ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲೂ ಮಕ್ಕಳಿಗೆ ಬಿಸಿಯೂಟ ನೀಡಿ: ಜಿ.ಪಂ ಸಿಇಒ ಜಗದೀಶ್‌ ಸೂಚನೆ

Last Updated 9 ಏಪ್ರಿಲ್ 2019, 13:30 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಬರಗಾಲ ಎದುರಾಗಿದ್ದು, ಬೇಸಿಗೆ ರಜೆ ದಿನಗಳಲ್ಲೂ ಶಾಲಾ ಮಕ್ಕಳಿಗೆ ಬಿಸಿಯೂಟ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಬೇಸಿಗೆ ರಜೆ ದಿನಗಳಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆ ಅನುಷ್ಠಾನ ಕುರಿತು ಇಲ್ಲಿ ಮಂಗಳವಾರ ನಡೆದ ನಡೆದ ಸಭೆಯಲ್ಲಿ ಮಾತನಾಡಿ, ‘ಬೇಸಿಗೆ ರಜೆ ಸಿಕ್ಕಿದೆ ಎಂದು ಮುಖ್ಯ ಶಿಕ್ಷಕರು ಮನರಂಜನೆಗಾಗಿ ಪ್ರವಾಸ ಹೋಗುವುದಲ್ಲ. ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಬಿಸಿಯೂಟ ನೀಡುವುದು ಜವಾಬ್ದಾರಿ ಮುಖ್ಯ ಶಿಕ್ಷಕರ ಮೇಲಿದೆ’ ಎಂದರು.

‘ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ನೇ ತರಗತಿಯಿಂದ 9ನೇ ತರಗತಿವರೆಗೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆ ಅನುಷ್ಠಾನಗೊಳಿಸಬೇಕು. ಯೋಜನೆಗೆ ಅಗತ್ಯವಿರುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆಯಿಂದ ಮಾಡಬೇಕು. ಏ 11ರಿಂದ ಮೇ 27ರವರೆಗೆ ಬಿಸಿಯೂಟ ನೀಡಬೇಕು’ ಎಂದು ತಿಳಿಸಿದರು.

‘ಬಿಸಿಯೂಟ ತಯಾರಿಕೆಗೆ ಅಗತ್ಯವಿರುವ ಆಹಾರ ಪದಾರ್ಥಗಳನ್ನು ಸಕಾಲಕ್ಕೆ ಸರಬರಾಜು ಮಾಡಬೇಕು. ಒದಕ್ಕಿಂತ ಹೆಚ್ಚು ಶಾಲೆಗಳಿದ್ದಲ್ಲಿ ಹೆಚ್ಚು ಮಕ್ಕಳಿರುವ ಶಾಲೆಯನ್ನು ಕೇಂದ್ರ ಶಾಲೆಯೆಂದು ಗುರುತಿಸಿ. ಒಂದು ಅಥವಾ ಎರಡು ತಾಸು ಬೇಸಿಗೆ ಶಿಬಿರ ರೀತಿ ಮಾಡಿ. ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಚಟುವಟಿಕೆಗಳನ್ನು ನಡೆಸಬೇಕು’ ಎಂದು ಸಲಹೆ ನೀಡಿದರು.

ಸಂದೇಶ ಕಳುಹಿಸಬೇಕು: ‘ಮುಖ್ಯ ಶಿಕ್ಷಕರು ರಜೆ ಮೇಲೆ ತೆರಳುವ ಮುನ್ನ ಬೇರೆ ಶಿಕ್ಷಕರಿಗೆ ಬಿಸಿಯೂಟದ ಜವಾಬ್ದಾರಿ ವಹಿಸಬೇಕು. ಪ್ರತಿನಿತ್ಯ ಮಕ್ಕಳ ಹಾಜರಾತಿ ಬಗ್ಗೆ ಮೊಬೈಲ್‌ಗೆ ಸಂದೇಶ ಕಳುಹಿಸಬೇಕು. ಮಕ್ಕಳ ಸುರಕ್ಷತೆ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಸೂಚನೆ ನೀಡಿದರು.

‘ಸಿಆರ್‌ಪಿ, ಬಿಆರ್‌ಪಿಗಳು ಏನು ಕೆಲಸ ಮಾಡುತ್ತಿದ್ದಾರೆ ಎಂಬುದು ಅವರಿಗೆ ಗೊತ್ತಿರಬೇಕು. ಶಾಲೆಗಳಿಗೆ ಪ್ರತಿ ತಿಂಗಳು ಆಹಾರ ಪದಾರ್ಥ ಸರಬರಾಜು ಮಾಡಲಾಗುತ್ತಿದೆ. ಆದರೆ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಆಹಾರ ಪದಾರ್ಥಗಳ ಗುಣಮಟ್ಟ, ತೂಕ ಪರಿಶೀಲನೆ ಮಾಡುತ್ತಿಲ್ಲ. ಸಿಆರ್‌ಪಿಗಳಿಗೆ ಬೇರೆ ಕೆಲಸ ಏನಿದೆ?’ ಎಂದು ಪ್ರಶ್ನಿಸಿದರು.

ಶಿಸ್ತುಕ್ರಮ ಜರುಗಿಸುತ್ತೇನೆ: ‘ಪ್ರತಿ ಶಾಲೆಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಲು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳು ದಿಢೀರ್‌ ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ. ನಾನು ಈ ಹಿಂದೆ ಕೆಲ ಶಾಲೆಗಳಿಗೆ ಭೇಟಿ ನೀಡಿದ್ದಾಗ ಲೋಪ ಕಂಡುಬಂದಿತ್ತು. ಕಳಪೆ ಆಹಾರ ಪದಾರ್ಥ ವಿತರಿಸುತ್ತಿರುವುದನ್ನು ಗಮಿಸಿದ್ದೇನೆ. ಈ ಬಾರಿ ಶಾಲೆಗೆ ಭೇಟಿ ನೀಡಿದಾಗ ಲೋಪ ಕಂಡುಬಂದರೆ ಸಿಆರ್‌ಪಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಬಿಸಿಯೂಟ ಯೋಜನೆಗೆ ಅಗತ್ಯವಿರುವ ಸೌಕರ್ಯಗಳನ್ನು ಶಾಲೆಗಳಿಗೆ ಕಲ್ಪಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ‘ಶಾಲೆಗಳಲ್ಲಿ ನೀರಿನ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತನ್ನ. ಅಂತಹ ಶಾಲೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುತ್ತೇವೆ. ಕಾಟಾಚಾರಕ್ಕೆ ಬಿಸಿಯೂಟ ಯೋಜನೆ ನಡೆಸಬಾರದು. ನಾನು ಶಾಲೆಗಳಿಗೆ ಭೇಟಿ ನೀಡಿದಾಗ ಮಕ್ಕಳಿಂದ ದೂರು ಬಂದರೆ ಶಿಕ್ಷಕರು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಬಾಲಾಜಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT