ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುಬಾಯಿ ಜ್ವರಕ್ಕೆ ಕಡಿವಾಣ ಹಾಕಲು ಪಣ

ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಲಸಿಕೆ ಹಾಕಲು ಪಶುಪಾಲನಾ ಇಲಾಖೆ ಅಭಿಯಾನ
Last Updated 28 ಜನವರಿ 2019, 19:45 IST
ಅಕ್ಷರ ಗಾತ್ರ

ಕೋಲಾರ: ಬೇಸಿಗೆಯಲ್ಲಿ ಜಾನುವಾರುಗಳನ್ನು ಬಾಧಿಸುವ ಕಾಲುಬಾಯಿ ಜ್ವರವನ್ನು ಸಂಪೂರ್ಣ ಹತೋಟಿಗೆ ತಂದು ಜಿಲ್ಲೆಯನ್ನು ಕಾಲುಬಾಯಿ ಜ್ವರ ಮುಕ್ತ ಜಿಲ್ಲೆಯಾಗಿ ಮಾಡಲು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯು ಪಣ ತೊಟ್ಟಿದೆ.

ಜಿಲ್ಲೆಯಲ್ಲಿ ಹೈನುಗಾರಿಕೆಯೇ ಪ್ರಧಾನವಾಗಿದ್ದು, ಬಹುಪಾಲು ರೈತರು ಜಾನುವಾರು ಸಾಕಿದ್ದಾರೆ. ಹೈನೋದ್ಯಮವು ರೈತರ ಪ್ರಮುಖ ಆದಾಯ ಮೂಲವಾಗಿದೆ. ರೈತರು ಹಸು ಹಾಗೂ ಎಮ್ಮೆ ಹಾಲನ್ನು ಡೇರಿಗೆ ಹಾಕಿ ಅದರಿಂದ ಬರುವ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಜಿಲ್ಲೆಯಲ್ಲಿ 1,85,285 ದನಗಳು, 27,779 ಎಮ್ಮೆಗಳು ಹಾಗೂ 5,469 ಹಂದಿಗಳು ಇವೆ. ಕಾಲುಗಳಲ್ಲಿ ಗೊರಸಲು ಹೊಂದಿರುವ ದನ, ಎಮ್ಮೆ ಹಾಗೂ ಹಂದಿಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಳ್ಳುತ್ತದೆ. ಜಾನುವಾರುಗಳಿಗೆ ಸಾಮಾನ್ಯವಾಗಿ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಈ ರೋಗ ಬರುತ್ತದೆ.

2017ರಲ್ಲಿ ಜಿಲ್ಲೆಯ ಮೂರು ತಾಲ್ಲೂಕುಗಳ ಜಾನುವಾರುಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿತ್ತು. ಕೋಲಾರ, ಮಾಲೂರು ಮತ್ತು ಮುಳಬಾಗಿಲು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಸು, ಕರು ಹಾಗೂ ಎಮ್ಮೆ ಸೇರಿದಂತೆ 22 ಜಾನುವಾರುಗಳಿಗೆ ಈ ರೋಗ ತಗುಲಿತ್ತು. ಹೀಗಾಗಿ ಇಲಾಖೆಯು ಕಾಲುಬಾಯಿ ಜ್ವರಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಲು ಜಿಲ್ಲೆಯಾದ್ಯಂತ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಲು ಅಭಿಯಾನ ಆರಂಭಿಸಿದೆ.

20 ದಿನ ಅಭಿಯಾನ: ಒಟ್ಟಾರೆ 20 ದಿನದ ಅಭಿಯಾನದಲ್ಲಿ 2,18,533 ಜಾನುವಾರುಗಳಿಗೆ ಕಾಲುಬಾಯಿ ಜ್ವರ ನಿರೋಧಕ ಲಸಿಕೆ ಹಾಕುವ ಗುರಿ ಇದೆ. ಅಭಿಯಾನಕ್ಕೆ 250 ಲಸಿಕೆದಾರರು ಮತ್ತು 25 ಮೇಲ್ವಿಚಾರಕರನ್ನು ಒಳಗೊಂಡ 25 ವಿಶೇಷ ತಂಡ ರಚಿಸಲಾಗಿದೆ. ಸಿಬ್ಬಂದಿ ಗ್ರಾಮಗಳಲ್ಲಿ ಸಂಚರಿಸಿ ರೈತರ ಮನೆ ಬಾಗಿಲಲ್ಲೇ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕುತ್ತಾರೆ. ಅಭಿಯಾನಕ್ಕೆ 26 ವಾಹನ ಬಳಸಿಕೊಳ್ಳಲಾಗುತ್ತಿದೆ. 3 ತಿಂಗಳ ಮೇಲಿನ ಎಲ್ಲಾ ಜಾನುವಾರುಗಳಿಗೂ ಲಸಿಕೆ ಹಾಕಲಾಗುತ್ತದೆ.

ಲಕ್ಷಣಗಳು: ‘ಪಿಕೊರ್ನಾ’ ವೈರಸ್‌ನಿಂದ ಬರುವ ಕಾಲುಬಾಯಿ ಜ್ವರವು ಸಾಂಕ್ರಮಿಕ ರೋಗವಾಗಿದೆ. ಈ ಸೋಂಕಿಗೆ ತುತ್ತಾದ ಜಾನುವಾರುಗಳ ಗೊರಸಲು ಹಾಗೂ ಬಾಯಿಯ ಭಾಗದಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತವೆ. ಬಾಯಿಯಲ್ಲಿನ ಚಿಕ್ಕ ನೀರ್ಗುಳ್ಳೆಗಳು ಒಡೆದು, ಜಾನುವಾರುಗಳು ಜೊಲ್ಲು ಸುರಿಸುತ್ತವೆ. ಗೊರಸಲು ಭಾಗದಲ್ಲಿ ಹುಣ್ಣು ಹೆಚ್ಚಾದರೆ ಜಾನುವಾರುಗಳು ಕುಂಟಲು ಆರಂಭಿಸುತ್ತವೆ. ಜತೆಗೆ ಜಾನುವಾರುಗಳಿಗೆ 106ರಿಂದ 108 ಫ್ಯಾರನ್‌ ಹೀಟ್‌ ಜ್ವರ ಬರುತ್ತದೆ.

ರೋಗಕ್ಕೆ ತುತ್ತಾದ ಜಾನುವಾರುಗಳು ಮೇವು ತಿನ್ನುವುದಿಲ್ಲ ಮತ್ತು ನೀರು ಕುಡಿಯುವುದಿಲ್ಲ. ಈ ಸೋಂಕು ಒಂದು ಜಾನುವಾರಿನಿಂದ ಮತ್ತೊಂದು ಜಾನುವಾರಿಗೆ ಗಾಳಿ, ನೀರು, ಮೇವಿನ ಮೂಲಕ ಹರಡುತ್ತದೆ. ಸೋಂಕನ್ನು ನಿರ್ಲಕ್ಷಿಸಿದರೆ ಕಾಯಿಲೆಯು ನಾಯಿ ರೋಗಕ್ಕೆ ತಿರುಗಿ ಜಾನುವಾರು ಸಾಯುವ ಸಾಧ್ಯತೆ ಇದೆ.

ಹಾಲು ಕಡಿಮೆ: ಕಾಲುಬಾಯಿ ಜ್ವರದಿಂದ ಹಸು ಮತ್ತು ಎಮ್ಮೆಗಳಲ್ಲಿ ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ. ಸೋಂಕು ನಾಯಿ ರೋಗಕ್ಕೆ ತಿರುಗಿದರೆ ಜಾನುವಾರು ಗರ್ಭ ಧರಿಸುವ ಸಾಧ್ಯತೆ ಕಡಿಮೆ. ಪದೇ ಪದೇ ಗರ್ಭಧಾರಣೆ ಮಾಡಿಸಿದರೂ ಗರ್ಭ ನಿಲ್ಲುವುದಿಲ್ಲ. ಹಂದಿಗಳಿಗೆ ಈ ಸೋಂಕು ತಗುಲಿದರೆ ಮಾಂಸದ ಗುಣಮಟ್ಟ ಕುಸಿದು ದರ ಕಡಿಮೆಯಾಗುತ್ತದೆ.

ಅಂಕಿ ಅಂಶ....
* 2,18,533 ಜಾನುವಾರು
* 25 ಲಸಿಕೆ ತಂಡಗಳ ರಚನೆ
* 250 ಮಂದಿ ಲಸಿಕೆದಾರರು
* 26 ವಾಹನಗಳ ನಿಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT