವ ಬಗ್ಗೆಯೂ ಆರೋಪ ಕೇಳಿಬಂದಿದೆ. ದಂಧೆಯ ಕಿಂಗ್‌ಪಿನ್‌ಗಳು ಪೊಲೀಸರ ನೆರವಿನಿಂದಲೇ ಜೂಜಾಟ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ಪೊಲೀಸರ ಭಯ ಬೇಡ. ಅವರು ಜೂಜಾಟದ ಸ್ಥಳಕ್ಕೆ ಬರುವುದಿಲ್ಲ. ಆತಂಕವಿಲ್ಲದೆ ಜೂಜಾಡಿ ಎಂದು ಕಿಂಗ್‌ಪಿನ್‌ಗಳು ಭರವಸೆ ಕೊಡುತ್ತಾರೆ. ಆ ಧೈರ್ಯದಲ್ಲೇ ಜೂಜು ಅಡ್ಡೆಗಳಿಗೆ ಹೋಗುತ್ತೇವೆ’ ಎಂದು ಜೂಜಾಟದಲ್ಲಿ ಹಣ ಕಳೆದುಕೊಂಡವರು ಹೇಳುತ್ತಾರೆ.

‘ಜೂಜು ದಂಧೆಯಿಂದ ಬಡ ಕುಟುಂಬಗಳು ಸಾಲದ ಸುಳಿಗೆ ಸಿಲುಕಿ ಬೀದಿ ಪಾಲಾಗುತ್ತಿವೆ. ಜೂಜು ಅಡ್ಡೆಗಳಿಗೆ ಕಡಿವಾಣ ಹಾಕಬೇಕು ಮತ್ತು ದಂಧೆಕೋರರ ಬೆನ್ನಿಗೆ ನಿಂತಿರುವ ಪೊಲೀಸರಿಗೆ ಶಿಸ್ತುಕ್ರಮದ ಬಿಸಿ ಮುಟ್ಟಿಸಬೇಕು’ ಎಂಬುದು ಜಿಲ್ಲೆಯ ಜನರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT