ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಭಕ್ತಿಯ ಶ್ರೇಷ್ಠತೆ ಸಾರದ ಮಾಚಯ್ಯ

Last Updated 2 ಫೆಬ್ರುವರಿ 2018, 9:40 IST
ಅಕ್ಷರ ಗಾತ್ರ

ಚಿತ್ರದುರ್ಗ: ವೀರಶೈವ ಧರ್ಮದ ಉದ್ಧಾರಕ್ಕಾಗಿ ಹುಟ್ಟಿದ ವೀರಗಂಟಿ ಮಾಡಿವಾಳ ಮಾಚಯ್ಯ ಅವರ ಸಾಧನೆ ಅಪ್ರತಿಮ ಎಂದು ಸರ್ಕಾರಿ ಕಲಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಎನ್.ಎಸ್.ಮಹಾಂತೇಶ್ ತಿಳಿಸಿದರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ವೀರಶೈವ ಕವಿಗಳ 15 ಕಾವ್ಯಗಳಲ್ಲಿ ಮಾಚಯ್ಯನ ಬಗೆಗೆ ಉಲ್ಲೇಖವಿದೆ. ಅವರದು ವೀರ ವ್ಯಕ್ತಿತ್ವ ಎಂದು ಕವಿಗಳು ಬಣ್ಣಿಸಿದ್ದಾರೆ. ಆದ್ದರಿಂದಲೇ ಲಿಂಗಾಯತ ಹಾಗೂ ಮಡಿವಾಳ ಮಾಚಿಪ್ರಭುಗಳ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು.

ಜಾತಿ ಪದ್ಧತಿ ನಿರ್ಮೂಲನೆಗೆ 12ನೇ ಶತಮಾನದಲ್ಲಿಯೇ ಜಾಗೃತಿ ಮೂಡಿಸಲು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟ ಬಸವಣ್ಣ ಅವರ ಅನುಭವಮಂಟಪದಲ್ಲಿ ಹಿರಿಯರಾಗಿದ್ದ ಮಡಿವಾಳ ಮಾಚೀದೇವ 540 ವಚನಗಳನ್ನು ರಚಿಸಿದ್ದಾರೆಎಂದರು.

ಮಾಚಯ್ಯ ತನ್ನ ವಚನಗಳಲ್ಲಿ ಬಸವಣ್ಣನನ್ನು ಭಕ್ತಿ, ವಿಶ್ವಾಸಗಳಿಂದ ಅಧಿಕವಾಗಿ ಸ್ತುತಿಸಿದ್ದಾರೆ. ಉಪಮೆ, ದೃಷ್ಟಾಂತ, ರೂಪಕಗಳ ಮೂಲಕ ಶರಣನ ಗುಣಲಕ್ಷಣ, ಶಿವಭಕ್ತಿಯ ಶ್ರೇಷ್ಠತೆಗಳನ್ನು ವಿವರಿಸಿದ್ದಾರೆ ಎಂದು ತಿಳಿಸಿದರು.

ವಚನ ಸಾಹಿತ್ಯದ ಹೃದಯ ಮಾಚಯ್ಯ: ಬಸವಣ್ಣ, ಪ್ರಭುದೇವ, ಚೆನ್ನಬಸವಣ್ಣ, ಮರುಳು ಶಂಕರದೇವ ಹಾಗೂ ಅಕ್ಕ ಮಹಾದೇವಿ ಅವರು ಮಡಿವಾಳ ಮಾಚೀದೇವರನ್ನು ಸ್ತುತಿಸಿದ್ದಾರೆ. ಷಟ್‍ಸ್ಥಲದಲ್ಲಿ ಬರುವ ವಚನಕಾರರಲ್ಲಿ ಮಾಚಯ್ಯ ಕೂಡ ಪ್ರಮುಖರು. ವಚನಕಾರ ಸಿದ್ದರಾಮಯ್ಯ ಅವರು ಮಾಚಯ್ಯನನ್ನು ಇಡೀ ವಚನ ಸಾಹಿತ್ಯದ ಹೃದಯ ಎಂದು ಬಣ್ಣಿಸಿದ್ದಾರೆ ಎಂದು ಮಹಾಂತೇಶ್ ಹೇಳಿದರು.

ಶಿವಶರಣರ ಬಟ್ಟೆಗಳನ್ನು ಒಗೆಯುವ (ಮಡಿ ಮಾಡುವ) ಕಾಯಕ ಈತನದು. ಬಟ್ಟೆಯನ್ನೇ ಧರಿಸದ ಅಕ್ಕ ಮಹಾದೇವಿ ಅವರು ಮಾಚಯ್ಯ ಶುದ್ಧಿಗೊಳಿಸಿದ್ದ ಬಟ್ಟೆ ಧರಿಸಿದ್ದು ಇತಿಹಾಸ. ಕಲ್ಯಾಣ ಅವರ ಕಾರ್ಯಕ್ಷೇತ್ರವಾಗಿತ್ತು. ಕಾಯಕ ತತ್ವಕ್ಕೆ ಬದ್ಧರಾಗಿದ್ದ ಅವರು ನಿಷ್ಠೆಯಿಂದ ಕೆಲಸ ಮಾಡಿದವರು. ನಿಷ್ಠುರವಾದಿಯೂ ಹೌದು. ಈ ಮೂರು ಗುಣಗಳನ್ನು ಮಡಿವಾಳ ಸಮುದಾಯಕ್ಕೆ ಬಳುವಳಿಯಾಗಿ ನೀಡಿ ಹೋಗಿದ್ದಾರೆ ಎಂದು ಹೇಳಿದರು.

ಅನುಭವಮಂಟಪದಲ್ಲಿ ಸದಾ ಕ್ರಿಯಾಶೀಲರಾಗಿದ್ದ ಮಾಚಿದೇವ, ಕಲ್ಯಾಣ ಕ್ರಾಂತಿ ತರುವಾಯ ಉಳುವೆಯ ಕಡೆಗೆ ಹೊರಟ ಚೆನ್ನಬಸವಣ್ಣ ಅವರ ನೇತೃತ್ವದ ದಂಡನಾಯಕರಾದರು. ಬಿಜ್ಜಳನ ಸೈನ್ಯದೊಡನೆ ಹೋರಾಡಿ ಶರಣರನ್ನು, ಶರಣ ಸಾಹಿತ್ಯವನ್ನು ರಕ್ಷಿಸಿದರು. ಅಲ್ಲದೆ, ವೀರಮಾಹೇಶ್ವರ ನಿಷ್ಠೆಯ ಮಾಚಿದೇವ ವೀರಭದ್ರನ ಅವತಾರವೆಂದೇ ಜನ ಭಾವಿಸಿದ್ದರು. ‘ವೀರಗಂಟಿ ಮಾಚೀದೇವ’ ಎಂದು ಕರೆಯುತ್ತಿದ್ದರು ಎಂದು ತಿಳಿಸಿದರು.

ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕವಾಗಿ ಮಡಿವಾಳ ಸಮುದಾಯ ಹಿಂದುಳಿದಿದೆ. ಆದ್ದರಿಂದ ಸರ್ಕಾರಗಳು ಸಮುದಾಯಕ್ಕೆ ಸೌಲಭ್ಯ ನೀಡಲಿ. ಸಮಾಜವು ಮಾಚಯ್ಯನ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯೆ, ಸಂಘಟನೆ, ಕಾಯಕ ಮಹತ್ವಕ್ಕೆ ಒತ್ತು ನೀಡುವ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಸಮಾಜ ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಉದ್ಘಾಟಿಸಿದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ, ಜಿಲ್ಲಾ ಪಂಚಾಯ್ತಿ ಸದಸ್ಯ ಗುರುಮೂರ್ತಿ, ಸಿಇಒ ರವೀಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ತಹಶೀಲ್ದಾರ್ ಮಲ್ಲಿಕಾರ್ಜುನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಮಡಿವಾಳ ಮಾಚಿದೇವ ದೇಗುಲ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂಪಿಗೆ ಸಿದ್ದೇಶ್ವರ ಇದ್ದರು. ನಗರಸಭೆ ಸದಸ್ಯ ರಮೇಶ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶಿವರಾಂ ನಿರೂಪಿಸಿದರು.

ಇದಕ್ಕೂ ಮುನ್ನ ಮಡಿವಾಳ ಮಾಚಿದೇವ ಅವರ ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಮುದಾಯದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವೈದಿಕ ವಿಚಾರಗಳ ವಿರೋಧಿಸಿದ್ದ ಮಾಚಯ್ಯ

ವೈದಿಕ ವಿಚಾರ, ಡಾಂಭಿಕ ಭಕ್ತಿ, ಬ್ರಾಹ್ಮಣಶಾಹಿ, ದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆ, ಮೌಢ್ಯ ಹಾಗೂ ಸ್ಥಾವರ ವ್ಯವಸ್ಥೆಗಳನ್ನು ನಿಷ್ಠುರವಾಗಿ ವಿರೋಧಿಸುವ ಮಾಚಿದೇವ, ಲಿಂಗಾಯತ ಧರ್ಮದ ತತ್ತ್ವ, ಆಚರಣೆಗಳನ್ನು ಸಮರ್ಥವಾಗಿ ಪ್ರತಿಪಾದಿಸಿದ್ದಾರೆ. ಮಾಚಿದೇವ ವಚನಗಳು ಸಾಮಾಜಿಕ ಸಮಸ್ಯೆ, ವೈಚಾರಿಕ ನಿಲುವುಗಳನ್ನು ಎತ್ತಿತೋರಿಸುತ್ತವೆ ಎಂದು ಮಹಾಂತೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT