ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಭವಿಷ್ಯ ರೂಪಿಸುವ ಶಿಕ್ಷಣ ನೀಡಿ

ಶೈಕ್ಷಣಿಕ ಸಮಾವೇಶದಲ್ಲಿ ಶಿಕ್ಷಕರಿಗೆ ಸಂಸದ ಮುನಿಯಪ್ಪ ಕಿವಿಮಾತು
Last Updated 2 ಫೆಬ್ರುವರಿ 2019, 13:00 IST
ಅಕ್ಷರ ಗಾತ್ರ

ಕೋಲಾರ: ‘ಖಾಸಗಿ ಶಾಲೆಗಳಲ್ಲಿ ಸಂಬಳ ಮತ್ತು ಸೌಲಭ್ಯ ಕಡಿಮೆಯಿದ್ದರೂ ಶಿಕ್ಷಕರು ಧೃತಿಗೆಡದೆ ಮಕ್ಕಳಲ್ಲಿ ತಾರತಮ್ಯ ಮಾಡದೆ ದೇಶದ ಭವಿಷ್ಯ ರೂಪಿಸುವ ಶಿಕ್ಷಣ ನೀಡಬೇಕು’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಕಿವಿಮಾತು ಹೇಳಿದರು.

ಕರ್ನಾಟಕ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್‌ ಆಫ್ ಸ್ಕೂಲ್ಸ್ (ಕ್ಯಾಮ್ಸ್) ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿ, ‘ಸರ್ಕಾರಿ ಶಾಲಾ ಶಿಕ್ಷಕರಿಗೆ ಸರ್ಕಾರ ಎಲ್ಲಾ ರೀತಿಯ ಸವಲತ್ತು ಕಲ್ಪಿಸಿದೆ. ಜತೆಗೆ ಹೆಚ್ಚಿನ ಸಂಬಳವಿದೆ. ಆದರೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣವಿಲ್ಲ’ ಎಂದು ವಿಷಾದಿಸಿದರು.

‘ಉತ್ತರ ಭಾರತದಲ್ಲಿ ವೈದ್ಯಕೀಯ ಕಾಲೇಜಗಳಿಲ್ಲದ ಕಾರಣ ಆ ಭಾಗದ ವಿದ್ಯಾರ್ಥಿಗಳು ದಕ್ಷಿಣ ಭಾರತಕ್ಕೆ ವಲಸೆ ಬಂದು ಓದುವ ಸ್ಥಿತಿಯಿತ್ತು. ಅಂತಹ ಸಂದರ್ಭದಲ್ಲಿ ಯುಪಿಎ ಸರ್ಕಾರ ಸುಮಾರು ₹ 150 ಕೋಟಿ ವೆಚ್ಚದಲ್ಲಿ ಆ ಭಾಗದಲ್ಲಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಮುನ್ನುಡಿ ಬರೆಯಿತು’ ಎಂದು ಹೇಳಿದರು.

‘ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆ ಬಗೆಹರಿಸಲು ಮತ್ತು ಇಡೀ ದೇಶದಲ್ಲಿ ಏಕರೂಪ ಶಿಕ್ಷಣ ಇರಬೇಕೆಂಬ ಬಗ್ಗೆ ಚರ್ಚಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವರ ಭೇಟಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿ, ಶಿಕ್ಷಣ ಸಚಿವರ ಜತೆ ಚರ್ಚಿಸಲು ವೇದಿಕೆ ಕಲ್ಪಿಸುತ್ತೇನೆ’ ಎಂದು ಭರವಸೆ ನೀಡಿದರು.

ತಿಳಿವಳಿಕೆ ಇಲ್ಲ: ‘ಶಿಕ್ಷಣ ಇಲಾಖೆ ಅಧಿಕಾರಿಗಳ ಅನುಮತಿ ಕೇಳಿ ಶೈಕ್ಷಣಿಕ ಸಮಾವೇಶ ಮಾಡಬೇಕಿಲ್ಲ. ಇದು ಕೂಡ ಅವರದೇ ಕಾರ್ಯಕ್ರಮ. ಎಲ್ಲಿ ಓದಿದರೂ ಶಿಕ್ಷಣ ಇಲಾಖೆಗೆ ಗೌರವ ಬರುತ್ತದೆ ಎಂಬ ತಿಳಿವಳಿಕೆ ಅಧಿಕಾರಿಗಳಿಗೆ ಇಲ್ಲವಾಗಿದೆ’ ಎಂದು ಕ್ಯಾಮ್ಸ್ ಗೌರವಾಧ್ಯಕ್ಷ ಪುಟ್ಟಣ್ಣ ಕಳವಳ ವ್ಯಕ್ತಪಡಿಸಿದರು.

‘ಸರ್ಕಾರಿ ಶಾಲೆಗಳಲ್ಲಿ ಅನುಭವಿ ಶಿಕ್ಷಕರಿದ್ದಾರೆ. ಸರ್ಕಾರ ಅವರಿಗೆ ಪಠ್ಯ ಬೋಧನೆ ಜತೆಗೆ ಬೇರೆ ಬೇರೆ ಕೆಲಸ ವಹಿಸಿ ಫಲಿತಾಂಶ ಕುಸಿಯುವಂತೆ ಮಾಡುತ್ತಿದೆ. ಸರಿಯಾದ ನೀತಿ ನಿಯಮ ರೂಪಿಸಿದರೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ ತರಲು ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.

‘ಖಾಸಗಿ ಶಾಲೆಗಳ ಆಡಳಿತ ಮಂಡಳಿಗೆ ಡಿಡಿಪಿಐ ಮತ್ತು ಬಿಇಒಗಳ ಕಿರುಕುಳ ಜಾಸ್ತಿಯಾಗದೆ. ಇವರು ಕಡಿಮೆ ಫಲಿತಾಂಶ ಬರುವ ಸರ್ಕಾರಿ ಶಾಲೆಗೆ ಹೋಗುವುದಿಲ್ಲ. ಏಕೆಂದರೆ ಆ ಶಾಲೆಗಳಿಗೆ ಹೋದರೆ ಯಾವುದೇ ಹಣ ಸಿಗುವುದಿಲ್ಲ ಎಂಬ ಭಾವನೆ ಅಧಿಕಾರಿಗಳಲ್ಲಿದೆ. ದೇವರು ನನಗೆ ಅವಕಾಶ ಕೊಟ್ಟರೆ ಡಿಡಿಪಿಐ ಮತ್ತು ಬಿಇಒಗಳು ಖಾಸಗಿ ಶಾಲೆಗಳಿಗೆ ಬರದಂತೆ ಮುಕ್ತಿ ಕೊಡಿಸುತ್ತೇನೆ’ ಎಂದರು.

ಶುಲ್ಕ ಬಾಕಿಯಿದೆ: ‘ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ದಾಖಲಾದ ವಿಧ್ಯಾರ್ಥಿಗಳ ಸುಮಾರು ₹ 800 ಕೋಟಿ ಶುಲ್ಕ ಬಾಕಿಯಿದೆ. ಸರ್ಕಾರ ಸಕಾಲಕ್ಕೆ ಶುಲ್ಕ ಬಾಕಿ ಬಿಡುಗಡೆ ಮಾಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಂಸ್ಥೆಗಳನ್ನು ನಡೆಸುವುದು ಹೇಗೆ? ಸಾಕಷ್ಟು ಸಮಸ್ಯೆ ನಡುವೆಯೂ ರಾಜ್ಯದಲ್ಲಿ ಲಕ್ಷಾಂತರ ಶಿಕ್ಷಕರಿಗೆ ಉದ್ಯೋಗ ನೀಡಿದ್ದೇವೆ’ ಎಂದು ಕ್ಯಾಮ್ಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹೇಳಿದರು.

‘ರಾಜ್ಯದಲ್ಲಿ ಮಕ್ಕಳಿಗೆ ಮನೆಯ ಹತ್ತಿರದಲ್ಲೇ ಸರ್ಕಾರಿ ಅಥವಾ ಖಾಸಗಿ ಶಾಲೆಗಳು ಸಿಗುತ್ತವೆ. ಈ ಹಿಂದೆ ಮಕ್ಕಳು ಕಿಲೋ ಮೀಟರ್‌ಗಟ್ಟಲೇ ನಡೆದು ಹೋಗಿ ಶಿಕ್ಷಣ ಪಡೆಯಬೇಕಿತ್ತು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆಯ ಕಾರಣಕ್ಕೆ ಪೋಷಕರು ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

ನಿಯಮ ರೂಪಿಸಲಿ: ‘ಆರ್ಥಿಕವಾಗಿ ಬಲವಿಲ್ಲದ ಖಾಸಗಿ ಶಾಲಾ ಶಿಕ್ಷಕರಿಗೆ ಸರ್ಕಾರ ಸಂಬಳ ಕೊಟ್ಟು ಶಿಕ್ಷಣ ಕ್ಷೇತ್ರ ಸುಧಾರಿಸುವ ಕೆಲಸ ಮಾಡಬೇಕು. ಶಾಲಾ ಕಾರ್ಯಕ್ರಮದಲ್ಲಿ ಚಲನಚಿತ್ರ ಗೀತೆಗಳಿಗೆ ನಿರ್ಬಂಧ ಹೇರಲಾಗಿದೆ. ಇದರಿಂದ ಮಕ್ಕಳ ಪ್ರತಿಭೆ ಗುರುತಿಸುವುದು ಕಷ್ಟವಾಗುತ್ತಿದೆ. ಡಿಡಿಪಿಐ ಮತ್ತು ಬಿಇಒಗಳು ಖಾಸಗಿ ಶಾಲೆಗಳಿಗೆ ಹೋಗದಂತೆ ನಿಯಮ ರೂಪಿಸಬೇಕು’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ರಮೇಶ್‌ಬಾಬು ಒತ್ತಾಯಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ, ಕ್ಯಾಮ್ಸ್ ಜಿಲ್ಲಾ ಅಧ್ಯಕ್ಷ ಎ.ಸದಾನಂದ, ರಾಜ್ಯ ಕಾರ್ಯಕಾರಿ ಸದಸ್ಯರಾದ ಎಂ.ಮಲ್ಲೇಶ್‌ಬಾಬು, ನಟೇಶ್, ರೇಣುಕೇಶ್, ಸಹ್ಯಾದ್ರಿ ವಿದ್ಯಾ ಸಂಸ್ಥೆ ಅಧ್ಯಕ್ಷ ಉದಯ್‌ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT