ಗಾಂಧೀಜಿ ತತ್ವಾದರ್ಶ ಸಮ ಸಮಾಜಕ್ಕೆ ದಾರಿದೀಪ: ಶಾಸಕ ಶ್ರೀನಿವಾಸಗೌಡ

7
ಗಾಂಧಿ ಜಯಂತಿ

ಗಾಂಧೀಜಿ ತತ್ವಾದರ್ಶ ಸಮ ಸಮಾಜಕ್ಕೆ ದಾರಿದೀಪ: ಶಾಸಕ ಶ್ರೀನಿವಾಸಗೌಡ

Published:
Updated:
Deccan Herald

ಕೋಲಾರ: ‘ರಕ್ತಪಾತವಿಲ್ಲದೆ ಅಹಿಂಸೆಯ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿಯ ತತ್ವಾದರ್ಶ ಸಮ ಸಮಾಜ ನಿರ್ಮಾಣಕ್ಕೆ ದಾರಿದೀಪ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತವು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಉದ್ಘಾಟಿಸಿ ಮಾತನಾಡಿ, ‘ದೇಶದ ಅಸ್ತಿತ್ವ ಇರುವವರೆಗೂ ಗಾಂಧೀಜಿ ಹೆಸರು ಶಾಶ್ವತವಾಗಿರುತ್ತದೆ. ಅವರ ತತ್ವಾದರ್ಶದ ಬಗ್ಗೆ ಮಕ್ಕಳಿಗೆ
ಅರಿವು ಮೂಡಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಸರಳ ವ್ಯಕ್ತಿತ್ವದ ಗಾಂಧೀಜಿಯ ನೆನಪು ಜನಮಾನಸದಲ್ಲಿ ಶಾಶ್ವತವಾಗಿದೆ. ಅವರ ನಡೆ, ನುಡಿ ಮತ್ತು ಜೀವನ ಶೈಲಿಯನ್ನು ಎಲ್ಲರೂ ಅನುಸರಿಸಬೇಕು. ಅವರ ಮೌಲ್ಯಗಳನ್ನು ಮಕ್ಕಳಿಗೆ ಪರಿಚಯಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕಾರ್ಯಕ್ರಮ ರೂಪಿಸಬೇಕು’ ಎಂದು ಸಲಹೆ ನೀಡಿದರು.

‘200 ವರ್ಷಗಳ ಕಾಲ ಪರಕೀಯರ ಆಡಳಿತಕ್ಕೆ ಒಳಪಟ್ಟಿದ್ದ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಗಾಂಧೀಜಿ ಪ್ರಮುಖ ಪಾತ್ರ ವಹಿಸಿದರು. ಅವರ ತತ್ವಾದರ್ಶ ಇಂದಿಗೂ ಪ್ರಸ್ತುತ. ವಿದ್ಯಾರ್ಥಿಗಳು ಗಾಂಧೀಜಿ ವಿಚಾರಧಾರೆ ತಿಳಿದು ಜೀವನದಲ್ಲಿ ಅಳವಡಿಸಿಕೊಂಡರೆ ಉನ್ನತ ಸ್ಥಾನಕ್ಕೆ ಹೋಗಬಹುದು’ ಎಂದು ತಿಳಿಸಿದರು.

ಮಹಾನ್ ನಾಯಕ: ‘ಗಾಂಧೀಜಿ ಇಡೀ ಜಗತ್ತೇ ಗುರುತಿಸಿರುವ ಮಹಾನ್ ನಾಯಕ. ಯಾವುದೇ ಕೆಲಸ ಮಾಡಬೇಕಾದರೂ ತಾಳ್ಮೆ, ಶ್ರಮ ಅಗತ್ಯ. ಬೇಗ ಪ್ರತಿಫಲ ಸಿಗಬೇಕೆಂದು ಹಿಂಸಾತ್ಮಕ ಮಾರ್ಗ ಅಥವಾ ಅಡ್ಡದಾರಿ ಹಿಡಿಯುವುದು ಸರಿಯಲ್ಲ. ತಾಳ್ಮೆಯಿಂದ ಗಾಂಧೀಜಿ ಸಿದ್ಧಾಂತದಂತೆ ಅಹಿಂಸೆಯ ಮಾರ್ಗದಲ್ಲಿ ಸಾಗಿದರೆ ಖಂಡಿತ ಯಶಸ್ಸು ಸಿಗುತ್ತದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.

‘ಗಾಂಧೀಜಿ ಹಾಗೂ ಸುಭಾಷ್‌ಚಂದ್ರ ಬೋಸ್‌ರ ಹೋರಾಟದ ಹಾದಿ ಬೇರೆ ಬೇರೆಯಾದರೂ ಇಬ್ಬರ ಗುರಿ ಸ್ವಾತಂತ್ರ್ಯ ಪಡೆಯುವುದೇ ಆಗಿತ್ತು. ಗಾಂಧೀಜಿ ಕರ್ನಾಟಕಕ್ಕೆ 18 ಬಾರಿ ಭೇಟಿ ನೀಡಿದ್ದರು. ಕೋಲಾರ ಜಿಲ್ಲೆಗೆ 2 ಬಾರಿ ಬಂದಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದಲ್ಲಿ 45 ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು’ ಎಂದು ಮಾಹಿತಿ ನೀಡಿದರು.

ಸ್ವಚ್ಛತೆಗೆ ಯೋಜನೆ: ‘ಕೋಲಾರ ನಗರವನ್ನು ಸ್ವಚ್ಛವಾಗಿಡಲು ಜಿಲ್ಲಾಡಳಿತ ಮತ್ತು ನಗರಸಭೆ ಸಹಯೋಗದಲ್ಲಿ ಹಲವು ಯೋಜನೆ ರೂಪಿಸಲಾಗಿದೆ. ನಗರಸಭೆಗೆ ಹೊಸದಾಗಿ ಕಸ 17 ಸಾಗಣೆ ವಾಹನ ಒದಗಿಸಲಾಗುತ್ತಿದೆ. ಪ್ರತಿ ಮನೆಗೆ 2 ಕಸದ ಬುಟ್ಟಿ ವಿತರಿಸಿ, ಹಸಿ ಮತ್ತು ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸಲಾಗುವುದು’ ಎಂದು ವಿವರಿಸಿದರು.

‘ಸರ್ಕಾರವು ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧಿಸಿದ್ದು, ಜನರು ಸ್ವಯಂಪ್ರೇರಿತರಾಗಿ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ತ್ಯಜಿಸಬೇಕು. ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಬಗ್ಗೆ ವಿದ್ಯಾರ್ಥಿಗಳು ಪೋಷಕರನ್ನು ಜಾಗೃತಗೊಳಿಸಬೇಕು’ ಎಂದು ಮನವಿ ಮಾಡಿದರು.

ಗ್ರಾಮ ಸ್ವರಾಜ್ಯ: ‘ಗಾಂಧೀಜಿ ಗ್ರಾಮ ಸ್ವರಾಜ್ಯದ ಕನಸು ಕಂಡವರು. ದೇಶದ ಸಂಸ್ಕೃತಿ ಗ್ರಾಮಗಳಲ್ಲಿ ಅಡಗಿದೆ. ಗ್ರಾಮಗಳ ಉದ್ಧಾರವಾದರೆ ಮಾತ್ರ ದೇಶದ ಉದ್ಧಾರ ಸಾಧ್ಯ ಎಂಬುದು ಗಾಂಧೀಜಿಯ ನಂಬಿಕೆಯಾಗಿತ್ತು. ಅಸೃಶ್ಯತೆ ನಿವಾರಣೆಯಲ್ಲಿ ಗಾಂಧೀಜಿ ಮಹತ್ತರ ಪಾತ್ರ ವಹಿಸಿದರು’ ಎಂದು ಚಿಂತಾಮಣಿ ಸರ್ಕಾರಿ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ಎನ್.ರಘು ಸ್ಮರಿಸಿದರು.

‘ಗಾಂಧೀಜಿ ಸ್ವದೇಶಿ ವಸ್ತುಗಳ ಬಳಕೆ ಮತ್ತು ಉತ್ಪಾದನೆಗೆ ಹೆಚ್ಚು ಒತ್ತು ಕೊಟ್ಟರು. ವಿದೇಶಿ ಬಟ್ಟೆ ತ್ಯಜಿಸಿ ದೇಸಿ ಬಟ್ಟೆಗಳ ಬಳಕೆಗೆ ಕರೆ ಕೊಟ್ಟರು. ಚರಕದ ಬಳಕೆಯನ್ನು ಪರಿಚಯಿಸಿ ಸ್ವತಃ ಚರಕದಿಂದ ಬಟ್ಟೆ ನೇಯ್ದು ಬಳಸುತ್ತಿದ್ದರು. ಗಾಂಧೀಜಿಯ ಸರಳತೆ ಹಾಗೂ ಚಿಂತನೆ ಅನುಕರಣೀಯ’ ಎಂದರು.

ಛಾಯಾಚಿತ್ರ ಪ್ರದರ್ಶನ: ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ಗಾಂಧಿವನದಲ್ಲಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಿದ್ದ ಗಾಂಧೀಜಿ ಜೀವನ ಚರಿತ್ರೆ ಕುರಿತ ಛಾಯಾಚಿತ್ರ ಪ್ರದರ್ಶನವು ನೋಡುಗರ ಮನಸೂರೆಗೊಂಡಿತು. ತುಮಕೂರಿನ ಚಿತ್ರ ಕಲಾವಿದ ಪರಮೇಶ್ 10 ನಿಮಿಷದಲ್ಲಿ ಗಾಂಧೀಜಿಯ ಚಿತ್ರ ಬಿಡಿಸಿ ಜನರ ಮೆಚ್ಚುಗೆಗೆ ಪಾತ್ರರಾದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌, ಹೆಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ, ತಹಶೀಲ್ದಾರ್ (ಪ್ರಭಾರ) ನಾಗವೇಣಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಸಾದುಲ್ಲಾ ಖಾನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !