ಸೋಮವಾರ, ನವೆಂಬರ್ 18, 2019
24 °C
ಆರ್ಯವೈಶ್ಯ ಸಮುದಾಯಕ್ಕೆ ಮಾಜಿ ಸಂಸದ ಕಿವಿಮಾತು

ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡಿ: ಮುನಿಯಪ್ಪ

Published:
Updated:
Prajavani

ಕೋಲಾರ: ‘ಆರ್ಯವೈಶ್ಯ ಸಮುದಾಯದವರು ವ್ಯಾಪಾರದ ಜತೆಗೆ ಶೈಕ್ಷಣಿಕವಾಗಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮುಂಚೂಣಿಗೆ ಬಂದು ಆಡಳಿತ ನಡೆಸುವಂತಾಗಬೇಕು’ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಕಿವಿಮಾತು ಹೇಳಿದರು.

ರಾಜ್ಯ ಆರ್ಯವೈಶ್ಯ ಮಹಾಸಭಾ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪ್ರತಿಭೋತ್ಸವ ಸಮಾರಂಭದ ಭಾಗವಾಗಿ ನಡೆದ ಪ್ರತಿಭಾವಂತ ಮಕ್ಕಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ‘ಆರ್ಯವೈಶ್ಯ ಸಮುದಾಯದವರು ವ್ಯಾಪಾರದ ಜತೆಗೆ ಮಕ್ಕಳ ಶಿಕ್ಷಣಕ್ಕೂ ಆದ್ಯತೆ ಕೊಡಿ’ ಎಂದು ಹೇಳಿದರು.

‘ಮಕ್ಕಳನ್ನು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳನ್ನಾಗಿಸಿ ಆಡಳಿತದಲ್ಲಿ ಭಾಗಿದಾರರಾಗಿ ಮಾಡಿ. ಅದೇ ರೀತಿ ರಾಜಕೀಯವಾಗಿ ಮುಖ್ಯವಾಹಿನಿಗೆ ಬನ್ನಿ. ಶನಿವಾರ ಶ್ರೀನಿವಾಸ ಕಲ್ಯಾಣೋತ್ಸವ ನಡೆದ ನಂತರ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಸಮುದಾಯದ ಸೇವೆ ಭಗವಂತನಿಗೆ ತಲುಪಿದೆ. ಭಗವಂತನ ಸೇವೆ ಮುಂದುವರಿಸಿ’ ಎಂದು ತಿಳಿಸಿದರು.

‘ಜಿಲ್ಲೆಯು ಸತತ ಬರಗಾಲ ಎದುರಿಸುತ್ತಿದೆ. ಈ ವರ್ಷ ಸಹ ಮಳೆಯಾಗಿರಲಿಲ್ಲ. ಶ್ರೀನಿವಾಸ ಕಲ್ಯಾಣೋತ್ಸವದ ಸಂದರ್ಭದಲ್ಲಿ ಒಳ್ಳೆಯ ಮಳೆಯಾಗಿದ್ದು, ರೈತರ ಆತಂಕ ದೂರವಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸಂತಸ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಮೆರವಣಿಗೆ: ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ, ಉನ್ನತ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ ಆರ್ಯವೈಶ್ಯ ಸಮುದಾಯದ ವಿದ್ಯಾರ್ಥಿಗಳನ್ನು ಬೆಳ್ಳಿ ಪಲ್ಲಕಿ, ಸಾರೋಟು, ಕುದುರೆ ಮೇಲೆ ಕೂರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಉದ್ದಕ್ಕೂ ಪಟಾಕಿ ಸಿಡಿಸಿ ವಿದ್ಯಾರ್ಥಿಗಳ ಮೇಲೆ ಪುಷ್ಪವೃಷ್ಠಿ ಸುರಿಸಲಾಯಿತು. ಡೊಳ್ಳು ಕುಣಿತ ಹಾಗೂ ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ವಾಸವಿ ಕನ್ನಿಕಾ ಪರಮೇಶ್ವರಿ ದೇವಿಯನ್ನು ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಮುದಾಯದ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಹಾಜರಿದ್ದರು.

 

ಪ್ರತಿಕ್ರಿಯಿಸಿ (+)