ಗುರುವಾರ , ಸೆಪ್ಟೆಂಬರ್ 19, 2019
22 °C
ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್‌ಪ್ರಸಾದ್‌ ಹೇಳಿಕೆ

ಗಿರಿರಾಜ ಕೋಳಿ ಹೆಚ್ಚು ಲಾಭದಾಯಕ

Published:
Updated:
Prajavani

ಕೋಲಾರ: ‘ರೈತರು ಹಿತ್ತಲ ಕೋಳಿಯಾಗಿ ಗಿರಿರಾಜ ತಳಿ ಕೋಳಿಗಳನ್ನು ಸಾಕುವ ಮೂಲಕ ಹೆಚ್ಚಿನ ಲಾಭ ಗಳಿಸಬಹುದು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್‌ಪ್ರಸಾದ್ ಕಿವಿಮಾತು ಹೇಳಿದರು.

ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಗಿರಿರಾಜ ತಳಿಯ ಕೋಳಿ ಮರಿ ವಿತರಿಸಿ ಮಾತನಾಡಿ, ‘ಗಿರಿರಾಜ ಕೋಳಿ ಸಾಕಣೆಗೆ ಹೆಚ್ಚು ಹಣ ವೆಚ್ಚವಾಗುವುದಿಲ್ಲ. ಮಿತ ಬಂಡವಾಳದಲ್ಲಿ ಈ ಕೋಳಿ ಮರಿಗಳನ್ನು ಸಾಕಬಹುದು’ ಎಂದರು.

‘ಗಿರಿರಾಜ ತಳಿಯ ಒಂದು ಕೋಳಿಯಿಂದ ವರ್ಷಕ್ಕೆ ಸುಮಾರು ₹ 2,500 ಲಾಭ ಬರುತ್ತದೆ. ರೈತರು ಮನೆಯ ಸುತ್ತಮುತ್ತಲೇ ಸುಲಭವಾಗಿ ಈ ಕೋಳಿಗಳನ್ನು ಮೇಯಿಸಬಹುದು. ವೈಜ್ಞಾನಿಕ ರೀತಿಯಲ್ಲಿ ಕೋಳಿ ಸಾಕಾಣಿಕೆ ಮಾಡಿ ಆರ್ಥಿಕವಾಗಿ ಸಬಲರಾಗಬೇಕು’ ಎಂದು ಸಲಹೆ ನೀಡಿದರು.

‘ವರ್ಷಕ್ಕೆ ಸರಾಸರಿ 180 ಮೊಟ್ಟೆ ಇಡುವ ಗಿರಿರಾಜ ತಳಿಯ ಕೋಳಿ ಒಂದೇ ವರ್ಷದಲ್ಲಿ ಸುಮಾರು 9 ಕೆ.ಜಿ ಗಾತ್ರ ಬೆಳೆಯುತ್ತದೆ. ರೈತರು ಕೃಷಿಯ ಜತೆಗೆ ಉಪ ಕಸುಬಾಗಿ ಕೋಳಿ ಸಾಕಾಣಿಕೆ ಮಾಡಬಹುದು. ಕೋಳಿಗಳಿಗೆ ಬರುವ ಕಾಯಿಲೆ ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಹಾಕಿಸಬೇಕು’ ಎಂದು ತಿಳಿಸಿದರು.

‘ಇಲಾಖೆಯು 1970ರಿಂದಲೂ ಗಿರಿರಾಜ ತಳಿ ಕೋಳಿ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಹಲವಾರು ರೈತರು ಮುಖ್ಯ ಕಸುಬಾಗಿ ಕೋಳಿ ಸಾಕಾಣಿಕೆ ಮಾಡಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ’ ಎಂದು ಜಿಲ್ಲಾ ಕೋಳಿ ಸಾಕಾಣಿಕಾ ಕೇಂದ್ರದ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಮಂಜುನಾಥರೆಡ್ಡಿ ವಿವರಿಸಿದರು.

‘ಪ್ರತಿ ಜಿಲ್ಲಾ ಪಂಚಾಯತಿ ಸದಸ್ಯರಿಗೆ 400 ಕೋಳಿ ಮರಿ ಹಂಚಿಕೆ ಮಾಡಲಾಗಿದ್ದು, ಅವರು ತಲಾ 4 ಮರಿಯಂತೆ 40 ಮಂದಿಗೆ ವಿತರಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 16 ಫಲಾನುಭವಿಗಳಿಗೆ ಉಚಿತವಾಗಿ ಕೋಳಿ ಮರಿ ನೀಡಲಾಗುತ್ತಿದೆ. ಉಳಿದ 24 ಮಂದಿಗೆ ಮರಿಯೊಂದಕ್ಕೆ ₹ 20 ಪಡೆಯಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಮಧುಸೂದನ್ ರೆಡ್ಡಿ, ಸೂಪರಿಂಟೆಂಡೆಂಟ್‌ ಡಾ.ವಿಶ್ವನಾಥ್, ಸಹಾಯಕ ನಿರ್ದೇಶಕ ಡಾ.ಆಂಜನೇಯರೆಡ್ಡಿ ಹಾಜರಿದ್ದರು.

Post Comments (+)