ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಮುಲಾಜಿಲ್ಲದೆ ತೆರಿಗೆ ವಸೂಲಿ ಮಾಡಿ: ಅಧಿಕಾರಿಗಳಿಗೆ ಡಿಸಿ ಮಂಜುನಾಥ್‌ ಸೂಚನೆ

Published:
Updated:
Prajavani

ಕೋಲಾರ: ‘ನಗರಸಭೆ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ತೆರಿಗೆ ವಸೂಲಿ ಮಾಡಿದರೆ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ. ಅಧಿಕಾರಿಗಳು ಯಾವುದೇ ಮುಲಾಜಿಲ್ಲದೆ ತೆರಿಗೆ ವಸೂಲಿ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

ಇಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ತೆರಿಗೆ ವಸೂಲಿ ಮಾಡದೆ ಆದಾಯ ಬರಬೇಕು ಎಂದರೆ ಅಗುವುದಿಲ್ಲ. ಬೇಡಿಕೆ ಇರುವಷ್ಟು ತೆರಿಗೆ ವಸೂಲಿ ಮಾಡಲೇಬೇಕು. ಪ್ರತಿ ತಿಂಗಳು ಖರ್ಚು, ವೆಚ್ಚ ಕುರಿತು ಸಭೆ ನಡೆಸಬೇಕು’ ಎಂದು ಆದೇಶಿಸಿದರು.

‘ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ಕಾಲೇಜು, ವಿಶ್ವವಿದ್ಯಾಲಯ, ವಾಣಿಜ್ಯ ಮಳಿಗೆ, ಆಸ್ಪತ್ರೆಗಳಿವೆ. ಸಕಾಲಕ್ಕೆ ತೆರಿಗೆ ಪಾವತಿಸದಿದ್ದರೆ ನೋಟಿಸ್ ಜಾರಿ ಮಾಡಿ ವಸೂಲಿ ಮಾಡಬೇಕು. ರಾಜಕೀಯ ಒತ್ತಡ ಅಥವಾ ಯಾರ ಮುಲಾಜಿಗೂ ಮಣಿಯಬೇಡಿ. ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವೇತನ ಪಾವತಿಯಾಗಬೇಕಾದರೆ ಪ್ರಾಮಾಣಿಕವಾಗಿ ತೆರಿಗೆ ಸಂಗ್ರಹ ಮಾಡಬೇಕು’ ಎಂದು ತಾಕೀತು ಮಾಡಿದರು.

‘ಯಾವುದೇ ಸ್ಥಳೀಯ ಸಂಸ್ಥೆಯಲ್ಲಿ ಶೇ 50ರಷ್ಟು ತೆರಿಗೆ ವಸೂಲಿಯಾಗಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ಸಮಸ್ಯೆಗಳ ಸುರಿಮಳೆ ಸುರಿಸುತ್ತೀರಿ. ನಿಮ್ಮ ಕಾರ್ಯ ವ್ಯಾಪಿಯಲ್ಲಿ ಸರಿಯಾಗಿ ಕೆಲಸ ಮಾಡಿದರೆ ಸಮಸ್ಯೆ ಎದುರಾಗುವುದಿಲ್ಲ. ಯಾರದೋ ಒತ್ತಡಕ್ಕೆ ಮಣಿದು ಕೆಲಸ ಮಾಡಿದರೆ ಏನು ಪ್ರಯೋಜನ?’ ಎಂದು ಪ್ರಶ್ನಿಸಿದರು.

₹ 4.50 ಕೋಟಿ ಗುರಿ: ‘ಕೋಲಾರ ನಗರಸಭೆಯಲ್ಲಿ ₹ 4.50 ಕೋಟಿ ತೆರಿಗೆ ಸಂಗ್ರಹಣೆ ಗುರಿಯಿದೆ. ವಾಣಿಜ್ಯ ತೆರಿಗೆ ಶೇ 74, ನೀರಿನ ತೆರಿಗೆ ಶೇ 16ರಷ್ಟು ಹಾಗೂ ಜಾಹೀರಾತು ತೆರಿಗೆ ಶೇ 33ರಷ್ಟು ವಸೂಲಿಯಾಗಿದೆ’ ಎಂದು ನಗರಸಭೆ ಆಯುಕ್ತ ಸತ್ಯನಾರಾಯಣ್ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ನೀವು ಕಾರ್ಯವೈಖರಿ ಸಮಾಧಾನ ತಂದಿಲ್ಲ. ನಗರದಲ್ಲಿ ಸಾಕಷ್ಟು ಬಹುಮಹಡಿ ಕಟ್ಟಡಗಳು ತಲೆಎತ್ತಿವೆ. ಈ ಕಟ್ಟಡಗಳಿಗೆ ಅನುಮತಿ ನೀಡಿದ್ದೀರಾ? ಇಲ್ಲಿ ಹೇಳುವವರು ಕೇಳುವವರು ಇಲ್ಲವೇನು?’ ಎಂದು ಕೆಂಡಾಮಂಡಲರಾದರು.

ಮಾಹಿತಿ ನೀಡಬೇಕು: ‘ಪ್ರತಿ ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಎಷ್ಟು ಕೊಳವೆ ಬಾವಿಗಳು ಕಾರ್ಯ ನಿರ್ವಹಿಸುತ್ತಿವೆ. ಎಷ್ಟು ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ವಾರದೊಳಗೆ ಖರ್ಚು ವೆಚ್ಚದ ಸಂಬಂಧ ಸಭೆ ನಡೆಸಬೇಕು’ ಎಂದು ಸೂಚನೆ ನೀಡಿದರು.

‘ತೆರಿಗೆ ಪಾವತಿಸದವರ ಕಟ್ಟಡ ಯುಜಿಡಿ ಮತ್ತು ನೀರಿನ ಸಂಪರ್ಕ ಕಡಿತಗೊಳಿಸಿ. ಅವರು ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ದೂರು ದಾಖಲಿಸಿ. ಟ್ಯಾಂಕರ್ ನೀರು ಪೂರೈಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯದಂತೆ ಎಚ್ಚರ ವಹಿಸಿ’ ಎಂದು ತಿಳಿಸಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ಕೆಜಿಎಫ್ ನಗರಸಭೆ ಆಯುಕ್ತ ಶ್ರೀಕಾಂತ್ ಹಾಜರಿದ್ದರು.

Post Comments (+)