ಶುಕ್ರವಾರ, ಅಕ್ಟೋಬರ್ 22, 2021
30 °C
ರಾತ್ರೋರಾತ್ರಿ ಪಾಳುಬಾವಿ, ಕೆರೆ ಅಂಗಳದಲ್ಲಿ ತಾಜ್ಯ ವಿಲೇವಾರಿ l ಅಕ್ಕಪಕ್ಕದ ಗ್ರಾಮಸ್ಥರ ಆಕ್ರೋಶ

ಪುರಸಭೆಗೆ ಕಸದ ರಾಶಿ ಕರಗಿಸುವ ಸವಾಲು!

ವಿ. ರಾಜಗೋಪಾಲ್‌ Updated:

ಅಕ್ಷರ ಗಾತ್ರ : | |

Prajavani

ಮಾಲೂರು: ಪಟ್ಟಣದಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ಸಂಪೂರ್ಣ ಹಳಿ ತಪ್ಪಿದ್ದು, ಎಲ್ಲೆಂದರಲ್ಲಿ ಸೃಷ್ಟಿಯಾಗಿರುವ ಕಸದ ರಾಶಿಗಳು ಪಟ್ಟಣ ವಾಸಿಗಳ ನಿದ್ದೆಗೆಡಿಸಿವೆ.

ಪುರಸಭೆಯ ವ್ಯಾಪ್ತಿ ವಿಸ್ತರಿಸಿದಂತೆ ಜನಸಂಖ್ಯೆಯೂ ಹೆಚ್ಚುತ್ತಿದೆ. ಅದಕ್ಕೆ ಅನುಗುಣವಾಗಿ ಕಸದ ಉತ್ಪತ್ತಿಯೂ ಹೆಚ್ಚುತ್ತಿದೆ. ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಕಸದ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ. ಇದನ್ನು ಕರಗಿಸುವುದೇ ಪುರಸಭೆ ಆಡಳಿತಕ್ಕೆ ಅಕ್ಷರಶಃ ಸವಾಲಾಗಿದೆ.

ಕಸ ಸಂಗ್ರಹಣೆ ಮತ್ತು ವಿಲೇವಾರಿ ಕಾರ್ಯ ಸಂಪೂರ್ಣವಾಗಿ ಪೌರ ಕಾರ್ಮಿಕರ ಮೇಲೆ ಅವಲಂಬಿತವಾಗಿದೆ. ಕಾರ್ಮಿಕರು ಕೈಚೆಲ್ಲಿದರೆ ಕಸದ ಸಮಸ್ಯೆ ಉಲ್ಬಣಿಸಿ ಪಟ್ಟಣ ಗಬ್ಬೆದ್ದು ನಾರುತ್ತದೆ. ಪೌರ ಕಾರ್ಮಿಕರು ನಿಯಮಿತವಾಗಿ ಮನೆಗಳ ಬಳಿ ಬಂದು ಕಸ ಸಂಗ್ರಹಿಸುತ್ತಿಲ್ಲ. ಹೀಗಾಗಿ, ಪಟ್ಟಣದ ನಿವಾಸಿಗಳು ರಸ್ತೆಯ ಅಕ್ಕಪಕ್ಕ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಸುರಿಯುತ್ತಿದ್ದಾರೆ.

ಮಾರುಕಟ್ಟೆಗಳ ಆವರಣ, ವಾಣಿಜ್ಯ ಪ್ರದೇಶಗಳು, ಬಸ್ ನಿಲ್ದಾಣ ಹಾಗೂ ಜನವಸತಿ ಪ್ರದೇಶಗಳಲ್ಲಿನ ಖಾಲಿ ನಿವೇಶನಗಳಲ್ಲಿ ಕಸ ರಾಶಿಯಾಗಿ ಬಿದ್ದಿದ್ದು, ಇದರ ವಿಲೇವಾರಿಗೆ ಪುರಸಭೆ ಆಡಳಿತ ಕ್ರಮಕೈಗೊಂಡಿಲ್ಲ. ಕಸ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಸದ ರಾಶಿಯು ಪಕ್ಕದ ರಸ್ತೆಗಳು ಹಾಗೂ ಚರಂಡಿಗಳಿಗೆ ವ್ಯಾಪಿಸಿದೆ. ಇದರಿಂದ ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಚರಂಡಿಗಳಲ್ಲಿ ಕಸ ಕಟ್ಟಿಕೊಂಡು ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿದೆ. ಹಲವು ಬಡಾವಣೆಗಳಲ್ಲಿ ಕೊಳಚೆ ನೀರು ರಸ್ತೆಗೆ ಹರಿಯುತ್ತಿದ್ದು, ಇಡೀ ಪಟ್ಟಣ ಕೊಳೆಗೇರಿಯಾಗಿದೆ. ಕಸದ ರಾಶಿಯಿಂದ ನೈರ್ಮಲ್ಯ ಸಮಸ್ಯೆ ಎದುರಾಗಿದ್ದು, ಜನರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಮನೆ ಮಾಡಿದೆ.

ಈಗಾಗಲೇ ಹಲವು ಜನರು ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಕಸದ ರಾಶಿಗಳ ಬಳಿ ಬರುವ ಬೀದಿನಾಯಿಗಳು ಮಕ್ಕಳನ್ನು ಕಚ್ಚಿ ಗಾಯಗೊಳಿಸಿರುವ ಪ್ರಕರಣ ಆಗಾಗ್ಗೆ ವರದಿಯಾಗುತ್ತಿವೆ. ಬೀದಿ ನಾಯಿಗಳ ಹಾವಳಿಯಿಂದಾಗಿ ಮಹಿಳೆಯರು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಭಯಪಡುವಂತಾಗಿದೆ.

ಸ್ಥಳಾವಕಾಶವಿಲ್ಲ: ವಾರ್ಡ್‌ಗಳಲ್ಲಿ ಕಸ ಸಂಗ್ರಹಣೆಗ ಪ್ರತ್ಯೆಕ ವ್ಯವಸ್ಥೆಯಿಲ್ಲ. ಈ ಕಾರಣಕ್ಕೆ ಆಯಾ ಬಡಾವಣೆಗಳಲ್ಲಿ ಕಸ ಶೇಖರಣೆ ಮಾಡಲಾಗುತ್ತಿದೆ. ಕೆಇಬಿ ವೃತ್ತ, ಹಳೇ ಕೋರ್ಟ್ ಬಳಿ, ಪೆಟ್ರೋಲ್ ಬಂಕ್, ಅರಣ್ಯ ಇಲಾಖೆ ಕಚೇರಿ ಹಿಂಭಾಗ, ಪಟಾಲಮ್ಮ ದೇವಾಲಯ ಮುಂಭಾಗ, ರೈಲ್ವೆ ಫೀಡರ್ ರಸ್ತೆ ಸೇರಿದಂತೆ 10 ಕಡೆ ಕಸ ಶೇಖರಣೆ ಮಾಡಲಾಗುತ್ತಿದೆ.

ಮೂರ್ನಾಲ್ಕು ದಿನಕೊಮ್ಮೆ ಈ ಕಸವನ್ನು ಟ್ರ್ಯಾಕ್ಟರ್‌ಗೆ ತುಂಬಿಸಿ ಪಟ್ಟಣ ಹೊರವಲಯದ ಹಾರೋಹಳ್ಳಿ ಗ್ರಾಮದ ಬಳಿಯ ಕಸದ ಯಾರ್ಡ್‌ಗೆ ರವಾನಿಸಲಾಗುತ್ತಿತ್ತು. 2.10 ಎಕರೆ ವಿಸ್ತಾರವಾಗಿರುವ ಈ ಯಾರ್ಡ್ ಸಂಪೂರ್ಣ ಭರ್ತಿಯಾಗಿದ್ದು, ಕಸ ಸುರಿಯಲು ಸ್ಥಳಾವಕಾಶವಿಲ್ಲ. ಅಲ್ಲದೇ, ಹಾರೋಹಳ್ಳಿ ಗ್ರಾಮಸ್ಥರು ಕಸ ಹಾಕಲು ಅಡ್ಡಿಪಡಿಸುತ್ತಿರುವುದು ಪುರಸಭೆ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕೆರೆ, ಬಾವಿಗಳಲ್ಲಿ ವಿಲೇವಾರಿ: ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿಗೆ ಭೂಭರ್ತಿ ಘಟಕಗಳಿಲ್ಲ. ಪಟ್ಟಣದ ಕಸವನ್ನು ಎಲ್ಲಿ ವಿಲೇವಾರಿ ಮಾಡಬೇಕೆಂಬ ಪ್ರಶ್ನೆ
ಎದುರಾಗಿದೆ. ‌

ಕಸ ಸಾಗಾಣಿಕೆ ವಾಹನ ಸಿಬ್ಬಂದಿಗೆ ಬೇರೆ ದಾರಿ ಕಾಣದೆ ಪಟ್ಟಣದ ಸುತ್ತಮುತ್ತಲಿನ ಕೆರೆಯ ಅಂಗಳ, ಪಾಳುಬಿದ್ದಿರುವ ಬಾವಿಗಳಲ್ಲಿ ರಾತ್ರೋರಾತ್ರಿ ಕಸ ಸುರಿಯುತ್ತಿದ್ದಾರೆ. ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸುವ ಚಿಂತನೆ ನಡೆದಿದೆ.

ಪಟ್ಟಣದ ಕಸ ಸಾಗಾಣಿಕೆಗೆ 15 ಆಟೊ ಟಿಪ್ಪರ್ ವಾಹನಗಳ ಅಗತ್ಯವಿದೆ. ಆದರೆ, ಪುರಸಭೆಯಲ್ಲಿ 5 ಆಟೊ ಟಿಪ್ಪರ್‌ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಮನೆಗಳ ಬಾಗಿಲಲ್ಲೇ ಕಸ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಕಸ ಸಂಗ್ರಹಣೆ ವಾಹನಗಳು ನಾಲ್ಕೈದು ದಿನಗಳಿಗೆ ಒಮ್ಮೆ ಮನೆಗಳ ಬಳಿ ಬರುವುದರಿಂದ ಸಾರ್ವಜನಿಕರು ಕಸವನ್ನು ಬೀದಿಗೆ ಎಸೆಯುತ್ತಾರೆ.

ಪುರಸಭೆಯಲ್ಲಿ 67 ಪೌರಕಾರ್ಮಿಕರು ಇದ್ದಾರೆ. ಇದರ ಜೊತೆಗೆ ಹೆಚ್ಚುವರಿಯಾಗಿ 20 ಮಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ. ಪಟ್ಟಣದ ಜನಸಂಖ್ಯೆಗೆ ಹೋಲಿಸಿದರೆ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇದೆ. ಈ ಪೌರ ಕಾರ್ಮಿಕರ ಪೈಕಿ ಯಾವುದೇ ಕಾರ್ಮಿಕರು ಅನಾರೋಗ್ಯ ಅಥವಾ ವೈಯಕ್ತಿಕ ಕಾರಣಕ್ಕೆ ರಜೆ ಹಾಕಿದರೆ ಕಸ ನಿರ್ವಹಣೆ ಪ್ರಕ್ರಿಯೆಗೆ ಹಿನ್ನಡೆಯಾಗುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು