ಭಾನುವಾರ, ಸೆಪ್ಟೆಂಬರ್ 22, 2019
28 °C
ಗೌರಿ– ಗಣೇಶ ಹಬ್ಬದ ಹಿನ್ನೆಲೆ: ನಗರದಲ್ಲಿ ಹೆಚ್ಚಿನ ಕಸದ ಉತ್ಪತ್ತಿ

ಕೋಲಾರ: ಹಾದಿ ಬೀದಿಯಲ್ಲಿ ಕಸ; ನಗರವಾಸಿಗಳ ಹಿಡಿಶಾಪ

Published:
Updated:
Prajavani

ಕೋಲಾರ: ಗೌರಿ–ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಕಸದ ಉತ್ಪತ್ತಿ ಹೆಚ್ಚಿದ್ದು, ವಸತಿ ಪ್ರದೇಶ, ಮಾರುಕಟ್ಟೆಗಳಲ್ಲಿ ಹಾಗೂ ಹಾದಿ ಬೀದಿಯಲ್ಲಿ ಕಸ ರಾಶಿ ರಾಶಿಯಾಗಿ ಬಿದ್ದಿದೆ.

ಹಬ್ಬದ ಕಾರಣ ಹೆಚ್ಚಿನ ಪೌರ ಕಾರ್ಮಿಕರು ಸರಣಿ ರಜೆ ಪಡೆದಿದ್ದು, ಕಸ ವಿಲೇವಾರಿಯಾಗದೆ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದೆ. ಮಾರುಕಟ್ಟೆ, ವಾಣಿಜ್ಯ ಪ್ರದೇಶ ಹಾಗೂ ಹೆಚ್ಚಿನ ಜನಸಂದಣಿ ಇರುವ ಜಾಗದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಕಸದ ರಾಶಿಯೇ ಇದೆ.

ನಗರಸಭೆ ವ್ಯಾಪ್ತಿ ಸುಮಾರು 27 ಚದರ ಕಿ.ಮೀ ಇದ್ದು, ನಗರದ ಜನಸಂಖ್ಯೆ 2 ಲಕ್ಷದ ಗಡಿ ದಾಟಿದೆ. ನಗರದ 35 ವಾರ್ಡ್‌ಗಳಿಂದ ಸಾಮಾನ್ಯ ಸಂದರ್ಭದಲ್ಲಿ ದಿನಕ್ಕೆ ಸುಮಾರು 80 ಟನ್‌ ಕಸ ಸಂಗ್ರಹಣೆಯಾಗುತ್ತದೆ. ಹಬ್ಬದ ಕಾರಣಕ್ಕೆ ಸಾಮಾನ್ಯ ದಿನಕ್ಕಿಂತ ಶೇ 30ರಷ್ಟು ಹೆಚ್ಚು ಕಸ ಉತ್ಪತ್ತಿಯಾಗಿದ್ದು, ಕಸ ವಿಲೇವಾರಿಯು ನಗರಸಭೆಗೆ ದೊಡ್ಡ ಸವಾಲಾಗಿದೆ.

ಮಾರಾಟವಾಗದೆ ಉಳಿದ ಬಾಳೆ ಕಂದು, ಮಾವಿನ ಸೊಪ್ಪು, ಬಿಲ್ವೆಪತ್ರೆ ಕಾಯಿ, ಹಣ್ಣು ಮತ್ತು ಹೂವಿನ ಸರಕನ್ನು ವ್ಯಾಪಾರಿಗಳು ಮಾರುಕಟ್ಟೆ ಹಾಗೂ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದು, ನಗರಸಭೆಯು ಈ ಕಸದ ವಿಲೇವಾರಿಗೆ ಕ್ರಮ ಕೈಗೊಂಡಿಲ್ಲ. ಹಳೇ ಬಸ್‌ ನಿಲ್ದಾಣ, ದೊಡ್ಡಪೇಟೆ, ಎಂ.ಜಿ.ರಸ್ತೆ, ಟೇಕಲ್‌ ರಸ್ತೆ, ಅಮ್ಮವಾರಿಪೇಟೆ, ಗೌರಿಪೇಟೆಯ ಬೀದಿ ಬದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಸ ಬಿದ್ದಿದೆ.

ಕಸದ ರಾಶಿಯು ರಸ್ತೆ ಪಕ್ಕದ ಚರಂಡಿಗಳಿಗೆ ಹರಡಿಕೊಂಡು ಕೊಳಚೆ ನೀರಿನ ಹರಿವಿಗೆ ಅಡ್ಡಿಯಾಗಿದೆ. ಇದರಿಂದ ಹಲವೆಡೆ ಕೊಳಚೆ ನೀರು ರಸ್ತೆಗೆ ಹರಿಯುತ್ತಿದ್ದು, ಬಡಾವಣೆಗಳು ಕೊಳೆಗೇರಿಯಂತಾಗಿವೆ. ಮತ್ತೊಂದೆಡೆ ಕಸವು ರಸ್ತೆಗಳಿಗೆ ವ್ಯಾಪಿಸಿ ಜನರ ಹಾಗೂ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ.

ರೋಗ ಭೀತಿ: ಮಳೆ ನೀರಿನಿಂದ ಕಸ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಸದ ರಾಶಿ ಬಳಿ ಹಂದಿ, ಬೀದಿ ನಾಯಿ ಹಾಗೂ ಸೊಳ್ಳೆ ಕಾಟ ಹೆಚ್ಚಿದ್ದು, ಬಡಾವಣೆಗಳ ಸ್ವರೂಪವೇ ಬದಲಾಗಿದೆ. ಕಸದ ರಾಶಿಯಿಂದ ನೈರ್ಮಲ್ಯ ಸಮಸ್ಯೆ ಎದುರಾಗಿದ್ದು, ಜನರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ.

ಪೌರ ಕಾರ್ಮಿಕರಿಲ್ಲ: ಸರ್ಕಾರದ ನಿಯಮದ ಪ್ರಕಾರ ನಗರಸಭೆ ವ್ಯಾಪ್ತಿಯಲ್ಲಿ ಪ್ರತಿ 700 ಜನಸಂಖ್ಯೆಗೆ ಒಬ್ಬರು ಪೌರ ಕಾರ್ಮಿಕ ಇರಬೇಕು. ಈ ನಿಯಮದನ್ವಯ ನಗರದ ಜನಸಂಖ್ಯೆಗೆ ಹೋಲಿಸಿದರೆ ಕಸ ಸಂಗ್ರಹಣೆ, ವಿಂಗಡಣೆ ಹಾಗೂ ವಿಲೇವಾರಿಗೆ 286 ಪೌರ ಕಾರ್ಮಿಕರ ಅಗತ್ಯವಿದೆ. ಆದರೆ, ನಗರಸಭೆಯಲ್ಲಿ ಸದ್ಯ 59 ಮಂದಿ ಕಾಯಂ, 82 ಮಂದಿ ಗುತ್ತಿಗೆ ಆಧಾರದ, 7 ಮಂದಿ ಸಮಾನ ಕೆಲಸಕ್ಕೆ ಸಮಾನ ವೇತನದ ಹಾಗೂ 33 ಮಂದಿ ದಿನಗೂಲಿ ಪೌರ ಕಾರ್ಮಿಕರಿದ್ದಾರೆ.

ಪೌರ ಕಾರ್ಮಿಕರ ಸಂಖ್ಯೆ ಕಡಿಮೆಯಿರುವ ಕಾರಣಕ್ಕೆ ಹೆಚ್ಚುವರಿಯಾಗಿ 14 ಮಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ. ಆದರೂ 91 ಪೌರ ಕಾರ್ಮಿಕರ ಕೊರತೆಯಿದೆ. ಈ ನಡುವೆ ಹಬ್ಬದ ಕಾರಣಕ್ಕೆ ಹೆಚ್ಚಿನ ಪೌರ ಕಾರ್ಮಿಕರು ಸರಣಿ ರಜೆ ಪಡೆದಿದ್ದಾರೆ. ಮತ್ತೆ ಕೆಲ ಪೌರ ಕಾರ್ಮಿಕರು ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲಸಕ್ಕೆ ಗೈರಾಗಿದ್ದಾರೆ.

ಇದರಿಂದ ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ಹಳಿ ತಪ್ಪಿದ್ದು, ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಕಸದ ತೆರವಿಗೆ ಹೆಚ್ಚಿನ ಕಾಲಾವಕಾಶ ಬೇಕಿದ್ದು, ಸಮಸ್ಯೆಯಿಂದ ರೋಸಿ ಹೋಗಿರುವ ನಗರವಾಸಿಗಳು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಅಂಕಿ ಅಂಶ.....
* 27 ಚದರ ಕಿ.ಮೀ ನಗರದ ವಿಸ್ತಾರ
* 2 ಲಕ್ಷದ ಗಡಿ ದಾಟಿದ ಜನಸಂಖ್ಯೆ
* 80 ಟನ್‌ ಪ್ರತಿನಿತ್ಯ ಕಸ ಸಂಗ್ರಹಣೆ
* 91 ಪೌರ ಕಾರ್ಮಿಕರ ಕೊರತೆ

Post Comments (+)