ಬುಧವಾರ, ಮೇ 18, 2022
29 °C
ಪೋಷಕರಿಗೆ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಕಿವಿಮಾತು

ಮಕ್ಕಳಿಗೆ ಒಳಿತು ಕೆಡುಕಿನ ಮಾರ್ಗದರ್ಶನ ನೀಡಿ: ದೇವಮಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಸಂಸ್ಕಾರದ ಜತೆ ಒಳಿತು ಕೆಡುಕುಗಳ ಕುರಿತು ಮಾರ್ಗದರ್ಶನ ನೀಡಿದರೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಬಹುದು’ ಎಂದು ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಬಿ.ಪಿ.ದೇವಮಾನೆ ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಸಹಯೋಗದಲ್ಲಿ ಇಲ್ಲಿ ವಿದ್ಯಾರ್ಥಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಸೈಬರ್ ಅಪರಾಧ ಮತ್ತು ಪೋಕ್ಸೊ ಕಾಯ್ದೆ ಕುರಿತ ಕಾನೂನು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಪೋಷಕರು ಮಕ್ಕಳಿಗೆ ಮನೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಬೇಕು. ಯಾರೊಂದಿಗೆ ಹೇಗೆ ವ್ಯವಹರಿಸಬೇಕು, ದಾರಿಯಲ್ಲಿ ಸಾಗುವಾಗ ವಹಿಸಬೇಕಾದ ಎಚ್ಚರಿಕೆ, ಅಪರಿಚಿತರೊಂದಿಗೆ ನಮ್ಮ ನಡೆ ಹೇಗಿರಬೇಕು ಎಂಬ ಬಗ್ಗೆ ಅರಿವು ಮೂಡಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಸಾರ್ವಜನಿಕರು ಸಮಾಜದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಸಂಗತಿಯನ್ನು ಪೊಲೀಸರ ಗಮನಕ್ಕೆ ತಂದು ಅಪರಾಧ ಚಟುವಟಿಕೆ ತಡೆಯಲು ಸಹಕರಿಸಬೇಕು. ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಅಥವಾ ಮನೆಗೆ ಹೋಗುವಾಗ ಯಾವುದೇ ಸ್ಥಳದಲ್ಲಿ ಅಪರಾಧ ಕೃತ್ಯ ನಡೆದರೆ ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.

ಪ್ರತಿರೋಧ ತೋರಿ: ‘ಅಪರಿಚಿತರು ಅಥವಾ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಅಪರಿಚಿತರು ಕೊಡುವ ಆಹಾರ ಪದಾರ್ಥ ತಿನ್ನಬಾರದು. ಮಕ್ಕಳು ಶಾಲೆಗೆ ಬಂದು ಹೋಗುವಾಗ ಜಾಗ್ರತೆ ವಹಿಸಬೇಕು. ದೂರದ ಊರಿನಿಂದ ಬರುವವರು ಗುಂಪಾಗಿಯೇ ಬರಬೇಕು. ದಾರಿ ಮಧ್ಯೆ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದ ಘಟನೆ ಕಂಡುಬಂದರೆ ಸಂಘಟಿತರಾಗಿ ಪ್ರತಿರೋಧ ತೋರಬೇಕು. ಜತೆಗೆ ಆ ಸಂಗತಿಯನ್ನು ಪೋಷಕರಿಗೆ, ಶಿಕ್ಷಕರಿಗೆ ಅಥವಾ ಪೊಲೀಸರಿಗೆ ತಿಳಿಸಬೇಕು’ ಎಂದು ಸಲಹೆ ನೀಡಿದರು.

‘ಮಾದಕ ವ್ಯಸನದಿಂದ ಭವಿಷ್ಯವೇ ಸರ್ವ ನಾಶವಾಗುತ್ತದೆ. ಮಾದಕ ವಸ್ತುಗಳ ಸೇವನೆಯು ಜೀವಕ್ಕೆ ಅಪಾಯಕಾರಿ. ಅತಿಯಾಗಿ ಮೊಬೈಲ್ ಬಳಕೆ, ಅಪರಿಚಿತರು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಸಿಕ್ಕವರೊಂದಿಗೆ ಸ್ನೇಹ ಗಳಿಸಿ ಹತ್ತಿರವಾಗುವುದನ್ನು ತಪ್ಪಿಸುವ ಅಗತ್ಯವಿದೆ, ಪರಿಚಿತರೊಂದಿಗೂ ಮಕ್ಕಳ ನಡೆ ಎಚ್ಚರಿಕೆಯದಾಗಿರಬೇಕು’ ಎಂದು ತಿಳಿಸಿದರು.

ಸಂತಸದ ಜೀವನ: ‘ಕಾನೂನು ಪಾಲನೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ಅಪರಾಧ ಮುಕ್ತವಾಗಿ ಸಂತಸದ ಜೀವನ ನಡೆಸಬೇಕು. 18 ವರ್ಷಕ್ಕೂ ಮುನ್ನವೇ ವಾಹನ ಚಾಲನೆ, ಬಾಲಕಾರ್ಮಿಕ ಪದ್ಧತಿ, ಜೀತ ಪದ್ದತಿ, ಬಾಲ್ಯವಿವಾಹ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್‌ ಹೇಳಿದರು.

‘ಮಾದಕ ವ್ಯಸನವು ಮಾರಕ ಪಿಡುಗು. ಸುತ್ತಮುತ್ತಲಿನವರೇ ಈ ವ್ಯಸನಕ್ಕೆ ಒಳಗಾಗಿರಬಹುದು. ಅವರಿಗೆ ಮಾದಕ ವ್ಯಸನದ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಬೇಕು. ಮಾದಕ ವಸ್ತು ಸೇವನೆ, ಮಾರಾಟ ಮತ್ತು ಸಾಗಣೆ ಕಂಡುಬಂದಲ್ಲಿ ಶಿಕ್ಷಕರು ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು’ ಎಂದು ಕೋರಿದರು.

ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರಘುಪತಿಗೌಡ, ವಕೀಲರಾದ ಕೆ.ಆರ್.ಧನರಾಜ್, ಸುಜಾತಾ, ಸಿದ್ದಾರ್ಥ್ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಪದ್ಮಾವತಿ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.