ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಶಾಸಕ ಕೆ.ಶ್ರೀನಿವಾಸಗೌಡ

Last Updated 26 ಜನವರಿ 2019, 14:40 IST
ಅಕ್ಷರ ಗಾತ್ರ

ಕೋಲಾರ: ‘ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

ಗಣರಾಜ್ಯೋತ್ಸವ ಅಂಗವಾಗಿ ಇಲ್ಲಿನ ಆದರ್ಶ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕುವೆಂಪು ಸಂಸ್ಮರಣೆ ಮತ್ತು ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ‘ಪೋಷಕರು ತಮ್ಮ ಮಕ್ಕಳನ್ನು ಸತ್ಪ್ರಜೆಗಳಾಗಿಸುವ ಕನಸಿನೊಂದಿಗೆ ಕಾಲೇಜಿಗೆ ಕಳುಹಿಸುತ್ತಾರೆ. ಮಕ್ಕಳು ಜವಾಬ್ದಾರಿ ಓದಬೇಕು’ ಎಂದು ಕಿವಿಮಾತು ಹೇಳಿದರು.

‘ಪೋಷಕರಿಗೆ ಎಷ್ಟೇ ಕಷ್ಟವಿದ್ದರೂ ಶಿಕ್ಷಣ ಕೊಡಿಸಬೇಕೆಂದು ಕೂಲಿ ಮಾಡಿ ಮಕ್ಕಳನ್ನು ಓದಿಸುತ್ತಿದ್ದಾರೆ. ಐಎಎಸ್‌, ಐಪಿಎಸ್ ಅಧಿಕಾರಿಯಾದರೆ ಗೌರವ ಹೆಚ್ಚುತ್ತದೆ. ವಿದ್ಯಾರ್ಥಿಗಳು ಒಳ್ಳೆಯ ಆಲೋಚನೆ ಮಾಡಬೇಕು. ಜತೆಗೆ ಉತ್ತಮ ಸಮಾಜ ನಿರ್ಮಾಣ ಮಾಡಬೇಕು’ ಎಂದರು.

‘ಹಿಂದಿನ ಶಿಕ್ಷಕರಿಗೂ ಈಗಿನ ಶಿಕ್ಷಕರಿಗೂ ತುಂಬಾ ವ್ಯತ್ಯಾಸವಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಹಣ ಸಂಪಾದನೆಯೇ ಮುಖ್ಯವಾಗಿದೆ. ಶಿಕ್ಷಣ ಸಂಸ್ಥೆಗಳ ಮಾಲೀಕರು ಹಣಕ್ಕಾಗಿ ಪೋಷಕರು ಹಾಗೂ ಮಕ್ಕಳನ್ನು ಶೋಷಿಸುತ್ತಿದ್ದಾರೆ. ವಂತಿಗೆ ಹಾವಳಿ ಕಾರಣಕ್ಕೆ ಬಡ ಪ್ರತಿಭಾವಂತ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಸಮಾಜಕ್ಕೆ ಪ್ರಸ್ತುತ: ‘ರಾಷ್ಟ್ರಕವಿ ಕುವೆಂಪು ಮಹಾನ್ ಕವಿಗಳ ಸಾಲಿನಲ್ಲಿ ಸ್ಥಾನಮಾನ ಪಡೆದಿದ್ದಾರೆ. ಅವರ ವಿಶ್ವಮಾನವ ಚಿಂತನೆ ಹಾಗೂ ಸಾಹಿತ್ಯದಲ್ಲಿನ ವಿಚಾರಗಳು ಸಮಾಜಕ್ಕೆ ಪ್ರಸ್ತುತ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಎಂ.ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು.

‘ಕುವೆಂಪುರ ಸಾಹಿತ್ಯದಲ್ಲಿ ಜಾತಿ, ಧರ್ಮ, ಲಿಂಗ ಭೇದ ಮೀರಿದ ಚಿಂತನೆ ಕಾಣಬಹುದು. 20ನೇ ಶತಮಾನದ ಸಾಂಸ್ಕೃತಿಕ ಬದುಕನ್ನು ವೈಚಾರಿಕತೆಯ ನೆಲೆಗಟ್ಟಿನಲ್ಲಿ ಕಟ್ಟಿಕೊಟ್ಟ ಅವರು ಕಾಡಿನ ಕವಿ ಎಂದು ಹೆಸರುವಾಸಿಯಾಗಿದ್ದರು. ಈ ಕಾಡಿನ ಕವಿ ರಾಷ್ಟ್ರಕವಿಯಾಗಿ ಹೊರಹೊಮ್ಮಿದರು’ ಎಂದು ಸ್ಮರಿಸಿದರು.

ಕಾಲೇಜಿನ ಪ್ರಾಂಶುಪಾಲ ವಿ.ಶ್ರೀರಾಮ, ಕೆಜಿಎಫ್ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಬಿ.ಶಿವಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT