ಗಿಡಗಳ ಸಂರಕ್ಷಣೆಗೆ ಮುಂದಾದ ಶಾಲೆ ಮಕ್ಕಳು

ಬುಧವಾರ, ಏಪ್ರಿಲ್ 24, 2019
31 °C

ಗಿಡಗಳ ಸಂರಕ್ಷಣೆಗೆ ಮುಂದಾದ ಶಾಲೆ ಮಕ್ಕಳು

Published:
Updated:
Prajavani

ಗೌರಿಬಿದನೂರು: ಶಾಲೆಯಲ್ಲಿ ಕಲಿತ ಪರಿಸರ ರಕ್ಷಣೆಯ ಪಾಠ ಪರೀಕ್ಷೆಗಷ್ಟೇ ಸೀಮಿತವಾಗಿಲ್ಲ. ನಿಜ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂಬುದು ಹಿರಿಯರ ಸಲಹೆ. ಅದನ್ನು ತಾಲ್ಲೂಕಿನ ಆರ್ಕುಂದ ಗ್ರಾಮದ ಶಾಲೆ ಮಕ್ಕಳು ಅಕ್ಷರಶಃ ಪಾಲಿಸುತ್ತಿದ್ದಾರೆ.

ಪರೀಕ್ಷೆ ಮುಗಿದಿದ್ದು, ಏ. 10ರ ವರೆಗೆ ಶಾಲೆ ಇದೆ. ಮೌಲ್ಯಮಾಪನ ನಡೆಯುತ್ತಿರುವ ಕಾರಣ ಪಾಠ ಕಮ್ಮಿ. ಮಕ್ಕಳಿಗೆ ಪಾಠದ ಜೊತೆಗೆ ಆಟಕ್ಕೆ ಹೆಚ್ಚಿನ ಅವಕಾಶ ನೀಡಲಾಗಿದೆ. ಆದರೆ ಇಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಆಟದ ಜೊತೆ ಗ್ರಾಮದಲ್ಲಿ ರಸ್ತೆ ಬದಿಗೆ ನೆಟ್ಟಿರುವ ಗಿಡಗಳಿಗೆ ನೀರುಣಿಸಿ ಪೊಷಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

‘ಊರಲ್ಲಿ ಎಲ್ಲರೂ ಕೃಷಿಕರೇ. ಬಿರು ಬಿಸಿಲು, ಬರಗಾಲದಿಂದ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಕುಡಿಯಲು ನೀರು ತರಲು ನಾವೂ ಸೇರಿದಂತೆ ಮನೆಯವರೆಲ್ಲ ಬಿಸಿಲಲ್ಲಿ ಕೊಡ ಹಿಡಿದು ಓಡಾಡುತ್ತಿದ್ದೇವೆ. ನಾವು ಹೇಗೋ ಬದುಕುತ್ತೇವೆ. ಆದರೆ ಗಿಡಗಳಿಗೆ ನೀರು ಉಣಿಸೋರು ಇಲ್ಲದೇ ಒಣಗುತ್ತಿರೋದು ಕಾಣಿಸಿತು. ಅದನ್ನು ಶಾಲೆಯಲ್ಲಿ ಗೆಳೆಯರಿಗೆ ಹೇಳಿದೆ. ಎಲ್ಲರೂ ಒಪ್ಪಿಕೊಂಡು ದಿನವೂ ಪ್ರತಿ ಗಿಡಕ್ಕೆ ಒಂದು ಕೊಡ ನೀರು ತಂದು ಹಾಕುತ್ತಿದ್ದೇವೆ’ ಎಂದು 5ನೇ ತರಗತಿಯ ವಿದ್ಯಾರ್ಥಿನಿ ಕಲ್ಪನಾ ಹೇಳಿದರು.

‘ಊರಲ್ಲಿ ವಿಶ್ರಾಂತಿ ಪಡೆಯಲು, ನೆರಳಿನ ಆಸರೆ ಪಡೆಯೋದಕ್ಕೆ ಗಿಡಗಳೇ ಇಲ್ಲ. ಊರಲ್ಲಿ ಪರಿಸರ ಉಳಿಸಬೇಕು ಎಂಬ ಕಾರಣಕ್ಕಾಗಿ ವರ್ಷದ ಹಿಂದೆ ರಸ್ತೆ ಪಕ್ಕಕ್ಕೆ ಗಿಡ ನೆಡಲಾಗಿದೆ. ಆದರೆ ಯಾರೂ ಪೋಷಣೆ ಮಾಡುತ್ತಿರಲಿಲ್ಲ. ಗಿಡಗಳೆಲ್ಲ ಒಣಗುತ್ತಿದ್ದವು. ಹಾಗೇ ಬಿಟ್ಟರೆ ಅವೂ ಉಳಿಯಲ್ಲ ಎಂಬುದನ್ನು ಗಮನಿಸಿ ನಾವೇ ಗೆಳೆಯರು ಸೇರಿ ನೀರುಣಿಸು ಕಾರ್ಯಕ್ಕೆ ಮುಂದಾಗಿದ್ದೇವೆ’ ಎಂದು ವಿದ್ಯಾರ್ಥಿಗಳಾದ ಕಿರಣ್‌ ಮತ್ತು ನವೀನ್‌ ತಿಳಿಸಿದರು.

‘ರಜೆಯ ಸಂದರ್ಭದಲ್ಲಿಯೂ ಸಹ ‍ಪ್ರತಿ ವಿದ್ಯಾರ್ಥಿಗೆ ತಲಾ ಐದು ಗಿಡಗಳಂತೆ ಹಂಚಿಕೆ ಮಾಡಿಕೊಂಡು ನೀರುಣಿಸಲಾಗುವುದು’ ಎಂದೂ ವಿದ್ಯಾರ್ಥಿಗಳು ಹೇಳುತ್ತಾರೆ.

ಕಣ್ತೆರೆಸಿದ ನಮ್ಮೂರ ಮಕ್ಕಳು
'ಸಾಮಾಜಿಕ‌ ಅರಣ್ಯ ಇಲಾಖೆಯವರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಗೆ ನೆಡುತೋಪು ‌ಯೋಜನೆಯಡಿ ಗಿಡ ನೆಟ್ಟು ಹೋದರು. ಆದರೆ ಪೋಷಣೆ ಮಾಡಲಿಲ್ಲ. ಆದರೆ ಮಕ್ಕಳು ಅರ್ಧ ಕಿ.ಮೀ. ದೂರದಿಂದ ನೀರು ತಂದು, ತಲಾ 5 ಗಿಡಗಳಂತೆ 150ಕ್ಕೂ ಹೆಚ್ಚು ಗಿಡ ಪೋಷಿಸುತ್ತಿದ್ದಾರೆ. ದನಕರು ತಿನ್ನದಂತೆ ಕಾಯುತ್ತಿದ್ದಾರೆ. ಹೀಗೆ ಮಾಡಲು ನಾವಾರೂ ಹೇಳಿಲ್ಲ. ಮಕ್ಕಳ ಕಾಳಜಿ ನಮಗೂ ಹೆಮ್ಮೆ ಎನಿಸುತ್ತದೆ’ ಎಂದು ಪೋಷಕರಾದ ಕೃಷ್ಣಮೂರ್ತಿ ಮತ್ತು ವೆಂಕಟೇಶ್ ತಿಳಿಸಿದರು.

ಎಲ್ಲರಿಗೂ ಮಾದರಿಯಾದ ಮಕ್ಕಳು
'ಮುಂಗಾರಿನ ಆರಂಭದಲ್ಲಿ ಸಾವಿರಾರು ಗಿಡಗಳನ್ನು ನೆಡಲಾಗಿತ್ತು. ಆದರೆ ಈ ಬಾರಿ ಮಳೆಯಾಗದೆ ನೀರಿನ ಮೂಲಗಳು ಬತ್ತಿವೆ. ನೀರಿಗೆ ತತ್ವಾರ ಶುರುವಾಗಿದೆ. ರಸ್ತೆ ಪಕ್ಕದ ಸಾಲುಗಿಡಗಳಿಗೆ ಅನುದಾನದ ಕೊರತೆಯಿಂದ 6 ತಿಂಗಳಿನಿಂದ ನೀರುಣಿಸಲು ಸಾಧ್ಯವಾಗಿಲ್ಲ. ಆದರೆ ಮಕ್ಕಳೇ ಸ್ವಯಂ ಸ್ಫೂರ್ತಿಯಿಂದ ಪೋಷಿಸುತ್ತಿರುವುದು ಸಂತಸದ ಸಂಗತಿ. ಈ ಮಕ್ಕಳು ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಅವರ ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಗತ್ಯವಿರುವ ಎಲ್ಲ ಕಲಿಕಾ ಸಾಮಗ್ರಿ ವೈಯಕ್ತಿಕವಾಗಿ ನಾನೇ ಕೊಡಿಸುತ್ತೇನೆ’ ಎಂದು ಸಾಮಾಜಿಕ ಅರಣ್ಯ ಇಲಾಖೆ ವಲಯ ಅಧಿಕಾರಿ ಎನ್.ಪದ್ಮಶ್ರೀ,  ಭರವಸೆ ನೀಡಿದರು.

ಶಿಕ್ಷಕರಿಗೂ ಮಕ್ಕಳಿಂದ ಪಾಠ
‘ಶಾಲೆಗೆ ಇನ್ನೂ ರಜೆ ಕೊಟ್ಟಿಲ್ಲ. ಮಕ್ಕಳಿಗೆ ನಿತ್ಯ ನೈತಿಕ ಪಾಠ ಕಲಿಸಲಾಗುತ್ತದೆ. ಪರಿಸರ ರಕ್ಷಣೆಯ ಮಹತ್ವದ ಬಗ್ಗೆ ಪಾಠ ಹೇಳಿ ಕೊಡುತ್ತಿದ್ದೇವೆ. ಇಲ್ಲಿ ಕಲಿತಿದ್ದನ್ನ ಮಕ್ಕಳು ಪಾಲನೆ ಮಾಡುತ್ತಿದ್ದಾರೆ. ಅರ್ಧ ಗಂಟೆ ಆಟದ ಸಮಯದಲ್ಲಿ ಕೊಡ ಹೊತ್ತು ಗಿಡಗಳಿಗೆ ನೀರುಣಿಸುವ ಮಕ್ಕಳನ್ನು ನೋಡಿದಾಗ ನಮಗೂ ಅಚ್ಚರಿಯಾಗಿತ್ತು. ಆದರೆ ಅವರ ಕಾಳಜಿ ಈಗ ನಮಗೇ ಪಾಠವಾಗಿದೆ’ ಎಂದು ಶಿಕ್ಷಕ ಚಾಂದ್‌ ಪಾಷಾ ಮೆಚ್ಚುಗೆ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !