ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ ಕಾರ್ಮಿಕರಿಗೆ ಉಡುಗೊರೆ: ಧರಣಿ

Last Updated 23 ಸೆಪ್ಟೆಂಬರ್ 2020, 15:17 IST
ಅಕ್ಷರ ಗಾತ್ರ

ಕೋಲಾರ: ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಅಭಿಮಾನಿ ಬಳಗದ ವತಿಯಿಂದ ನಗರಸಭೆಯ ಪೌರ ಕಾರ್ಮಿಕರಿಗೆ ಉಡುಗೊರೆಯಾಗಿ ಮಿಕ್ಸಿ ನೀಡಿದ್ದನ್ನು ಖಂಡಿಸಿ ಭಾರತೀಯ ದಲಿತ ಸೇನೆ ಸದಸ್ಯರು ಇಲ್ಲಿ ಬುಧವಾರ ಧರಣಿ ನಡೆಸಿದರು.

ಕೊತ್ತೂರು ಮಂಜುನಾಥ್ ಅಭಿಮಾನಿ ಬಳಗದ ಸದಸ್ಯರು ನಗರಸಭೆ ಆವರಣದಲ್ಲಿ ಆಯೋಜನೆಯಾಗಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಿಕ್ಸಿ ವಿತರಿಸುತ್ತಾರೆ ಎಂದು ಮೊದಲೇ ತಿಳಿದಿದ್ದ ಭಾರತೀಯ ದಲಿತ ಸೇನೆ ಸದಸ್ಯರು ನಗರಸಭೆ ಪ್ರವೇಶ ಭಾಗದಲ್ಲಿ ಜಮಾಯಿಸಿ ಧರಣಿ ಮಾಡಿದರು.

‘ಪೌರ ಕಾರ್ಮಿಕರ ದಿನಾಚರಣೆಯು ಸರ್ಕಾರಿ ಕಾರ್ಯಕ್ರಮ. ಕೊತ್ತೂರು ಮಂಜುನಾಥ್‌ ಅವರು ರಾಜಕೀಯ ಲಾಭಕ್ಕಾಗಿ ಪೌರ ಕಾರ್ಮಿಕರಿಗೆ ಮಿಕ್ಸಿ ಕೊಡಲು ಮುಂದಾಗಿದ್ದಾರೆ. ಅಧಿಕಾರಿಗಳು ಇದಕ್ಕೆ ಅವಕಾಶ ನೀಡಬಾರದು’ ಎಂದು ಭಾರತೀಯ ದಲಿತ ಸೇನೆ ರಾಜ್ಯ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಆಗ್ರಹಿಸಿದರು.

‘ಕೊತ್ತೂರು ಮಂಜುನಾಥ್‌ ಅವರಿಗೆ ಅಥವಾ ಅವರ ಬೆಂಬಲಿಗರಿಗೆ ವೇದಿಕೆ ಏರಲು ಅವಕಾಶ ನೀಡಬಾರದು. ಕಾರ್ಯಕ್ರಮದಲ್ಲಿ ಮಿಕ್ಸಿ ವಿತರಣೆ ಮಾಡಿದರೆ ಅರೆಬೆತ್ತಲೆಯಾಗಿ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಹೀಗಾಗಿ ಕೊತ್ತೂರು ಮಂಜುನಾಥ್‌ ಅಭಿಮಾನಿ ಬಳಗದ ಸದಸ್ಯರು ಕಾರ್ಯಕ್ರಮದ ಸ್ಥಳಕ್ಕೆ ಬರಲಿಲ್ಲ. ಬದಲಿಗೆ ಕಾರ್ಯಕ್ರಮ ಮುಗಿದ ನಂತರ ಸಮೀಪದ ಜಿಲ್ಲಾ ಒಕ್ಕಲಿಗರ ಸಂಘದ ಹಾಸ್ಟೆಲ್‌ ಆವರಣದಲ್ಲಿ ಪೌರ ಕಾರ್ಮಿಕರಿಗೆ ಮಿಕ್ಸಿ ವಿತರಿಸಿದರು.

ಆತಂಕದ ವಾತಾವರಣ: ಒಕ್ಕಲಿಗರ ಸಂಘದ ಹಾಸ್ಟೆಲ್‌ ಬಳಿ ಬಂದು ಅರೆಬೆತ್ತಲಾಗಿ ರಸ್ತೆ ಮಧ್ಯೆ ಧರಣಿ ಕುಳಿತ ನಾರಾಯಣಸ್ವಾಮಿ, ‘ಕೊತ್ತೂರು ಮಂಜುನಾಥ್‌ ಅವರು ಮಿಕ್ಸಿ ಕೊಟ್ಟು ಪೌರ ಕಾರ್ಮಿಕರನ್ನು ಅವಮಾನಿಸುತ್ತಿದ್ದಾರೆ’ ಎಂದು ಆರೋಪಿಸಿ ಧಿಕ್ಕಾರ ಕೂಗಿದರು. ಇದಕ್ಕೆ ಪ್ರತಿಯಾಗಿ ಮಂಜುನಾಥ್‌ ಬೆಂಬಲಿಗರು ಕೊತ್ತೂರು ಮಂಜುನಾಥ್‌ ಪರ ಜೈಕಾರ ಕೂಗಿದರು.

ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಬಳಿಕ ಕೊತ್ತೂರು ಮಂಜುನಾಥ್‌ ಬೆಂಬಲಿಗರು ಸ್ಥಳದಿಂದ ನಿರ್ಗಮಿಸಿದ್ದರಿಂದ ಪರಿಸ್ಥಿತಿ ತಿಳಿಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT